ಫೆ.2 ರಂದು ರಾಜ್ಯಾದ್ಯಂತ 'ಮೋದಿ ಪಕೋಡ ಸ್ಟಾಲ್'
ಬೆಂಗಳೂರು, ಜ.31: ಎಲ್ಲ ಸ್ವಯಂ ಉದ್ಯೋಗಸ್ಥರಿಗೆ ಬದುಕಿನ ಭದ್ರತೆ ಮತ್ತು ಕನಿಷ್ಠ ಸಂಪಾದನೆ ಖಾತರಿ ಮಾಡುವ ಯೋಜನೆ ರೂಪಿಸಬೇಕು ಎಂದು ಆಗ್ರಹಿಸಿ ಉದ್ಯೋಗಕ್ಕಾಗಿ ಯುವ ಜನರು ವೇದಿಕೆ ವತಿಯಿಂದ ಫೆ.2 ರಂದು ರಾಜ್ಯಾದ್ಯಂತ ಮೋದಿ ಪಕೋಡ ಸ್ಟಾಲ್ ನಡೆಸುವ ಮೂಲಕ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆ ಸಂಚಾಲಕ ಮುತ್ತುರಾಜ್, ವರ್ಷಕ್ಕೆ ಒಂದು ಕೋಟಿ ಉದ್ಯೋಗ ಸೃಷ್ಟಿ ಮಾಡುವ ಭರವಸೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ಅಧಿಕಾರಕ್ಕೆ ಬಂದು ಮೂರು ವರ್ಷಗಳು ಕಳೆಯುತ್ತಿದ್ದರೂ ಒಂದು ಕೋಟಿ ಉದ್ಯೋಗಗಳನ್ನು ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇತ್ತೀಚಿಗೆ ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುವ ಸಂದರ್ಭದಲ್ಲಿ ಉತ್ತರ ನೀಡದೇ ಕೃಷಿ ಮಾಡುವುದು, ಟೀ ಮಾರುವುದು, ಪಕೋಡ ಮಾರುವುದು ಉದ್ಯೋಗವಲ್ಲವೇ ಎಂದು ಪ್ರಶ್ನಿಸಿದ್ದಾರೆ. ಈ ಮೂಲಕ ಸ್ವಾಭಿಮಾನದಿಂದ ಜೀವನ ನಡೆಸುತ್ತಿರುವವರನ್ನು ಅವಮಾನಿಸಿದ್ದಾರೆ ಎಂದು ಅವರು ಕಿಡಿಕಾರಿದರು.
ಫೆ.4 ರಂದು ಪ್ರಧಾನಿ ಮೋದಿ ಬಿಜೆಪಿ ಪರಿವರ್ತನಾಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ನಗರಕ್ಕೆ ಆಗಮಿಸುತ್ತಿದ್ದಾರೆ. ಈ ವೇಳೆ ಪಕೋಡ ಮಾರುವವರು ಸೇರಿದಂತೆ 4 ಸಾವಿರ ವಿವಿಧ ಸ್ವಾಬಿಮಾನದ ಜೀವನಕ್ಕಾಗಿ ದುಡಿಯುತ್ತಿರುವ ಕಸುಬುದಾರರ ಅನುಕೂಲಕ್ಕಾಗಿ ನಿರ್ದಿಷ್ಟ ಯೋಜನೆಯನ್ನು ಮುಂದಿಡಬೇಕು ಎಂದು ಆಗ್ರಹಿಸಿ ಫೆ.2 ರಂದು ಪಕೋಡ ಸ್ಟಾಲ್ ಮಾಡುವ ಮೂಲಕ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಘನತೆಯಿಂದ ಬದುಕಲು ಸಾಧ್ಯವಿರುವಷ್ಟು ಸಂಪಾದನೆಯನ್ನು ಖಾತರಿ ಮಾಡಬೇಕು. ಎಲ್ಲರಿಗೂ ಸರಕಾರದ ವತಿಯಿಂದ ಇಎಸ್‌ಐ, ಪಿಎಫ್ ಸೌಲಭ್ಯಗಳನ್ನು ಕಲ್ಪಿಸಬೇಕು. ಅಸಂಘಟಿತರಾಗಿರುವ, ಚೆದುರಿ ಹೋಗಿರುವ ಎಲ್ಲರಿಗೂ ಸರಕಾರಿ ಸೌಲಭ್ಯಗಳು ಸಿಗುವಂತಾಗಬೇಕು. ಅದಕ್ಕಾಗಿ ಯೋಜನೆಯೊಂದನ್ನು ಘೋಷಣೆ ಮಾಡಿ, ಈ ಕೂಡಲೇ ಜಾರಿ ಮಾಡಬೇಕು ಎಂದಿಲ್ಲ. ಕನಿಷ್ಠ 100 ದಿನಗಳೊಳಗೆ ಜಾರಿ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ವೇದಿಕೆ ಮುಖಂಡರಾದ ಎಚ್.ವಿ.ವಾಸು, ಸರೋವರ, ಪ್ರತಿಮಾ ಆರ್.ನಾಯ್ಕಿ, ರಾಜಶೇಖರ್ ಅಕ್ಕಿ ಉಪಸ್ಥಿತರಿದ್ದರು.