ಫೆ. 2ರಂದು ಆಪರೇಷನ್ ಥಿಯೇಟರ್ ತಂತ್ರಜ್ಞ ಸಿಬ್ಬಂದಿ ಮುಷ್ಕರ
ಬೆಂಗಳೂರು, ಜ.31: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಡಿ ಬರುವ ಎಲ್ಲಾ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗಳಲ್ಲಿ ಓಟಿ ತಂತ್ರಜ್ಞರ ನೇಮಕ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಆಪರೇಷನ್ ಥಿಯೇಟರ್ ತಂತ್ರಜ್ಞ ಸಿಬ್ಬಂದಿ ಫೆ.2 ರಂದು ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಪರೇಷನ್ ಥಿಯೇಟರ್ ಟೆಕ್ನಾಲಜಿಸ್ಟ್ ಯೂನಿಯನ್‌ನ ಗೌರವಾಧ್ಯಕ್ಷ ಡಾ.ಜಿ.ಸಂಜೀವರೆಡ್ಡಿ, ಅಂದು ಬೆಳಗ್ಗೆಯಿಂದ ಸಂಜೆಯವರೆಗೂ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಓಟಿ ತಂತ್ರಜ್ಞರು ಮುಷ್ಕರ ನಡೆಸಲಿದ್ದು, ಒಂದು ದಿನದ ಮಟ್ಟಿಗೆ ತಮ್ಮ ಅಸಹಾಯಕತೆ ವ್ಯಕ್ತಪಡಿಸಲಾಗುತ್ತದೆ ಹಾಗೂ ಬೇಡಿಕೆ ಈಡೇರಿಸುವಂತೆ ಮನವಿ ಮಾಡಲಾಗುತ್ತದೆ. ಅದಕ್ಕೆ ಸರಕಾರ ಸೂಕ್ತ ಪರಿಹಾರ ನೀಡಲಿಲ್ಲ ಎಂದರೆ ಮುಂದಿನ ದಿನಗಳಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.
ಆರೋಗ್ಯ ಸೇವೆಯಲ್ಲಿ ಏರುಪೇರಾಗುವ ಸಾಧ್ಯತೆ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಡಿ ಬರುವ ಎಲ್ಲಾ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗಳಲ್ಲಿ ಓಟಿ ತಂತ್ರಜ್ಞರ ನೇಮಕ ಮಾಡುವುದು, ಡಿಪ್ಲೋಮಾ ಇನ್ ಆಪರೇಷನ್ ಥಿಯೇಟರ್ ಟೆಕ್ನಾಲಜಿ ಕೋರ್ಸ್‌ನ್ನ್ನು(ಡಿಓಟಿಟಿ) ಸಿ ಮತ್ತು ಆರ್ (ವೃಂದ ಮತ್ತು ನೇಮಕಾತಿ) ಅಡಿ ತಂದು, ಸಿಬ್ಬಂದಿ ನೇಮಕಕ್ಕೆ ಆಗ್ರಹಿಸಿ ಮುಷ್ಕರ ನಡೆಸಲು ಮುಂದಾಗಿದ್ದು, ಅಂದು ಆರೋಗ್ಯ ಸೇವೆಯಲ್ಲಿ ಏರುಪೇರಾಗುವ ಸಾಧ್ಯತೆಗಳಿಗೆ. ಈ ನಿಟ್ಟಿನಲ್ಲಿ ಮುಷ್ಕರದಿಂದ ರೋಗಿಗಳಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಆಸ್ಪತ್ರೆಗೆ ಒಬ್ಬರಂತೆ ಓಟಿ ತಂತ್ರಜ್ಞರು ಕರ್ತವ್ಯ ನಿರ್ವಹಿಸಲಿದ್ದಾರೆ ಎಂದರು.
3250 ತಂತ್ರಜ್ಞರ ಅಗತ್ಯವಿದೆ: ರಾಜ್ಯದಲ್ಲಿ ಸುಮಾರು 3250ಕ್ಕೂ ಅಧಿಕ ಮಂದಿ ಓಟಿ ತಂತ್ರಜ್ಞರ ಅಗತ್ಯವಿದೆ. ಅಷ್ಟು ಮಂದಿಯನ್ನು ನೇಮಕ ಮಾಡಬೇಕು ಎಂದು ಸರಕಾರಕ್ಕೆ ಮನವಿ ಮಾಡಲಾಗಿತ್ತು. ಅದಕ್ಕೆ ಸ್ಪಂದಿಸಿದ್ದ ಆರೋಗ್ಯ ಸಚಿವ ರಮೇಶ್ ಕುಮಾರ್, ಶೀಘ್ರದಲ್ಲೇ ನೇಮಕ ಮಾಡುವ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಯೂನಿಯನ್ ಅಧ್ಯಕ್ಷ ಲೋಕೇಶ್, ಪ್ರಧಾನ ಕಾರ್ಯದರ್ಶಿ ಸಂತೋಷ್‌ಕುಮಾರ್ ಉಪಸ್ಥಿತರಿದ್ದರು.