ಮಹಾದಾಯಿ: ಬಿಜೆಪಿ ನಾಯಕರ ದ್ವಿಮುಖನೀತಿ

Update: 2018-01-31 05:39 GMT

ಮಹಾದಾಯಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ನಡೆದ ಸರ್ವಪಕ್ಷ ಸಭೆ ವಿಫಲಗೊಂಡಿದೆ. ಕರ್ನಾಟಕ ಮತ್ತು ಗೋವಾ ರಾಜ್ಯ ನಡುವಿನ ಈ ವಿವಾದದ ಇತ್ಯರ್ಥಕ್ಕೆ ಪ್ರಧಾನಮಂತ್ರಿ ಮಧ್ಯಪ್ರವೇಶಕ್ಕೆ ರಾಜ್ಯದ ಆಡಳಿತ ಪಕ್ಷ ಸೇರಿದಂತೆ ಬಹುತೇಕ ಪಕ್ಷಗಳು ಆಗ್ರಹಿಸಿವೆ. ಆದರೆ, ಇದಕ್ಕೆ ಪ್ರತಿಯಾಗಿ ವಿತಂಡವಾದ ಮಾಡುತ್ತಿರುವ ಬಿಜೆಪಿ ನಾಯಕರು ಗೋವಾ ಮತ್ತು ಮಹಾರಾಷ್ಟ್ರಗಳ ಪ್ರತಿಪಕ್ಷವಾದ ಕಾಂಗ್ರೆಸ್ ನಾಯಕರು ಮೊದಲು ಇದಕ್ಕೆ ಒಪ್ಪಿಗೆ ನೀಡಲಿ ಎಂದು ಹೇಳುತ್ತಿದ್ದಾರೆ. ಇದರ ಅರ್ಥ ಈ ಪ್ರಶ್ನೆ ಇತ್ಯರ್ಥವಾಗಿ ಉತ್ತರಕರ್ನಾಟಕ ಜನತೆಯ ಕುಡಿಯುವ ನೀರಿನ ಬವಣೆ ನಿವಾರಣೆಯಾಗುವುದು ಬಿಜೆಪಿ ನಾಯಕರಿಗೆ ಬೇಕಾಗಿಲ್ಲ. ಕರ್ನಾಟಕದ ಬಿಜೆಪಿ ನಾಯಕರು ಈ ರೀತಿ ವರ್ತಿಸುತ್ತಿದ್ದರೆ, ಗೋವಾದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನಾಯಕರು ತದ್ವಿರುದ್ಧವಾಗಿ ವರ್ತಿಸುತ್ತಿದ್ದಾರೆ.

ರಾಷ್ಟ್ರೀಯ ಪಕ್ಷವಾದ ಬಿಜೆಪಿಯ ಈ ದ್ವಿಮುಖನೀತಿಯಿಂದ ಮಹಾದಾಯಿ ಸಮಸ್ಯೆ ಬಗೆಹರಿಯದೆ ಕಗ್ಗಂಟಾಗಿಯೇ ಉಳಿದಿದೆ. ಬೆಳಗಾವಿ, ಧಾರವಾಡ, ಗದಗ ಮತ್ತು ಬಾಗಲಕೋಟೆ ಜಿಲ್ಲೆಗಳ ಜನತೆಗೆ ಕುಡಿಯುವ ನೀರು ಒದಗಿಸಲು ಮಹಾದಾಯಿ ನದಿಯಿಂದ ಕಳಸಾ ಬಂಡೂರಿ ನಾಲೆಗೆ ಏಳೂವರೆ ಟಿಎಂಸಿ ನೀರು ಹರಿಸಬೇಕೆಂಬ ಬೇಡಿಕೆ ಇತ್ತೀಚಿನದ್ದಲ್ಲ. ಸುಮಾರು 40 ವರ್ಷಗಳಿಂದ ಉತ್ತರಕರ್ನಾಟಕದ ಜನತೆ ಈ ಬೇಡಿಕೆಯನ್ನು ಮುಂದಿಡುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯಗಳಲ್ಲಿ ಯಾವುದೇ ಪಕ್ಷದ ಸರಕಾರ ಬಂದರೂ ಈ ಬೇಡಿಕೆ ಈಡೇರಿಸಿಲ್ಲ. ಕುಡಿಯುವ ನೀರಿನ ಬೇಡಿಕೆಗಾಗಿ ಉತ್ತರಕರ್ನಾಟಕದ ರೈತಾಪಿ ಜನತೆ ಕೊನೆಗೆ ರೋಸಿ ಹೋಗಿ ಹೋರಾಟಕ್ಕಿಳಿದರು. ಈ ಹೋರಾಟ ಕಳೆದ ಕೆಲವು ವರ್ಷಗಳಿಂದ ನಡೆಯುತ್ತಿದೆ. ಕಳೆದ ವಾರ ಇದೇ ಬೇಡಿಕೆಗಾಗಿ ಕರ್ನಾಟಕ ಬಂದ್ ಕೂಡಾ ನಡೆಯಿತು. ಈ ಎಲ್ಲ ಬೆಳವಣಿಗೆಯ ಹಿನ್ನೆಲೆಯಲ್ಲಿ ನಡೆದ ಸರ್ವಪಕ್ಷ ಸಭೆ ಒಮ್ಮತದ ನಿರ್ಧಾರಕ್ಕೆ ಬರುವಲ್ಲಿ ವಿಫಲಗೊಂಡಿತು. ಈ ಹಿಂದೆ ಇಂತಹ ವಿವಾದಗಳು ಉಂಟಾದಾಗ ಕೇಂದ್ರ ಸರಕಾರ ಮಧ್ಯಪ್ರವೇಶ ಮಾಡುತ್ತಿತ್ತು.

ಹಿಂದಿನ ಪ್ರಧಾನಮಂತ್ರಿ ಆಸಕ್ತಿ ವಹಿಸಿ ಸಂಬಂಧಿಸಿದ ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆದು ವಿವಾದ ವನ್ನು ಇತ್ಯರ್ಥ ಮಾಡುತ್ತಿದ್ದರು. ಚೆನ್ನೈ ಮಹಾನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಉಂಟಾದಾಗ ಈ ಸಮಸ್ಯೆ ನಿವಾರಣೆಗಾಗಿ ತೆಲುಗು ಗಂಗಾ ಯೋಜನೆ ಜಾರಿಗೆ ಬಂತು. ಆ ಸಂದರ್ಭ ದಲ್ಲಿ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಸೌಹಾರ್ದ ಮಾತುಕತೆಯ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಿದ್ದರು. ಆಯಾ ರಾಜ್ಯಗಳ ವಿರೋಧ ಪಕ್ಷಗಳ ಒಪ್ಪಿಗೆ ಬೇಕೆಂಬ ವಿತಂಡವಾದವನ್ನು ಯಾರೂ ಮಾಡಿರಲಿಲ್ಲ. ಆದರೆ, ಈಗಿನ ಪ್ರಧಾನಿ ನರೇಂದ್ರ ಮೋದಿ ಈ ವಿವಾದವನ್ನು ಸೌಹಾರ್ದಯುತವಾಗಿ ಇತ್ಯರ್ಥ ಪಡಿಸುವ ಮನಸ್ಸಿಲ್ಲ. ಅಂತಲೇ, ಕರ್ನಾಟಕದಿಂದ ಹೋಗಿದ್ದ ಸರ್ವಪಕ್ಷ ನಿಯೋಗದ ಮನವಿಗೆ ಅವರು ಸ್ಪಂದಿಸಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಹೋಗಿದ್ದ ಈ ನಿಯೋಗಕ್ಕೆ ಖಚಿತವಾದ ಯಾವುದೇ ಭರವಸೆಯನ್ನು ನೀಡದ ಪ್ರಧಾನಿ ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಮುಖ್ಯ ವಿರೋಧ ಪಕ್ಷವಾದ ಕಾಂಗ್ರೆಸ್ ನಾಯಕರನ್ನು ಒಪ್ಪಿಸಿಕೊಂಡು ಬನ್ನಿ ಎಂದು ಸಬೂಬು ಹೇಳಿದ್ದರು. ಆಗ ನಿಯೋಗದಲ್ಲಿದ್ದ ರಾಜ್ಯ ಬಿಜೆಪಿಯ ಘಟಾನುಘಟಿ ನಾಯಕರು ಬಾಯಿ ಮುಚ್ಚಿಕೊಂಡು ಸುಮ್ಮನೆ ಕೂತಿದ್ದರು.

