×
Ad

ಹಿಂದಿ ಭಾಷೆಯನ್ನು ವಿರೋಧಿಸುವವರು ಮೂಲ ಕನ್ನಡಿಗರಲ್ಲ: ಚಿರಂಜೀವಿ ಸಿಂಗ್

Update: 2018-01-30 20:01 IST

ಬೆಂಗಳೂರು, ಜ.30: ಹಿಂದಿ ಭಾಷೆಯನ್ನು ವಿರೋಧಿಸುವವರು ಮೂಲ ಕನ್ನಡಿಗರಾಗಿರಲು ಸಾಧ್ಯವೇ ಇಲ್ಲ. ಕನ್ನಡಿಗರ ಹೆಸರಿನಲ್ಲಿ ಕನ್ನಡೇತರರು ಹಿಂದಿ ಭಾಷೆಯನ್ನು ವಿರೋಧಿಸುವುದು, ಹಿಂದಿ ಭಾಷೆಯ ನಾಮ ಫಲಕಗಳಿಗೆ ಮಸಿ ಬಳಿಯುವಂತಹ ದುಷ್ಕೃತ್ಯದಲ್ಲಿ ತೊಡಗಿದ್ದಾರೆ ಎಂದು ಸಂಸ್ಕೃತಿ ಚಿಂತಕ ಚಿರಂಜೀವಿ ಸಿಂಗ್ ಆತಂಕ ವ್ಯಕ್ತಪಡಿಸಿದರು.

ಮಂಗಳವಾರ ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್ ನಗರದ ಎನ್‌ಎಂಕೆಆರ್‌ವಿ ಕಾಲೇಜಿನ ಮಂಗಳ ಮಂಟಪದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ 12 ಸಾಧಕರಿಗೆ ‘ಶಾಶ್ವತಿ’ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಕನ್ನಡ ನಾಡಿನಲ್ಲಿ ಹಿಂದಿ ವಿರೋಧಿ ಅಲೆ ಏಳುತ್ತಿರುವುದು ಅಚ್ಚರಿ ತರಿಸಿದೆ. ಹಾಗೂ ನನ್ನಂತಹ ಅನ್ಯಭಾಷಿಕರಾಗಿದ್ದು, ಕನ್ನಡವನ್ನು ಅಪಾರವಾಗಿ ಪ್ರೀತಿಸುವವರಿಗೆ ಅತೀವ ನೋವಾಗಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಈ ಬಗ್ಗೆ ಮೂಲ ಕನ್ನಡಿಗರು ಆತ್ಮವಿಮರ್ಶೆ ಮಾಡಿಕೊಂಡು, ಹಿಂದಿ ವಿರೋಧಿಸುವವರನ್ನು ಹಾಗೆ ಮಾಡದಂತೆ ತಡೆಯಬೇಕಾಗಿದೆ ಎಂದು ಅವರು ಹೇಳಿದರು.

ನಿಜವಾದ ಕನ್ನಡಿಗ ವಿಶಾಲ ಹೃದಯದವನಾಗಿರುತ್ತಾನೆ. ತನ್ನ ಭಾಷೆಯನ್ನು ಪ್ರೀತಿಸುವುದರ ಜೊತೆಗೆ ಅನ್ಯ ಭಾಷೆಯನ್ನು ಅಪ್ಪಿಕೊಳ್ಳಲು ಸಿದ್ಧನಾಗಿರುತ್ತಾನೆ. ಭಾರತ ಭಾಷೆಗಳ ತವರೂರು. ಇಲ್ಲಿ ಎಲ್ಲ ಭಾಷೆಗೂ ಸಮಾನವಾದ ಗೌರವ, ಪ್ರಾಶಸ್ತ್ಯ ಸಿಗಬೇಕು. ಯಾವ ಭಾಷೆಯೂ ಮತ್ತೊಂದು ಭಾಷೆಯ ಎದುರಿಗೆ ಮೇಲಲ್ಲ, ಕೀಳಲ್ಲ ಎಂಬುದನ್ನು ನಾವೆಲ್ಲರೂ ತಿಳಿಯಬೇಕಾಗಿದೆ ಎಂದು ಅವರು ಆಶಿಸಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್ ಕೇವಲ ಕನ್ನಡಿಗರಿಗೆ ಮಾತ್ರ ‘ಶಾಶ್ವತಿ’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸುತ್ತಿಲ್ಲ. ದೇಶದ ಹಲವು ಭಾಷೆಗಳ ಸಾಧಕರಿಗೆ ನೀಡಿ ಸನ್ಮಾನಿಸುತ್ತಿದೆ. ಇದು ಕನ್ನಡ ನಾಡಿನ ನಿಜವಾದ ಸಂಸ್ಕೃತಿಯಾಗಿದ್ದು, ದೇಶಕ್ಕೆ ಮಾದರಿಯಾಗಿದೆ ಎಂದು ಅವರು ಹೇಳಿದರು. ಈ ವೇಳೆ ಎನ್‌ಎಂಕೆಆರ್‌ವಿ ಕಾಲೇಜಿನ ಎಂ.ಕೆ.ಪಾಂಡುರಂಗ ಶೆಟ್ಟಿ ಉಪಸ್ಥಿತರಿದ್ದರು.

ಪ್ರಶಸ್ತಿ ಪುರಸ್ಕತರು
-ನಂಜನಗೂಡು ತಿರುಮಲಾಂಬ ಪ್ರಶಸ್ತಿಗೆ ಬಂಗಾಳಿ ಲೇಖಕಿ ನಬನೀತಾ ದೇವಸ್ ಸೇನ್, ಹಿಂದಿ ಲೇಖಕಿ ಅಂಜನಾ ಸಂಧೀರ್ ಹಾಗೂ ತೆಲಗು ಲೇಖಕಿ ಪಿ.ಸತ್ಯವತಿ ಭಾಜನರಾದರು.

-ಸದೋದಿತಾ ಪ್ರಶಸ್ತಿಯನ್ನು ಲೇಖಕಿ ಎಲ್.ವಿ.ಶಾಂತಕುಮಾರಿ, ವಿಮಲಾ ರಾಮರಾವ್, ಮೈಸೂರಿನ ಟಿ.ಎನ್.ನಾಗರತ್ನ ಪಡೆದುಕೊಂಡರು.

-ಕರ್ನಾಟಕ ಕಲ್ಪವಲ್ಲಿ ಪ್ರಶಸ್ತಿಯನ್ನು ಹೋರಾಟಗಾರರಾದ ಎ.ಪಂಕಜ, ಹನುಮಾಕ್ಷಿ ಗೋಗಿ, ವೈ.ಎಸ್.ಪವಿತ್ರಾಗೆ ನೀಡಲಾಯಿತು.

-ಗಾರ್ಗಿ ಪ್ರಶಸ್ತಿಯನ್ನು ಯಮುನಾ ರಾಜಾರಾವ್, ಶ್ರೀಲಕ್ಷ್ಮಿ ಮಂಜುನಾಥರಾವ್, ಶಾಂತಾ ಇಮ್ರಾಪುರಗೆ ಪ್ರದಾನ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News