ತುಂಬೆ ಡ್ಯಾಂ ಹಿನ್ನೀರಿನಿಂದ ಕೃಷಿ ನಾಶದ ಭೀತಿ!

Update: 2018-02-01 13:03 GMT

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳು ಹೇಳಿರುವುದಕ್ಕಿಂತ ಹೆಚ್ಚಿನ ಪ್ರದೇಶಗಳು ಮುಳುಗಡೆಯಾಗಿವೆ. ಆರು ಮೀಟರ್ ಮುಳುಗಡೆಯಾಗುವ ಸಂತ್ರಸ್ತರ ಪಟ್ಟಿಯಲ್ಲಿ ಅನೇಕ ರೈತರ ಹೆಸರುಗಳನ್ನು ಕೈಬಿಡಲಾಗಿದೆ. ಒಂದೇ ಖಾತೆಯಲ್ಲಿ 1.43 ಎಕರೆ ಮುಳುಗಡೆ ಪ್ರದೇಶ ಎಂದು ಗುರುತಿಸಲಾಗಿದ್ದರೂ 2 ಎಕರೆಯಷ್ಟು ಪ್ರದೇಶ ಮುಳುಗಡೆಯಾಗಿರುವ ಉದಾಹರಣೆಗಳು ಸಜೀಪಮುನ್ನೂರು ಗ್ರಾಮದಲ್ಲಿದೆ. ರೈತ ದೇಶದ ಬೆನ್ನೆಲುಬು ಎಂದು ಹೇಳುವುದಷ್ಟೇ ಅಲ್ಲ ಸರಕಾರ ಅವರ ಸಮಸ್ಯೆಗೂ ಸ್ಪಂದಿಸಬೇಕು.

ಎನ್.ಕೆ.ಇದಿನಬ್ಬ, ಕಾರ್ಯದರ್ಶಿ ತುಂಬೆ ವೆಂಟೆಡ್ ಡ್ಯಾಂ ಸಂತ್ರಸ್ತ ರೈತರ ಹೋರಾಟ ಸಮಿತಿ

ಬಂಟ್ವಾಳ, ಜ.31: ತಾಲೂಕಿನ ತುಂಬೆ ನೂತನ ವೆಂಟೆಡ್ ಡ್ಯಾಂನಲ್ಲಿ ಆರು ಮೀಟರ್ ನೀರು ಸಂಗ್ರಹಣೆಯಿಂದ ಇಲ್ಲಿನ ನದಿ ತೀರದ ಕೆಲ ಪ್ರದೇಶದ ಕೃಷಿ ಜಮೀನು ಜಲಾವೃತಗೊಂಡಿದೆ.

ಬೇಸಿಗೆಯಲ್ಲಿ ನೀರಿನ ಅಭಾವ ಉಂಟಾಗದಂತೆ ಮುಂದಾಲೋಚನೆಯಡಿ ಮಂಗಳೂರು ಮಹಾನಗರ ಪಾಲಿಕೆಯು ನೀರಿನ ಪ್ರಮಾಣವನ್ನು ಒಂದು ಮೀಟರ್‌ಗೆ ಎತ್ತರಿಸಿದ್ದು, ಇದರಿಂದ ಯೋಜನೆಯ ಸಂತ್ರಸ್ತರಲ್ಲ ದವರ ಜಮೀನಿಗೂ ನೀರು ನುಗ್ಗಿದೆ. ಆರು ಮೀಟರ್ ನೀರು ಸಂಗ್ರಹಿಸುವ ಮೊದಲು ಮಹಾನಗರ ಪಾಲಿಕೆಯು ಸಿದ್ಧತೆಯ ಪೂರ್ವವಾಗಿ ಸರ್ವೇಕಾರ್ಯ ನಡೆಸಿತ್ತು. ಮುಳುಗಡೆಯಾಗುವುದಿಲ್ಲ ಎಂದು ಮನಪಾ ವರದಿ ನೀಡಿದ್ದ ಜಮೀನಿನಲ್ಲೂ ನೀರು ನಿಂತಿದ್ದು, ಈ ಜಿಮೀನಿನ ಮಾಲಕರು ಆತಂಕಕ್ಕೀಡಾಗಿದ್ದಾರೆ.

