×
Ad

ಎಕರೆಗೆ 10 ಸಾವಿರದಂತೆ 430 ಎಕರೆ ಸಿಮೆಂಟ್ ಕಂಪೆನಿಗೆ ಸರಕಾರಿ ಭೂಮಿ ಗುತ್ತಿಗೆ: ಎಸ್.ಕೆ.ಕಾಂತ ಆರೋಪ

Update: 2018-01-31 22:39 IST

ಬೆಂಗಳೂರು, ಜ.31: ಕಲಬುರ್ಗಿ ಜಿಲ್ಲೆಯ ಬೆನಕನಹಳ್ಳಿ ಮತ್ತು ಕೋಡ್ಲಾ ಗ್ರಾಮಗಳ ಹಲವು ಸರ್ವೆ ನಂಬರ್‌ಗಳಲ್ಲಿ ಮುಟ್ಟುಗೋಲು ಹಾಕಿಕೊಂಡಿದ್ದ ಭೂಮಿಯನ್ನು ರಾಜಸ್ತಾನ ಮೂಲದ ಮೆ. ಶ್ರೀ ಸಿಮೆಂಟ್ಸ್ ಲಿಮಿಟೆಡ್‌ಗೆ ಅತ್ಯಂತ ಕಡಿಮೆ ಬೆಲೆಗೆ ದೀರ್ಘಾವಧಿಗೆ ಗುತ್ತಿಗೆ ನೀಡಿರುವದನ್ನು ಮಾಜಿ ಸಚಿವ ಎಸ್.ಕೆ. ಕಾಂತಾ ಖಂಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಸಿಮೆಂಟ್ಸ್‌ನವರು ಸರಕಾರದ ಅನುಮತಿ ಇಲ್ಲದೆ 2008ರಲ್ಲಿ ಬೇನಾಮಿ ಹೆಸರಿನಲ್ಲಿ 1,360 ಎಕರೆ ಭೂಮಿಯನ್ನು ಕಾನೂನು ಬಾಹಿರವಾಗಿ ಖರೀದಿ ಮಾಡಿದ್ದರು. ಅದನ್ನು ಪತ್ತೆ ಮಾಡಿದ ಕೆಎಎಸ್ ಅಧಿಕಾರಿ ಲತಾಕುಮಾರಿ 2010ರಲ್ಲಿ 242 ಎಕರೆ ಭೂಮಿಯನ್ನು ಮುಟ್ಟುಗೋಲು ಹಾಕಿಕೊಂಡರು. ಇದಾದ ಬಳಿಕ 2012ರಲ್ಲಿ ಐಎಎಸ್ ಅಧಿಕಾರಿ ಡಿ.ಕೆ.ರವಿ 1106 ಎಕರೆ ಭೂಮಿಯನ್ನು ಮುಟ್ಟುಗೋಲು ಹಾಕಿಕೊಂಡರು ಎಂದು ಹೇಳಿದರು.

ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡ ಭೂಮಿಯನ್ನು ಭೂ ಸುಧಾರಣಾ ಕಾಯಿದೆಯ ಪ್ರಕಾರ ಹಂಚಿಕೆ ಮಾಡಬೇಕಿತ್ತು. ಆದರೆ 2010ರಿಂದ 2015ವರೆಗಿನ ಮೂವರು ಸರಕಾರದ ಮುಖ್ಯ ಕಾರ್ಯದರ್ಶಿಗಳು ಸೇರಿದಂತೆ ಏಳು ಮಂದಿ ಐಎಎಸ್ ಅಧಿಕಾರಿಗಳ ಪಿತೂರಿಯಿಂದ ಮುಟ್ಟುಗೋಲು ಹಾಕಿಕೊಂಡ ಭೂಮಿಯನ್ನು ಮತ್ತದೆ ಶ್ರೀ ಸಿಮೆಂಟ್ಸ್ ಲಿಮಿಟೆಡ್‌ಗೆ ಗುತ್ತಿಗೆ ನೀಡಿದ್ದಾರೆ ಎಂದು ಅವರು ಆರೋಪಿಸಿದರು.

