ವಿಜಯಾ ಬ್ಯಾಂಕ್‌ನಿಂದ ಬೆಂಗಳೂರಿನಲ್ಲಿ ಬಾಸ್ಕೆಟ್‌ಬಾಲ್ ಪಂದ್ಯಾವಳಿ
ಬೆಂಗಳೂರು, ಜ.30: ಇಲ್ಲಿನ ಶ್ರೀ ಕಂಠೀರವ ಒಳಾಂಗಣದಲ್ಲಿ ಜನವರಿ 31, 2018ರಿಂದ ಫೆಬ್ರವರಿ 4ರವರೆಗೆ ವಿಜಯಾ ಬ್ಯಾಂಕ್ ಆಯೋಜಿಸಿರುವ 4ನೇ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಅಖಿಲ ಭಾರತ ಬಾಸ್ಕೆಟ್‌ಬಾಲ್ ಪಂದ್ಯಾವಳಿಯಲ್ಲಿ ದೇಶದ ಏಳು ಅಗ್ರಮಾನ್ಯ ತಂಡಗಳು ಭಾಗವಹಿಸಲಿವೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಈಗಾಗಲೇ ಎಫ್‌ಐಬಿಎ ಮಹಿಳಾ ಮತ್ತು ಎಫ್‌ಐಬಿಎ 16ರ ಕೆಳಗಿನ ಮಹಿಳಾ ಬಾಸ್ಕೆಟ್‌ಬಾಲ್ ಪಂದ್ಯಾವಳಿ ಹಾಗೂ 2019ರ ವಿಶ್ವಕಪ್ ಏಷ್ಯ ವಲಯದ ಹಿರಿಯ ಪುರುಷರ ಅರ್ಹತಾ ಪಂದ್ಯಗಳು ನಡೆಯಲಿರುವ ಕಾರಣ ಬೆಂಗಳೂರಿನಲ್ಲಿ ಬಾಸ್ಕೆಟ್‌ಬಾಲ್ ಬಗೆಗಿನ ಕುತೂಹಲ ತಾರಕಕ್ಕೇರಿದ್ದು ವಿಜಯಾ ಬ್ಯಾಂಕ್ ಆಯೋಜಿಸಿರುವ ಪಂದ್ಯಾವಳಿ ಈ ಕುತೂಹಲಕ್ಕೆ ಮತ್ತಷ್ಟು ಕಿಚ್ಚು ಹಚ್ಚುವುದರಲ್ಲಿ ಸಂಶಯವಿಲ್ಲ ಎಂದು ಆಯೋಜಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಪ್ರತಿಯೊಂದು ತಂಡದಲ್ಲೂ ಅತ್ಯುತ್ತಮ ಅಂತಾರಾಷ್ಟ್ರೀಯ ತಾರೆಗಳಿರುವ ಕಾರಣ ಎಲ್ಲಾ ಪಂದ್ಯಗಳು ರೋಮಾಂಚಕ ಮತ್ತು ಸಮಬಲದ ಹೋರಾಟಕ್ಕೆ ಸಾಕ್ಷಿಯಾಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಅತಿಥೇಯ ವಿಜಯಾ ಬ್ಯಾಂಕ್ ತಂಡದಲ್ಲಿ ಅರವಿಂದ್, ಅನಿಲ್ ಕುಮಾರ್‌ರಂಥ ಮಾಜಿ ಭಾರತೀಯ ತಾರೆಗಳಿದ್ದಾರೆ. ಇತರ ತಂಡಗಳು ಕೂಡಾ ತಮ್ಮಲ್ಲಿ ಅಂತಾರಾಷ್ಟ್ರೀಯ ಮಟ್ಟದ ಆಟಗಾರರು ಇದ್ದಾರೆ ಎಂದು ಹೇಳುತ್ತಿವೆ.
ಜನವರಿ 31ರಂದು, ಇಂಡಿಯನ್ ಓವರ್‌ಸೀಸ್ ಬ್ಯಾಂಕ್ (ಚೆನ್ನೈ), ಆರ್‌ಸಿಎಫ್ ಕಪುರ್ತಲಾ (ಪಂಜಾಬ್), ಆದಾಯ ತೆರಿಗೆ (ಚೆನ್ನೈ), ಕಸ್ಟಮ್ಸ್ (ಕೊಚ್ಚಿ), ಐಸಿಎಫ್(ಚೆನ್ನೈ) ಮತ್ತು ಕರ್ನಾಟಕ ರಾಜ್ಯ ತಂಡಗಳು ಪರಸ್ಪರ ಸೆಣಸಲಿವೆ.
ಪ್ರತಿದಿನ ಪಂದ್ಯಗಳು ಸಂಜೆ 6 ಗಂಟೆಯಿಂದ ಆರಂಭವಾಗಲಿವೆ. ಫೈನಲ್ ಪಂದ್ಯವು ಫೆಬ್ರವರಿ 4ರಂದು ಸಂಜೆ 7ಗಂಟೆಗೆ ಆರಂಭವಾಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಉದ್ಘಾಟನಾ ಸಮಾರಂಭದಲ್ಲಿ ಭಾರತೀಯ ಬಾಸ್ಕೆಟ್‌ಬಾಲ್ ಫೆಡರೇಶನ್‌ನ ಅಧ್ಯಕ್ಷ ಮತ್ತು ಭಾರತೀಯ ಒಲಿಂಪಿಕ್ ಮಂಡಳಿಯ ಉಪಾಧ್ಯಕ್ಷರಾದ ವಿಧಾನ ಪರಿಷತ್ ಸದಸ್ಯ ಕೆ. ಗೋವಿಂದರಾಜ್ ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಅವರೊಂದಿಗೆ ವಿಜಯಾ ಬ್ಯಾಂಕ್‌ನ ಎಂ.ಡಿ ಮತ್ತು ಸಿಇಒ ಆರ್.ಎ ಶಂಕರ ನಾರಾಯಣ ಕೂಡಾ ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.