ಸಜೀಪ ಮುನ್ನೂರು ಗ್ರಾಮದ ನಂದಾವರ ಬಳಿಯ ಕೆಲ ಜಮೀನಿನಲ್ಲಿ ನೀರು ತುಂಬಿಕೊಂಡಿದ್ದು, ಕೃಷಿ ನಾಶದ ಭೀತಿ ಎದುರಾಗಿದೆ. ಆದರೆ ಸಂತ್ರಸ್ತ ರೈತರ ಪಟ್ಟಿಯಲ್ಲಿ ಇವರ ಹೆಸರಿಲ್ಲದೆ ಇರುವುದು ಅಚ್ಚರಿ ಮೂಡಿಸಿದೆ.

ಸರ್ವೇಯಲ್ಲಿ ಲೋಪ:ಮುಳುಗಡೆಯಾಗುವುದಿಲ್ಲ ಎಂದಿದ್ದ ಜಮೀನಿಗೆ ನೀರು ಆವರಿಸಿದೆ. ಆದರೆ ನೀರು ತುಂಬಿಕೊಳ್ಳುತ್ತದೆ ಎಂದು ಪಟ್ಟಿಯಲ್ಲಿ ಹೆಸರು ಸೇರಿಸಿದ್ದ ರೈತರ ತೋಟಕ್ಕೆ ನೀರು ನುಗ್ಗಿಲ್ಲ. ಸಂತ್ರಸ್ತ ರೈತರಿಗೆ ಮಾಹಿತಿ ನೀಡದೇ ಜಮೀನು ಸರ್ವೇ ಮಾಡಲಾಗಿದೆ. ಜಮೀನು ಸರ್ವೇ ಲೋಪದಿಂದಾಗಿ ಇಂತಹ ಅಚಾತುರ್ಯಗಳು ಅಲ್ಲಲ್ಲಿ ನಡೆದಿವೆ ಎಂದು ಸಂತ್ರಸ್ತ ರೈತರು ಆರೋಪಿಸಿದ್ದಾರೆ.

ಜಮೀನಿನ ಸಮಕ್ಷಮದಲ್ಲಿಯೇ ಮನವಿ ಮಾಡಿಕೊಂಡರೂ ಅದನ್ನು ನಿರ್ಲಕ್ಷಿಸಿದ ಪರಿಣಾಮ ಈ ಪರಿಸ್ಥಿತಿ ನಿರ್ಮಾಣಗೊಂಡಿದೆ. ಅಲ್ಲದೆ ಬಿ.ಮೂಡ ಗ್ರಾಮದ ಶಾಂತಿ ಅಂಗಡಿಯ ನಿವಾಸಿ ಎನ್.ಹುಸೈನ್‌ರ ಜಮೀನ್‌ಗೆ 5 ಮೀಟರ್ ನೀರು ಸಂಗ್ರಹಣೆಯಿಂದಾಗಿ ನೀರು ತುಂಬಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ರೈತರು ದೂರಿದ್ದಾರೆ.

ಎಎಂಆರ್ ನಿಂದ ವಾರಕ್ಕೊಮ್ಮೆ ನೀರು ಬಿಡಲಾಗುತ್ತದೆ. ಇದರರಿಂದ ನೀರಿನ ಸಾಂದ್ರತೆ ಇನ್ನಷ್ಟು ಹೆಚ್ಚಾಗುತ್ತದೆ. ಅಲ್ಲದೆ ತಮ್ಮ ಫಸಲು ಬಂದ ಜಮೀನಿಗೆ ನೀರು ನುಗ್ಗಿ ತದನಂತರ ನೀರಿನ ಪ್ರಮಾಣ ಕಡಿಮೆಯಾದಾಗ ಅಡಿಕೆಗಳು ನದಿಪಾಲಾಗುತ್ತದೆ ಎಂಬುದು ಸಂತ್ರಸ್ತ ರೈತರೊಬ್ಬರ ಅಳಲು ತೋಡಿಕೊಂಡಿದ್ದಾರೆ.

