ಮಾರಿಷಸ್‌ನಲ್ಲಿ ಬಂಡವಾಳ ಹೂಡಲು ವಿಫುಲ ಅವಕಾಶ: ರೌಬಿನಾ ಜಾದೂ
ಬೆಂಗಳೂರು, ಜ.30: ಕರ್ನಾಟಕ ಉದ್ಯಮಿಗಳಿಗೆ ಮಾರಿಷಸ್‌ನಲ್ಲಿ ಬಂಡವಾಳ ಹೂಡಲು ವಿಫುಲವಾದ ಅವಕಾಶವಿದೆ. ಅದಕ್ಕೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ನೀಡಲು ಮಾರಿಷಸ್ ಸರಕಾರ ಸಿದ್ಧವಿದೆ ಎಂದು ಮಾರಿಷಸ್‌ನ ಮಕ್ಕಳ ಅಭಿವೃದ್ಧಿ ಮತ್ತು ಕುಟುಂಬ ಕಲ್ಯಾಣ ಸಚಿವೆ ರೌಬಿನಾ ಜಾದೂ ಜೌನ್‌ಬಕಸ್ ತಿಳಿಸಿದರು.
ಮಂಗಳವಾರ ವಿಕಾಸಸೌಧದಲ್ಲಿ ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆ ಆರತಿ ಕೃಷ್ಣರೊಂದಿಗೆ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾರಿಷಸ್ ಕಳೆದ ಮೂರು ವರ್ಷದಿಂದ ಭಾರತದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದೆ. ಅದನ್ನು ಮತ್ತಷ್ಟು ಭದ್ರಗೊಳಿಸುವ ನಿಟ್ಟಿನಲ್ಲಿ ಬಂಡವಾಳ ಹೂಡುವಂತೆ ಆಹ್ವಾನ ನೀಡುತ್ತಿದ್ದೇವೆಂದು ತಿಳಿಸಿದರು.
ಮಾರಿಷಸ್ ಪ್ರವಾಸೋದ್ಯಮದಲ್ಲಿ ಆಕರ್ಷಣಿಯ ಕೇಂದ್ರವಾಗಿದೆ. ಹಾಗೂ ಶಿಕ್ಷಣ ಕ್ಷೇತ್ರದಲ್ಲಿ, ಅದರಲ್ಲೂ ವೈದ್ಯಕೀಯ ವಿಭಾಗದಲ್ಲಿ ಹೆಚ್ಚಿನ ಪ್ರಗತಿಯತ್ತ ಸಾಗುತ್ತಿದೆ. ಈ ಕ್ಷೇತ್ರಗಳಲ್ಲಿ ಭಾರತದ ಉದ್ಯಮಿಗಳು ಬಂಡವಾಳ ಹೂಡಿದರೆ ಉತ್ತಮ ಪ್ರಗತಿಯನ್ನು ಸಾಧಿಸಲು ಸಾಧ್ಯವಾಗುತ್ತದೆ. ಈಗಾಗಲೇ ಗುಜರಾತ್, ಬಿಹಾರಿ ಸೇರಿದಂತೆ ಉತ್ತರ ಭಾರತದ ಹಲವು ಉದ್ಯಮಿಗಳು ಬಂಡವಾಳ ಹೂಡಿವೆ ಎಂದು ಅವರು ಹೇಳಿದರು.
ಮಾರಿಷಸ್‌ನ ಅನೇಕ ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಭಾರತದಲ್ಲಿಯೇ ಬೆಂಗಳೂರು ಉದ್ಯಾನ ನಗರಿ ಎಂದು ಪ್ರಸಿದ್ಧಿ ಪಡೆದಿದೆ. ಮಾರಿಷಸ್ ಸರಕಾರವು ಕರ್ನಾಟಕದಲ್ಲಿ ಬಂಡವಾಳ ಹೂಡಲು ಪ್ರೋತ್ಸಾಹಿಸಲಾಗುವುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಈ ವೇಳೆ ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆ ಆರತಿ ಕೃಷ್ಣ ಉಪಸ್ಥಿತರಿದ್ದರು.