ತಳಮಟ್ಟದಿಂದ ಪಕ್ಷ ಬಲವರ್ಧನೆ: ಪರಮೇಶ್ವರ್

Update: 2018-01-30 17:13 GMT

ಬೆಂಗಳೂರು, ಜ.30: ರಾಜ್ಯದಲ್ಲಿ ಮುಂದಿನ ವಿಧಾನಸಭಾ ಹಿನ್ನೆಲೆಯಲ್ಲಿ ತಳಮಟ್ಟದಿಂದ ಪಕ್ಷ ಬಲವರ್ಧನೆ ಮಾಡಲಾಗುತ್ತಿದೆ. ಹೀಗಾಗಿ ಸಾಮಾಜಿಕ ಜಾಲತಾಣವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಪಕ್ಷದ ಮುಖಂಡರಿಗೆ ಸೂಚನೆ ನೀಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಮಂಗಳವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳ ಸಭೆ ಕರೆಯಲಾಗಿತ್ತು. ಬೂತ್ ಮಟ್ಟದಿಂದ ಪಕ್ಷ ಸಂಘಟನೆ ಮಾಡಲು ಸಹಕಾರಿಯಾಗುವಂತೆ ಸಾಮಾಜಿಕ ಜಾಲತಾಣಗಳಲ್ಲ್ಲಿ ಪ್ರತಿದಿನ ಸಂಪರ್ಕದಲ್ಲಿರುವಂತೆ ಬ್ಲಾಕ್ ಅಧ್ಯಕ್ಷರು, ಜಿಲ್ಲಾಧ್ಯಕ್ಷರಿಗೆ ಸೂಚನೆ ನೀಡಲಾಗಿದೆ ಎಂದರು.

ಈ ಹಿಂದೆ 54,264 ಬೂತ್‌ಗಳಿದ್ದವು, ಇದೀಗ 57 ಸಾವಿರ ಬೂತ್ ಸಮಿತಿಗಳನ್ನು ರಚಿಸಲಾಗಿದೆ. ಇವುಗಳ ಜೊತೆಗೆ ಬ್ಲಾಕ್ ಸಮಿತಿಗಳನ್ನು ರಚಿಸಲಾಗಿದ್ದು, ಸಮಿತಿ ಸದಸ್ಯರ ವಾಟ್ಸಾಪ್ ಸಂಖ್ಯೆ, ಭಾವಚಿತ್ರ, ವಿಳಾಸ ಪಡೆಯಲಾಗಿದೆ. ಚುನಾವಣೆ ಸಮಯದಲ್ಲಿ ವ್ಯಾಟ್ಸಾಪ್ ಮೂಲಕ ಸದಾ ಸಂಪರ್ಕದಲ್ಲಿರುವಂತೆ ಸೂಚನೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಇವಿಎಂ ಯಂತ್ರಗಳ ಕಾರ್ಯ ವಿಧಾನದ ಬಗ್ಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಮತದಾನ ಪ್ರಾರಂಭಕ್ಕೂ ಮುನ್ನ ಸ್ಟಾರ್ಟ್‌, ರಿಸೆಟ್, ಸೀಲ್, ಪೋಲಿಂಗ್ ಬಗ್ಗೆ ತಂತ್ರಜ್ಞರಿಂದ ಮಾಹಿತಿ ಕೊಡಿಸಲಾಗಿದೆ ಎಂದರು.

ನಮ್ಮ ಕ್ಷೇತ್ರ ನಮ್ಮ ಹೊಣೆ: ಮುಖ್ಯಮಂತ್ರಿ, ಅಧ್ಯಕ್ಷರು ಸೇರಿ ಯಾರೇ ಮುಖಂಡರಾಗಲಿ ಚುನಾವಣೆ ಸಂದರ್ಭದಲ್ಲಿ ಅವರ ಬೂತ್‌ಗಳಲ್ಲಿ ಹೆಚ್ಚು ಮತಗಳು ಬರುವಂತೆ ನೋಡಿಕೊಳ್ಳಬೇಕು ಎಂದ ಅವರು, ಪಕ್ಷದ ಪರ ಪ್ರಚಾರ, ರಾಜ್ಯ ಸರಕಾರ ಕಾರ್ಯಕ್ರಮಗಳ ಪ್ರಚಾರದ ಬಗ್ಗೆ ವಾಟ್ಸಾಪ್ ಅನುಕೂಲವಾಗಲಿದೆ. ವಾಟ್ಸಾಪ್ ಗ್ರೂಪ್‌ಗೆ ‘ನಮ್ಮ ಕ್ಷೇತ್ರ ನಮ್ಮ ಹೊಣೆ’ ಎಂದು ಹೆಸರಿಡಲಾಗಿದೆ. ಕೆಳಹಂತದ ನಾಯಕರಿಂದ ಮೇಲಿನ ಹಂತಕ್ಕೂ ಅನ್ವಯವಾಗಲಿದೆ ಎಂದರು.

ಎಲ್ಲದಕ್ಕೂ ಮಹತ್ವ ಬೇಕಿಲ್ಲ:  ಜಾರಕಿಹೊಳಿ ಜೊತೆ ಸಿಎಂ ಮಾತುಕತೆ ವಿಚಾರವಾಗಿ ಸುದ್ದಿಗಾರರಿಗೆ ಉತ್ತರಿಸಿದ ಪರಮೇಶ್ವರ್ ಅದಕ್ಕೆ ದೊಡ್ಡ ಮಹತ್ವ ಕೊಡಬೇಕಿಲ್ಲ. ಎಲ್ಲರನ್ನೂ ಸಿಎಂ ಕರೆದು ಮಾತನಾಡ್ತಾರೆ ಜಾರಕಿಹೊಳಿಯವರನ್ನೂ ಕರೆದು ಮಾತನಾಡಿಸಿದ್ದಾರೆ. ನನ್ನನ್ನೂ ಕರೆದು ಮಾತನಾಡಿಸುತ್ತಾರೆ ಎಂದು ಹೇಳಿದರು.

ರಾಹುಲ್ ರಾಜ್ಯ ಪ್ರವಾಸ: ಫೆ.10ರಂದು ರಾಹುಲ್ ಗಾಂಧಿ ರಾಜ್ಯಕ್ಕೆ ಆಗಮಿಸಲಿದ್ದು, ಸತತ 3 ದಿನಗಳ ಕಾಲ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಮೊದಲ ದಿನ ಬಳ್ಳಾರಿಯ ಹೊಸಪೇಟೆಯಲ್ಲಿ ಸಾರ್ವಜನಿಕ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಎರಡನೇ ಹಾಗು ಮೂರನೇ ದಿನ ಬಳ್ಳಾರಿ, ಹೊಸಪೇಟೆ, ಕೊಪ್ಪಳ, ಯಾದಗಿರಿ, ಕಲ್ಬುರ್ಗಿಗೆ ಬಸ್‌ನಲ್ಲಿ ಸಂಚರಿಸಿ ರಾಹುಲ್ ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಚುನಾವಣೆಗೆ ಮೊದಲು 5 ಬಾರಿ ರಾಹುಲ್ ಗಾಂಧಿ ರಾಜ್ಯ ಪ್ರವಾಸ ಮಾಡಲಿದ್ದಾರೆ. 

-ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News