ಕುರಿ-ಮೇಕೆಗಳಿಗೆ ಪಲ್ಸ್ ಪೋಲಿಯೋ ಮಾದರಿಯಲ್ಲಿ ಲಸಿಕೆ: ಸಚಿವ ಎ.ಮಂಜು

Update: 2018-01-31 13:34 GMT

ಬೆಂಗಳೂರು, ಜ. 31: ಕುರಿ, ಮೇಕೆಗಳಿಗೆ ತಗಲುವ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪಲ್ಸ್ ಪೋಲಿಯೋ ಮಾದರಿಯಲ್ಲಿ ಲಸಿಕೆಯನ್ನು ಕಡ್ಡಾಯಗೊಳಿಸಲು ಚಿಂತನೆ ನಡೆಸಲಾಗಿದೆ ಎಂದು ಪಶು ಸಂಗೋಪನೆ ಸಚಿವ ಎ.ಮಂಜು ತಿಳಿಸಿದ್ದಾರೆ.

ಬುಧವಾರ ನಗರದ ಹೆಬ್ಬಾಳದ ಕರ್ನಾಟಕ ಪಶು ವೈದ್ಯಕೀಯ ಪರಿಷತ್ ಸಭಾಂಗಣದಲ್ಲಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ವತಿಯಿಂದ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಪಧಾಧಿಕಾರಿಗಳು ಸೇರಿದಂತೆ ಕುರಿಗಾರರಿಗೆ ಆಯೋಜಿಸಿದ್ದ ರಾಜ್ಯ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕುರಿ, ಮೇಕೆಗಳಿಗೆ ಅಕಾಲಿಕವಾಗಿ ಬಾಧಿಸುವ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಲಸಿಕೆಯನ್ನು ಕಡ್ಡಾಯಗೊಳಿಸಲಾಗುವುದೆಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಹೈನುಗಾರಿಕೆ ಕೇವಲ ಒಂದು ಉಪಕಸುಬಾಗಿ ಉಳಿದಿಲ್ಲ. ಐಟಿ, ಬಿಟಿ ಕ್ಷೇತ್ರದ ಇಂಜಿನಿಯರ್‌ಗಳು ಕುರಿಸಾಕಾಣಿಕೆಯಲ್ಲಿ ತೊಡಗುತ್ತಿದ್ದಾರೆ. ಹೀಗಾಗಿ ಕುರಿ ಸಾಕಾಣಿಕೆ ಒಂದು ಉದ್ಯಮವಾಗಿ ಬೆಳೆಯುತ್ತಿದೆ. ಹೀಗಾಗಿ ಯುವಕರು ಹೆಚ್ಚಾಗಿ ಹೈನುಗಾರಿಕೆಯಲ್ಲಿ ತೊಡಗಲು ಆಸಕ್ತಿ ವಹಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.

ಸರಕಾರದಿಂದ ಕಳೆದ 5 ವರ್ಷದ ಅವಧಿಯಲ್ಲಿ 75,410 ಕುರಿ, ಮೇಕೆಗಳು ಆಕಸ್ಮಿಕವಾಗಿ ಮರಣ ಹೊಂದಿವೆ. ಇವುಗಳ ವಾರಸುದಾರರಿಗೆ 41.57 ಕೋಟಿ ರೂ. ಪರಿಹಾರಧನವಾಗಿ ನೀಡಲಾಗಿದೆ. ಅಲ್ಲದೆ, 237 ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳಿಗೆ 11.85 ಕೋಟಿ ರೂ. ನೀಡಲಾಗಿದೆ ಎಂದು ಹೇಳಿದರು.