ಬಿಜೆಪಿ ನಾಯಕರ ಹೇಡಿತನದ ಈ ದುರುದ್ದೇಶಪೀಡಿತ ವೌನದ ಬಗ್ಗೆ ಕಾಂಗ್ರೆಸ್ ನಾಯಕರು ಮಾತ್ರವಲ್ಲ, ಜಾತ್ಯತೀತ ಜನತಾದಳದ ನಾಯಕರೂ ಆಕ್ಷೇಪ ವ್ಯಕ್ತಪಡಿಸಿದ್ದರು. ಹಾಗೂ ನಿಯೋಗದಲ್ಲಿದ್ದ ಮಠಾಧೀಶರು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ನಡುವೆ ಕರ್ನಾಟಕದ ಜನತೆಯ ಕಿವಿಯ ಮೇಲೆ ಹೂ ಇಡುವ ಯತ್ನವನ್ನು ಬಿಜೆಪಿ ನಾಯಕ ಯಡಿಯೂರಪ್ಪ ಮಾಡಿದರು. ಹುಬ್ಬಳ್ಳಿಯಲ್ಲಿ ಹೋರಾಟ ತೀವ್ರಗೊಂಡು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ನಿವಾಸ ಮುಂದೆ ರೈತರು ಧರಣಿ ನಡೆಸಿದಾಗ ಅಲ್ಲಿ ಹೋದ ಯಡಿಯೂರಪ್ಪ ಇನ್ನೊಂದು ವಾರದಲ್ಲಿ ಈ ಸಮಸ್ಯೆಯನ್ನು ಬಗೆಹರಿಸುವುದಾಗಿ ಹೇಳಿ ಬಂದರು. ಅದಕ್ಕೆ ಪೂರಕವಾಗಿ ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ತಮಗೆ ಬರೆದ ಪತ್ರವೊಂದನ್ನು ಹುಬ್ಬಳ್ಳಿಯ ಬಿಜೆಪಿ ಪರಿವರ್ತನಾ ರ್ಯಾಲಿಯಲ್ಲಿ ತೋರಿಸಿದರು. ಆದರೆ, ಈ ಪತ್ರದಲ್ಲಿ ಏನೂ ಇರಲಿಲ್ಲ.

ಬರೇ ಮಾತುಕತೆಗೆ ಒಪ್ಪಿದ್ದಾಗಿ ಗೋವಾ ಮುಖ್ಯಮಂತ್ರಿ ಹೇಳಿದ್ದರು. ಆದರೆ, ಇದೇ ಪತ್ರವನ್ನು ನ್ಯಾಯವಾಗಿ ಅವರು ಕರ್ನಾಟಕದ ಮುಖ್ಯಮಂತ್ರಿಗೆ ಬರೆಯಬೇಕಾಗಿತ್ತು. ಅಧಿಕೃತವಾಗಿ ಯಾವುದೇ ಸ್ಥಾನದಲ್ಲಿ ಇಲ್ಲದ ಯಡಿಯೂರಪ್ಪಗೆ ಬರೆದು ಸಮಸ್ಯೆಯನ್ನು ಇನ್ನಷ್ಟು ಗೊಂದಲಮಯಗೊಳಿಸಿದರು. ಯಡಿಯೂರಪ್ಪ ಈ ಪತ್ರವನ್ನು ಬಹಿರಂಗ ಸಭೆಯಲ್ಲಿ ಪ್ರದರ್ಶನ ಮಾಡಿದ ಕೆಲವೇ ದಿನಗಳಲ್ಲಿ ಗೋವಾದ ಕೆಲ ಸಚಿವರು ಮಹಾದಾಯಿ ನದಿನೀರನ್ನು ಕರ್ನಾಟಕಕ್ಕೆ ಬಿಡಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದರು. ಈ ನಡುವೆ ಗೋವಾ ಮುಖ್ಯಮಂತ್ರಿ ಪಾರಿಕ್ಕರ್ ಹಾಗೂ ಕೆಲ ಸಚಿವರು ಕರ್ನಾಟಕ ಅಕ್ರಮ ಕಾಮಗಾರಿ ನಡೆಸುತ್ತಿದೆ ಎಂದು