×
Ad

ಪೂಜಾ ಕೊಲೆ ಪ್ರಕರಣ: ಚುರುಕಿನ ತನಿಖೆಗೆ ಆದೇಶ; ಈಶ್ವರ್‌ ಖಂಡ್ರೆ

Update: 2018-01-30 20:49 IST

ಬೀದರ್, ಜ.30: ವಿದ್ಯಾರ್ಥಿನಿ ಪೂಜಾ ಹಡಪದ್ ಕೊಲೆ ಪ್ರಕರಣ ಖಂಡನೀಯ. ಈ ಪ್ರಕರಣದ ತನಿಖೆಯನ್ನು ಚುರುಕಿನಿಂದ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ಮಂಗಳವಾರ ಭಾಲ್ಕಿ ತಾಲೂಕಿನ ಕೋಸಂ ಗ್ರಾಮದಲ್ಲಿರುವ ಪೂಜಾ ನಿವಾಸಕ್ಕೆ ಭೇಟಿ ನೀಡಿದ ಅವರು, ಆಕೆಯ ಪೋಷಕರಿಗೆ ಸಾಂತ್ವನ ಹೇಳಿದ್ದಲ್ಲದೆ, ವೈಯಕ್ತಿಕವಾಗಿ 1.25 ಲಕ್ಷ ರೂ.ಪರಿಹಾರ ನೀಡಿದರು. ಅಲ್ಲದೆ, ಸರಕಾರದ ವತಿಯಿಂದ ಹೆಚ್ಚುವರಿ ಪರಿಹಾರ ಕೊಡಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಈ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ತಕ್ಕ ಕಠಿಣ ಶಿಕ್ಷೆಯಾಗಲೇಬೇಕು. ಪೊಲೀಸರಿಗೆ ಆದಷ್ಟು ಬೇಗ ತನಿಖೆ ಪೂರ್ಣಗೊಳಿಸುವಂತೆ ನಿರ್ದೇಶಿಸಲಾಗಿದೆ. ಆಕೆಯ ಕುಟುಂಬ ಮತ್ತು ಸಮಸ್ತ ಸಮಾಜಕ್ಕೆ ಈ ಘಟನೆಯು ಅತ್ಯಂತ ನೋವಿನ ಸಂಗತಿಯಾಗಿದೆ. ನಾನು ಮತ್ತು ನಮ್ಮ ಸರಕಾರ ಅವರ ಕುಟುಂಬದವರ ಜೊತೆ ಇದ್ದೇವೆ ಮತ್ತು ಅವರಿಗೆ ಎಲ್ಲಾ ರೀತಿಯ ಭದ್ರತೆ ಒದಗಿಸುವಂತೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.

ಘಟನೆಯ ಹಿನ್ನೆಲೆಯಲ್ಲಿ ಸಮಾಜದಲ್ಲಿ ವ್ಯಾಪಕ ಖಂಡನೆ, ಪ್ರತಿಭಟನೆಗಳು ವ್ಯಕ್ತವಾಗಿದ್ದು, ಇದು ಸಹಜವಾದರೂ ಸಮಾಜದ ಮುಖಂಡರು, ಯುವಕರು ಯಾವುದೇ ಬಗೆಯ ಅಹಿತಕರ ಘಟನೆಗೆ ಅವಕಾಶ ನೀಡದೆ ಶಾಂತಿಯನ್ನು ಕಾಪಾಡಬೇಕು ಎಂದು ಈಶ್ವರ ಖಂಡ್ರೆ ಮನವಿ ಮಾಡಿದರು.

ಸಮಾಜದಲ್ಲಿ ಇಂತಹ ಘಟನೆಗಳು ನಡೆಯಬಾರದು. ಇಂದಿನ ಸಮಾಜದ ಶಕ್ತಿಯಂತಿರುವ ಯುವಕರಲ್ಲಿ ಆದರ್ಶ ಮೌಲ್ಯಗಳು, ಉತ್ತಮ ಸಂಸ್ಕಾರಗಳು ಬಿತ್ತಿ ಬೆಳೆಸುವುದು ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಮುಂದಾಗಿ ಕಾರ್ಯ ಮಾಡಬೇಕಾಗಿದೆ ಎಂದು ಅವರು ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News