ಮುಟ್ಟುಗೋಲು ಹಾಕಿಕೊಂಡ ಭೂಮಿಯನ್ನು 79ಎ ಮತ್ತು 79ಬಿ ಅಡಿಯಲ್ಲಿ ಗುತ್ತಿಗೆಗೆ ನೀಡಲು ಬರುವುದಿಲ್ಲ ಮತ್ತು ಭೂ ಸುಧಾರಣಾ ಕಾಯಿದೆಯ ಸೆಕ್ಷನ್ 77ರ ಪ್ರಕಾರ ಶೇ.75ರಷ್ಟು ಎಸ್ಸಿ ಮತ್ತು ಎಸ್ಟಿಗೆ ಹಾಗೂ ಶೇ.25ರಷ್ಟು ಭೂಮಿ ಇಲ್ಲದವರಿಗೆ ಹಂಚಿಕೆಯಾಗಬೇಕು. ಆದರೆ, ಏಳು ಜನ ಐಎಎಸ್ ಅಧಿಕಾರಿಗಳು ಒಮ್ಮತಗೊಂಡು ಈ ವಿಚಾರವನ್ನು ಸಚಿವ ಸಂಪುಟದ ಮುಂದೆ ಬರುವಂತೆ ಮಾಡಿ, ಅದನ್ನು ಮತ್ತೆ ಶ್ರೀ ಸಿಮೆಂಟ್ಸ್‌ಗೆ 30 ವರ್ಷಗಳಿಗೆ ಪ್ರತಿ ಎಕರೆಗೆ ಕೇವಲ 10 ಸಾವಿರ ರೂ.ನಂತೆ ಗುತ್ತಿಗೆ ನೀಡಲಾಗಿದೆ ಎಂದರು.

ಅಲ್ಲದೆ, ಶ್ರೀ ಸಿಮೆಂಟ್ಸ್‌ಗೆ ಸಹಾಯ ಮಾಡುವ ದೃಷ್ಟಿಯಿಂದ ಕಂದಾಯ ಇಲಾಖೆ ಮತ್ತು ಕಾನೂನು ಇಲಾಖೆಯ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಬಡವರಿಗೆ ಸಹಾಯ ಮಾಡಲೆಂದೇ ಇರುವ ಈ ನಿಬಂಧನೆಯನ್ನು ಉಲ್ಲೇಖಿಸದೆ ಸಚಿವ ಸಂಪುಟವನ್ನು ದಾರಿ ತಪ್ಪಿಸಿದ್ದಾರೆ. ಮುಟ್ಟುಗೋಲು ಹಾಕಿಕೊಂಡ ಭೂಮಿಯ ಜತೆಗೆ 430 ಎಕರೆ ಸರಕಾರಿ ಭೂಮಿಯನ್ನೂ ಗುತ್ತಿಗೆಗೆ ನೀಡಲಾಗಿದೆ ಎಂದು ದಾಖಲೆಗಳ ಸಹಿತ ಕಾಂತಾ ಅವರು ಆರೋಪ ಮಾಡಿದರು.

ನಾನು ಸಲ್ಲಿಸಿದ ದೂರುಗಳು ಸರಕಾರದಲ್ಲಿ ಮತ್ತು ಲೋಕಾಯುಕ್ತದಲ್ಲಿ ಬಾಕಿಯಿರುವಾಗಲೇ ಕಂದಾಯ ಇಲಾಖೆಯು ಗುಲ್ಬರ್ಗಾ ಜಿಲ್ಲಾಧಿಕಾರಿಗಳಿಗೆ 2017ರ ಜೂನ್‌ನಲ್ಲಿ ಪತ್ರ ಬರೆದು ಶ್ರೀ ಸಿಮೆಂಟ್ಸ್‌ನಿಂದ ಯಾವುದೇ ಅರ್ಜಿ ಪಡೆಯದೆ ಭೂಮಿ ಪರಿವರ್ತನೆ ಶುಲ್ಕವನ್ನು ಸಂಗ್ರಹಿಸಲು ನಿರ್ದೇಶನ ನೀಡಿದೆ. ಈ ಹಗರಣದಲ್ಲಿ ಉಚ್ಚ ನ್ಯಾಯಾಲಯದಿಂದ ನಿಯುಕ್ತಿಗೊಂಡ ನ್ಯಾಯಾಂಗ ಅಧಿಕಾರಿಯೂ ಭಾಗಿಯಾಗಿದ್ದಾರೆ. ಹೀಗಾಗಿ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರು ಈ ವಿಷಯದ ಬಗ್ಗೆ ಗಮನ ಹರಿಸಿ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಸಾಮಾಜಿಕ ಹೋರಾಟಗಾರ್ತಿ ಜಯಶ್ರೀ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಎಂ.ಎನ್.ವಿಜಯಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News