ಮೈಸೂರಿನಲ್ಲಿ ಸುತ್ತೂರು ಸ್ವಾಮೀಜಿ ಪುತ್ಥಳಿ ನಿರ್ಮಾಣಕ್ಕೆ ಹೈಕೋರ್ಟ್‌ನಿಂದ ಮಧ್ಯಂತರ ತಡೆ
ಬೆಂಗಳೂರು, ಜ.30: ಮೈಸೂರು ನಗರದ ಗನ್‌ಹೌಸ್ ವೃತ್ತದಲ್ಲಿ ಸುತ್ತೂರು ಮಠಾಧೀಶರಾಗಿದ್ದ ದಿವಂಗತ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ ಪುತ್ಥಳಿ ನಿರ್ಮಾಣಕ್ಕೆ ಹೈಕೋರ್ಟ್ ಮಂಗಳವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಅಖಿಲ ಭಾರತ ಕ್ಷತ್ರೀಯ ಮಹಾಸಭಾದ ಅಧ್ಯಕ್ಷ ಶ್ರೀಧರ್ ರಾಜ್ ಅರಸ್ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ. ರಮೇಶ್ ಮತ್ತು ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ಪೀಠ, ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ ಪುತ್ಥಳಿ ಸ್ಥಾಪನೆಗೆ ಅನುಮತಿ ನೀಡಿ ರಾಜ್ಯ ಸರಕಾರವು 2017ರ ಮಾ.3ರಂದು ಹೊರಡಿಸಿದ್ದ ಆದೇಶಕ್ಕೆ ತಡೆಯಾಜ್ಞೆ ನೀಡಿತು.
ರಸ್ತೆ, ಹೆದ್ದಾರಿ ಬದಿ, ಸಾರ್ವಜನಿಕ ವೃತ್ತ ಮತ್ತು ಸ್ಥಳಗಳಲ್ಲಿ ಯಾವುದೇ ಪ್ರತಿಮೆ ಹಾಗೂ ಪುತ್ಥಳಿ ನಿರ್ಮಾಣಕ್ಕೆ ಅವಕಾಶ ನೀಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ 2012ರಲ್ಲಿ ಆದೇಶ ಹೊರಡಿಸಿದೆ. ಈ ಆದೇಶ ಉಲ್ಲೇಖಿಸಿಯೇ ಮೈಸೂರಿನಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಪ್ರತಿಮೆ ನಿರ್ಮಾಣ ಮಾಡಲು ಸ್ಥಳೀಯ ನಗರ ಪಾಲಿಕೆ 2017ರ ನವೆಂಬರ್ ಅನುಮತಿ ನೀಡಿರಲಿಲ್ಲ. ಆದರೆ, ರಾಜ್ಯ ಸರಕಾರದ ಶಿಫಾರಸು ಮೇರೆಗೆ ಸ್ವಾಮೀಜಿಯ ಪುತ್ಥಳಿ ನಿಮಾಣಕ್ಕೆ ಅನುಮತಿ ನೀಡಿರುವುದು ಕಾನೂನು ಬಾಹಿರ ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದರು.
ಈ ವಾದ ಆಲಿಸಿದ ನ್ಯಾಯಪೀಠ ಶ್ರೀಗಳ ಪುತ್ಥಳಿ ನಿರ್ಮಾಣಕ್ಕೆ ತಡೆಯಾಜ್ಞೆ ನೀಡಿತು. ಅಲ್ಲದೆ, ಮುಂದಿನ ದಿನಗಳಲ್ಲಿ ಸಾರ್ವಜನಿಕ ರಸ್ತೆ ಹಾಗೂ ಸ್ಥಳಗಳಲ್ಲಿ ಯಾವುದೇ ಪುತ್ಥಳಿ ಅಥವಾ ಕಟ್ಟಡ ನಿರ್ಮಾಣಕ್ಕೆ ಸರಕಾರ ಅನುಮತಿ ನೀಡಬಾರದು. ಆದರೆ, ರಸ್ತೆ ಹಾಗೂ ಹೆದ್ದಾರಿ, ಬೀದಿ ದೀಪ, ಸಂಚಾರಿ ದೀಪ ಮತ್ತು ವಿದ್ಯುತ್ ಅಳವಡಿಕೆ ಕಾರ್ಯಕ್ಕೆ ಈ ಆದೇಶ ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ಇದೇ ವೇಳೆ ಸ್ಪಷ್ಟಪಡಿಸಿದೆ.