ಕನ್ನಡಪರ ಸಂಘಟನೆಗಳ ಫೆ.4ರ ಬೆಂಗಳೂರು ಬಂದ್ ಸರಕಾರಿ ಪ್ರೇರಿತ: ಆರ್.ಅಶೋಕ್
Update: 2018-01-31 19:22 IST
ಬೆಂಗಳೂರು, ಜ.31: ಕನ್ನಡಪರ ಸಂಘಟನೆಗಳು ಫೆ.4ರಂದು ಕರೆ ನೀಡಿರುವ ‘ಬೆಂಗಳೂರು ಬಂದ್’ ರಾಜ್ಯ ಸರಕಾರ ಪ್ರೇರಿತವೆಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ತಿಳಿಸಿದರು.
ಬುಧವಾರ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫೆ.4 ಸರಕಾರಿ ರಜಾ ದಿನವಾಗಿದೆ. ರಾಜ್ಯದ ಇತಿಹಾಸದಲ್ಲಿ ರಜಾದಿನದಂದು ಬಂದ್‌ಗೆ ಕರೆ ನೀಡಿರುವುದು ಇದೇ ಮೊದಲಾಗಿದೆ. ಒಟ್ಟಾರೆ ರಾಜ್ಯ ಸರಕಾರ ಕೆಲವೊಂದು ಸಂಘಟನೆಗಳ ಮೂಲಕ ಬಿಜೆಪಿ ವಿರುದ್ಧ ಷಡ್ಯಂತ್ರ ರೂಪಿಸುತ್ತಿದೆ ಎಂದು ಆರೋಪಿಸಿದರು.
ಫೆ.4ರಂದು ರಾಜ್ಯ ಬಿಜೆಪಿ ಘಟಕ ಬೆಂಗಳೂರಿನಲ್ಲಿ ಬೃಹತ್ ಸಮಾವೇಶವನ್ನು ಹಮ್ಮಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಸಮಾವೇಶದಲ್ಲಿ ಮುಖ್ಯ ಭಾಷಣ ಮಾಡಲಿದ್ದಾರೆ. ಈ ಕಾರ್ಯಕ್ರಮವನ್ನು ವಿಫಲಗೊಳಿಸುವುದಕ್ಕಾಗಿ ಕನ್ನಡಪರ ಸಂಘಟನೆಗಳು ಸಂಚು ರೂಪಿಸಿವೆ. ಈ ಸಂಘಟನೆಗಳಿಗೆ ರಾಜ್ಯ ಸರಕಾರ ಬೆನ್ನೆಲುಬಾಗಿದೆ ಎಂದು ಅವರು ಕಿಡಿಕಾರಿದರು.