ಆರೋಪಿಸಿ ಮಹಾದಾಯಿಯ ವ್ಯಾಪ್ತಿಯ ಪ್ರದೇಶಗಳಿಗೆ ಅಕ್ರಮವಾಗಿ ಭೇಟಿ ನೀಡಿ ಹೋದರು. ಕಳೆದವಾರ ಗೋವಾ ವಿಧಾನಸಭಾಧ್ಯಕ್ಷರು ಮತ್ತು ಉಪಾಧ್ಯಕ್ಷರೂ ಮಹಾದಾಯಿ ಕಾಮಗಾರಿ ನಡೆಯುತ್ತಿರುವ ಪ್ರದೇಶಕ್ಕೆ ಭೇಟಿ ನೀಡಿ ಹೋಗಿದ್ದಾರೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 4ಕ್ಕೆ ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ. ಆ ದಿನ ಮತ್ತೆ ಕರ್ನಾಟಕ ಬಂದ್ ನಡೆಸಬೇಕೆಂದು ಕನ್ನಡಪರ ಸಂಘಟನೆಗಳು ಕರೆ ನೀಡಿವೆ. ಈ ಬಂದ್ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ಬಿಜೆಪಿ ನಾಯಕರು ಆರೋಪಿಸುತ್ತಿ ದ್ದಾರೆ. ಆದರೆ, ತಮ್ಮದೇ ಸರಕಾರ ಕೇಂದ್ರದಲ್ಲಿ ಇರುವುದರಿಂದ ಪ್ರಧಾನಿಯ ಮೇಲೆ ಒತ್ತಡ ಹೇರಿ ಸಮಸ್ಯೆಯನ್ನು ಸೌಹಾರ್ದಯುತವಾಗಿ ಪರಿಹರಿಸುವ ಸಾಮರ್ಥ್ಯ ರಾಜ್ಯದ ಬಿಜೆಪಿ ನಾಯಕರಿಗೆ ಇಲ್ಲ. ರಾಜ್ಯದ ಹಿತಾಸಕ್ತಿಗಿಂತ ಅವರಿಗೆ ತಮ್ಮ ಅಧಿಕಾರ ಸ್ವಾರ್ಥವೇ ಮುಖ್ಯವಾಗಿದೆ.

ಬಿಜೆಪಿ ನಾಯಕರು ಬಾಯಿ ಬಿಟ್ಟರೆ ಕಾಂಗ್ರೆಸ್ ಪಕ್ಷದ್ದು ಹೈಕಮಾಂಡ್ ಸಂಸ್ಕೃತಿ ಎಂದು ಹೇಳುತ್ತಾರೆ. ಆದರೆ, ರಾಜ್ಯದ ಬಿಜೆಪಿ ನಾಯಕರ ಇಂದಿನ ಸ್ಥಿತಿ ನೋಡಿದರೆ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಎದುರು ಧೈರ್ಯವಾಗಿ ನಿಂತು ಮಾತನಾಡುವ ಸ್ಥಿತಿಯಲ್ಲೂ ಇಲ್ಲ. ಪ್ರಧಾನಮಂತ್ರಿ ಒತ್ತಟ್ಟಿಗಿರಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾರನ್ನು ಕಂಡರೆ ಕರ್ನಾಟಕದ ಬಿಜೆಪಿ ನಾಯಕರಿಗೆ ನಡುಕ ಶುರುವಾಗುತ್ತದೆ. ಇವರು ಯಾವಪರಿ ಹೆದರುತ್ತಾರೆಂದರೆ ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಬಹಿರಂಗ ಸಭೆಯಲ್ಲಿ 73 ವರ್ಷದ ಯಡಿಯೂರಪ್ಪ 56 ವರ್ಷದ ಅಮಿತ್ ಶಾ ಕಾಲಿಗೆ ಬಿದ್ದರು. ಇಂತಹವರು ಕರ್ನಾಟಕದ ಪರವಾಗಿ ತಮ್ಮ ರಾಷ್ಟ್ರೀಯ ನಾಯಕರ ಎದುರು ಧೈರ್ಯವಾಗಿ ಧ್ವನಿ ಎತ್ತಿ ನಿಲ್ಲುತ್ತಾರೆ ಎಂದು ನಂಬಲು ಸಾಧ್ಯವಿಲ್ಲ. ಬಿಜೆಪಿಯಲ್ಲಿ ಈಗ ನರೇಂದ್ರ ಮೋದಿ ಮತ್ತು ಅಮಿತ್ ಶಾ ಜಂಟಿ ಸರ್ವಾಧಿಕಾರವಿದೆ. ಇವರಿಬ್ಬ ರನ್ನು ಒಪ್ಪಿಸಿ ಕರ್ನಾಟಕದ ಪಾಲಿನ ನೀರಿನ ಹಕ್ಕನ್ನು ಪಡೆಯುವ ಸ್ಥಿತಿಯಲ್ಲಿ ರಾಜ್ಯದ ಬಿಜೆಪಿ ನಾಯಕರು ಇಲ್ಲ. ಅಂತಲೇ ಪ್ರತೀ ಬಾರಿ ಮುಖ್ಯಮಂತ್ರಿ ಸರ್ವಪಕ್ಷ ಸಭೆ ನಡೆದಾಗ ಗೋವಾದ ಪ್ರತಿಪಕ್ಷ ನಾಯಕರನ್ನು ಒಪ್ಪಿಸಿ ಬನ್ನಿ ಎಂಬ ಹಳೆಯ ರಾಗವನ್ನೇ ಬಿಜೆಪಿ ನಾಯಕರು ತೆಗೆಯುತ್ತಾರೆ. ಪ್ರಧಾನಿಯ ಮಾತಿಗೆ ವ್ಯತಿರಿಕ್ತವಾಗಿ ಯಾವ ಮಾತನ್ನೂ ಇವರು ಆಡುವುದಿಲ್ಲ.

ಈ ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ನಾನಾ ಭ್ರಷ್ಟಚಾರ ಹಗರಣದಲ್ಲಿ ಜೈಲಿಗೆ ಹೋಗಿ ಬಂದ ಬಿಜೆಪಿ ನಾಯಕರು ಪ್ರಧಾನಿ ಎದುರು ತಲೆ ಎತ್ತಿ ನಿಂತು ಮಾತನಾಡುವ ಸ್ಥಿತಿಯಲ್ಲಿಲ್ಲ. ಅಂತಲೇ ಇವರು ಮಹಾದಾಯಿ ನದಿ ನೀರಿನ ವಿವಾದ ಉಂಟಾದಾಗ ಪ್ರಧಾನಿ ಹೇಳಿದಂತೆ ಕೇಳುತ್ತಾರೆ. ಪ್ರಧಾನಮಂತ್ರಿ ಗೋವಾದಲ್ಲಿರುವ ತಮ್ಮ ಪಕ್ಷದ ಸರಕಾರದ ಹಿತಾಸಕ್ತಿಗೆ ವಿರೋಧವಾಗಿ ಏನನ್ನೂ ಮಾಡುವುದಿಲ್ಲ. ಈ ವಿವಾದವನ್ನು ಇತ್ಯರ್ಥ ಪಡಿಸಬೇಕೆಂದರೆ ಸೌಹಾರ್ದ ಮಾತುಕತೆಯೊಂದೇ ಪರಿಹಾರವಾಗಿದೆ. ಆದರೆ, ಸೌಹಾರ್ದ ಮಾತುಕತೆಯ ಮೂಲಕ ಇದನ್ನು ಬಗೆಹರಿಸುವ ಇಚ್ಛೆ ಪ್ರಧಾನಿಗೆ ಇಲ್ಲ. ಅಂತಿಮವಾಗಿ ನ್ಯಾಯಮಂಡಳಿಯ ತೀರ್ಪಿಗೆ ನಾವು ಕಾಯಬೇಕಾಗಿದೆ. ಈಗ ಈ ವಿವಾದ ಶೀಘ್ರದಲ್ಲೇ ವಿಚಾರಣೆಯ ಹಂತಕ್ಕೆ ಬರಲಿರುವುದರಿಂದ ನ್ಯಾಯಮಂಡಳಿ ತೀರ್ಪಿಗೆ ಕಾಯುವುದು ಅನಿವಾರ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News