ಫೆ.4 ರಂದು ಪಿಯುಸಿ ವಿದ್ಯಾರ್ಥಿಗಳಿಗಾಗಿ ಪರೀಕ್ಷಾ ಮಾಹಿತಿ, ಸಂವಾದ
ಬೆಂಗಳೂರು, ಜ.30: ರಾಜ್ಯ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ವತಿಯಿಂದ ದ್ವಿತೀಯ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಿಕ್ಷಣ ಸಚಿವರೊಂದಿಗಿನ ಸಂವಾದ, ವಿಜ್ಞಾನ ವಿಷಯ ತಜ್ಞರಿಂದ ಪರೀಕ್ಷಾ ಮಾಹಿತಿ ಮತ್ತು ಶೈಕ್ಷಣಿಕ ಒತ್ತಡ ನಿವಾರಣೆಗಾಗಿ ನೇರ ಸಂವಾದ ಕಾರ್ಯಕ್ರಮವನ್ನು ಫೆ.4 ರಂದು ಆಯೋಜಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಕೆ.ಟಿ.ಶ್ರೀಕಂಠೇಗೌಡ, ಕಾರ್ಯಕ್ರಮವು ಜಯನಗರದ ಎನ್‌ಎಂಕೆಆರ್‌ವಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದ್ದು, ರಾಜ್ಯದಲ್ಲಿ ಇದೇ ಪ್ರಥಮ ಬಾರಿಗೆ ಈ ರೀತಿಯ ಕಾರ್ಯಕ್ರಮ ನಡೆಯುತ್ತಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ವಿಜ್ಞಾನ ವಿಷಯ ತಜ್ಞರು, ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ, ಜೀವಶಾಸ್ತ್ರ ವಿಷಯಗಳಿಗೆ ಸಂಬಂಧಿಸಿದಂತೆ ಪರೀಕ್ಷಾ ಸಿದ್ಧತೆ, ವಿಷಯಗಳ ಗ್ರಹಿಕೆ, ನೆನಪಿನಲ್ಲಿಟ್ಟುಕೊಳ್ಳುವ ಕ್ರಿಯೆ, ಉತ್ತರಿಸುವ ವಿಧಾನ ಹಾಗೂ ಹೆಚ್ಚು ಅಂಕಗಳಿಸುವ ವಿಧಾನ ಕುರಿತಂತೆ ವಿದ್ಯಾರ್ಥಿಗಳೊಂದಿಗೆ ನೇರ ಸಂವಾದ ನಡೆಸಲಿದ್ದಾರೆ. ಪರೀಕ್ಷಾ ಒತ್ತಡಕ್ಕೆ ಒಳಗಾಗುವ ವಿದ್ಯಾರ್ಥಿಗಳಿಗೆ ಸೂಕ್ತ ಸಲಹೆ ನೀಡುವ ಮೂಲಕ ಒತ್ತಡ ನಿವಾರಣೆ ಮಾಡಲಾಗುವುದು ಎಂದು ಅವರು ತಿಳಿಸಿದರು.
ಸಂವಾದ ಕಾರ್ಯಕ್ರಮವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಉದ್ಘಾಟಿಸಿ ಒಂದು ಗಂಟೆಗೂ ಹೆಚ್ಚು ಕಾಲ ವಿದ್ಯಾರ್ಥಿಗಳೊಂದಿಗೆ ನೇರ ಸಂವಾದ ನಡೆಸಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಂಘದ ಮುಖಂಡರಾದ ಮಂಜುನಾಥ್, ಎಚ್.ಬಿ. ಪ್ರಕಾಶ್, ಎಂ.ನಾಗರಾಜ್, ತಿಮ್ಮಯ್ಯ, ಶಂಕರ್ ಉಪಸ್ಥಿತರಿದ್ದರು.