ಗಿರಿಜನ ಉಪಯೋಜನೆಯಡಿ 625 ಘಟಕಗಳಿಗೆ 241 ಕೋಟಿ ರೂ. ನೀಡಲಾಗಿದೆ. ಕಳೆದ ಐದು ವರ್ಷಗಳಲ್ಲಿ 28,400 ಕುರಿಗಾರರಿಗೆ 53 ಲಕ್ಷ ರೂ. ವೆಚ್ಚದಲ್ಲಿ ತರಬೇತಿ ಸೇರಿದಂತೆ ಇನ್ನಿತರ ಯೋಜನೆ ಜಾರಿಗೊಳಿಸಲಾಗಿದೆ. ರೈತರು ಸರಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕೆಂದು ಸಲಹೆ ನೀಡಿದರು.

ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ. ಕೃಷ್ಣಪ್ಪ ಮಾತನಾಡಿ, ಕುರಿ, ಮೇಕೆ ಸಾಕಣೆದಾರರಿಗೆ ಮಾರುಕಟ್ಟೆ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಸಿರಾ ತಾಲೂಕಿನ ಚೀರನಹಳ್ಳಿಯಲ್ಲಿ 26 ಕೋಟಿ ವೆಚ್ಚದಲ್ಲಿ ಘಟಕ ಆರಂಭ ಮಾಡುತ್ತಿದ್ದು, ದಿನನಿತ್ಯ 3 ಸಾವಿರ ಕೆ.ಜಿ.ಕುರಿ, ಮೇಕೆ ಮಾಂಸ ಉತ್ಪಾದನೆ ಮಾಡುವ ಗುರಿ ಹೊಂದಲಾಗಿದೆ ಎಂದ ಅವರು, ರಾಜ್ಯದಲ್ಲಿ ಸಂಗ್ರಹವಾದ ಉಣ್ಣೆಯನ್ನು ವೈಜ್ಞಾನಿಕ ವಿಧಾನದಲ್ಲಿ ಸಂಸ್ಕರಿಸಿ, ಮೌಲ್ಯವರ್ದಿತ ಉತ್ಪನ್ನಗಳನ್ನು ಉತ್ಪಾದಿಸಲು ಉಣ್ಣೆ ಸಂಸ್ಕರಣಾ ಘಟಕಗಳನ್ನು ಸ್ಥಾಪನೆ ಮಾಡಲಾಗುವುದು ಎಂದು ಹೇಳಿದರು.

ಕಾರ್ಯಾಗಾರ: ಕುರಿ, ಮೇಕೆ ಪರೋಪ ಜೀವಿಗಳ ನಿಯಂತ್ರಣ ಹಾಗೂ ಕುರಿಗಳಲ್ಲಿ ನೀಲಿನಾಲಿಗೆ ರೋಗ, ಸಿಡುಬು ಕಾಯಿಲೆ ನಿಯಂತ್ರಣ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಕರ್ನಾಟಕದ ವಿವಿಧ ಸಂಘಗಳಿಂದ 350ಕ್ಕೂ ಹೆಚ್ಚು 800ಕ್ಕೂ ಹೆಚ್ಚು ಜನರು ತಾಂತ್ರಿಕ ಕಾರ್ಯಾಗಾರದಲ್ಲಿ ಪಾಲ್ಗೊಂಡು ಕುರಿ, ಮೇಕೆ ಸಾಕಾಣಿಕೆ ಹಾಗೂ ಅವುಗಳಿಗೆ ತಗಲುವ ರೋಗಗಳ ನಿಯಂತ್ರಣದ ಬಗ್ಗೆ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ‘ಕುರಿಮಿತ್ರ’ ಪತ್ರಿಕೆ ಹಾಗೂ ನಿಗಮದ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಪಶುಪಾಲನ, ಪಶು ವೈದ್ಯಕೀಯ ಸೇವಾ ಇಲಾಖೆ ನಿರ್ದೇಶಕ ವೈ.ಎಚ್.ಗೋಪಾಲ ಕೃಷ್ಣ, ಪಶುವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ.ಪ್ಲಾಸಿ ಡಿಸೋಜಾ, ಪಶು ಚಿಕಿತ್ಸಾ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ರಮೇಶ್ ಪಿ.ಟಿ. ಸೇರಿದಂತೆ ಇನ್ನಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News