ಎಫ್‌ಐಆರ್ ಪ್ರತಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತಿದೆ: ಹೈಕೋರ್ಟ್‌ಗೆ ಬಿಎಂಟಿಎಫ್ ಪ್ರಮಾಣ ಪತ್ರ ಸಲ್ಲಿಕೆ

Update: 2018-01-30 17:30 GMT

ಬೆಂಗಳೂರು, ಜ.30: ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಮತ್ತು ಬೆಂಗಳೂರು ಮಹಾನಗರ ಕಾರ್ಯಪಡೆ(ಬಿಎಂಟಿಎಫ್)ಯಲ್ಲಿ ದಾಖಲಾಗುವ ಎಫ್‌ಐಆರ್‌ಗಳನ್ನು 24ಗಂಟೆಯಲ್ಲಿ ವೆಬ್‌ಸೈಟ್‌ನಲ್ಲಿ ಪ್ರಕಟಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಆದೇಶದಂತೆ ಎಫ್‌ಐಆರ್‌ಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತಿದೆ ಎಂದು ಬಿಎಂಟಿಎಫ್ ಹೈಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದೆ.

ವಕೀಲ ಎಸ್.ಉಮಾಪತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ವಿಚಾರಣೆಯನ್ನು ಹಂಗಾಮಿ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ನಡೆಸಿತು.

ಬಿಎಂಟಿಎಫ್ ಪರ ವಾದಿಸಿದ ವಕೀಲರು, ಬಿಎಂಟಿಎಫ್‌ನಲ್ಲಿ ದಾಖಲಾಗುವ ಎಫ್‌ಐಆರ್‌ಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸುತ್ತಿದೆ. ಆದರೆ, ಎಲ್ಲ ಎಫ್‌ಐಆರ್‌ಗಳನ್ನು 24ಗಂಟೆಯಲ್ಲಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕೆಂಬ ಸುಪ್ರೀಂಕೋರ್ಟ್ ಆದೇಶಕ್ಕೆ ವಿನಾಯಿತಿ ನೀಡಬೇಕೆಂದು ಪೀಠಕ್ಕೆ ಮನವಿ ಮಾಡಿದರು.

ಬಿಎಂಟಿಎಫ್‌ನವರು ಎಲ್ಲ ಜಿಲ್ಲಾ ಕೇಂದ್ರಗಳಿಗೆ ಈಗಾಗಲೇ ಎಫ್‌ಐಆರ್‌ಗಳನ್ನು 24 ಗಂಟೆಯಲ್ಲಿ ವೆಬ್‌ಸೈಟ್‌ನಲ್ಲಿ ಪ್ರಕಟಿಸುವಂತೆ ಸೂಚಿಸಿ ಸುತ್ತೋಲೆ ಹೊರಡಿಸಲಾಗಿದೆ ಎಂದು ಪೀಠಕ್ಕೆ ತಿಳಿಸಿದರು.

ಈ ಪ್ರಮಾಣ ಪತ್ರ ಸ್ವೀಕರಿಸಿದ ನ್ಯಾಯಪೀಠವು ಬಿಎಂಟಿಎಫ್‌ನವರು ಸುಪ್ರೀಂಕೋರ್ಟ್ ಆದೇಶದಂತೆ ಎಫ್‌ಐಆರ್‌ಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕೆಂದು ನಿರ್ದೇಶಿಸಿ, ಅರ್ಜಿಯನ್ನು ಇತ್ಯರ್ಥಡಿಸಿತು.

ಯಾವುದೇ ಪ್ರಕರಣದಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದರೆ, ಅದರ ಪ್ರತಿಯನ್ನು 24 ಗಂಟೆಯೊಳಗೆ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟ ಮಾಡಬೇಕು ಎಂದು ಸುಪ್ರಿಂ ಕೋರ್ಟ್ ಸ್ಪಷ್ಟವಾಗಿ ಆದೇಶ ಮಾಡಿದೆ. ಈ ಆದೇಶವನ್ನು ಎಸಿಬಿ ಮತ್ತು ಬಿಬಿಎಂಟಿಎಫ್ ಪಾಲಿಸುತ್ತಿಲ್ಲ. ಆದುದರಿಂದ, ದಾಖಲಿಸುವ ಎಫ್‌ಐಆರ್‌ಗಳನ್ನು 24 ಗಂಟೆಯಲ್ಲಿ ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡುವಂತೆ ಎಸಿಬಿ ಹಾಗೂ ಬಿಎಂಟಿಎಫ್‌ಗೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News