ನಿಯಮ ಉಲ್ಲಂಘನೆ: 2016 ಜ.16ರಂದು ರಾಜ್ಯ ಹೈಕೋರ್ಟ್ ರೈತರಿಗೆ ಲಿಖಿತವಾಗಿ ಪೂರ್ವ ಮಾಹಿತಿ ನೀಡಿ ರೈತರ ಸಮಕ್ಷಮದಲ್ಲೇ ಮುಳುಗಡೆ ಜಮೀನಿನ ಸರ್ವೇ ಮಾಡಬೇಕೆಂದು ಸ್ಪಷ್ಟ, ಪಾರದರ್ಶಕ ಮಾಹಿತಿ ನೀಡುವಂತೆ ಸರಕಾರಕ್ಕೆ ಆದೇಶದ ನೀಡಿದ್ದರೂ, ಇದನ್ನು ಉಲ್ಲಂಘನೆ ಮಾಡಲಾಗಿದೆ. 2015ರ ಎಪ್ರಿಲ್ ತಿಂಗಳಲ್ಲಿ ಅಂದಿನ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಮುಳುಗಡೆ ಪ್ರದೇಶಕ್ಕೆ ಭೇಟಿ ನೀಡಿ, ಕೇಂದ್ರ ಜಲ ಆಯೋಗ ನಿರ್ದೆಶನದಂತೆ 7+1=8ಮೀ. ಎತ್ತರಕ್ಕೆ ಮುಳುಗಡೆ ಜಮೀನಿನ ಸರ್ವೇಗೆ ಸಂತ್ರಸ್ತ ರೈತರಿಗೆ ಲಿಖಿತ ನೋಟಿಸ್ ನೀಡಿದ್ದರು. ಅದನ್ನು ಪಾಲಿಸುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಎಂದು ರೈತ ಸಂಘ ಆರೋಪಿಸಿದೆ.

ಸಂತ್ರಸ್ತ ರೈತರಿಗೆ ಪರಿಹಾರ ಮಾಡಲು 3, 7, 10, 30, 50, 125, 500 ಕೋಟಿ ರೂ. ಸರಕಾರದಿಂದ ಮಂಜೂರು ಮಾಡಲಾಗುವುದು ಎಂದು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮನಬಂದಂತೆ ಕೋಟಿಗಟ್ಟಲೆ ಲೆಕ್ಕಾಚಾರ ನೀಡಿದ್ದರೂ, ರೈತರಿಗೆ ಈ ತನಕ ಶಾಶ್ವತ ಪರಿಹಾರ ಚಿಕ್ಕಾಸು ದೊರೆತಿಲ್ಲ ಎಂದು ಕೆಲ ಸಂತ್ರಸ್ತ ರೈತರು ಆರೋಪಿಸಿದ್ದಾರೆೆ.

ಹೈಕೋರ್ಟ್‌ನ ಆದೇಶ ಉಲ್ಲಂಘನೆ

ಮುಳುಗಡೆ ಜಮೀನಿನ ಮಾಲಕರಿಗೆ ಪರಿಹಾರ ಮೊತ್ತ ನೀಡಿದ ಬಳಿಕವೇ 5 ಮೀಟರ್‌ಗಿಂತ ಅಧಿಕ ನೀರು ಸಂಗ್ರಹಿಸಬೇಕೆಂಬ ರಾಜ್ಯ ಹೈಕೋರ್ಟ್‌ನ ಆದೇಶವನ್ನು ಮೀರಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಗಿದೆ.

ಕೇಂದ್ರ ಜಲ ಆಯೋಗದ ನಿರ್ದೇಶನದಂತೆ ಒಂದು ತಿಂಗಳೊಳಗೆ ಮರು ಸರ್ವೇ ನಡೆಸಿ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಹೈಕೋರ್ಟ್ ಸರಕಾರಕ್ಕೆ ಆದೇಶಿಸಿದ್ದರೂ ಇದಕ್ಕೆ ಸ್ಪಂದಿಸದೆ ಸರಕಾರ ನಿರ್ಲಕ್ಷ ವಹಿಸಿತ್ತು. ಆ ಬಳಿಕ ಮಾರ್ಚ್ 14ರಂದು ಮತ್ತೆ ವಕೀಲರ ಮೂಲಕ ನೆನಪೋಲೆಯನ್ನು ಕಳುಹಿಸಲಾಯಿತಾದರೂ ಈ ತನಕ ಜಿಲ್ಲಾಡಳಿತ ಯಾವುದೇ ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗಿದೆ.

ಸಂತ್ರಸ್ತ ರೈತರಿಗೆ ಸೂಕ್ತ ಪರಹಾರ ಹಾಗೂ ನ್ಯಾಯ ಸಿಗದಿದ್ದರೆ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ತುಂಬೆ ವೆಂಟೆಡ್ ಡ್ಯಾಂ ಸಂತ್ರಸ್ತ ರೈತರ ಹೋರಾಟ ಸಮಿತಿಯ ಅಧ್ಯಕ್ಷ ಎಂ.ಸುಬ್ರಹ್ಮಣ್ಯ ಭಟ್ ಎಚ್ಚರಿಸಿದ್ದಾರೆ.

Writer - ಅಬ್ದುಲ್ ರಹ್ಮಾನ್ ತಲಪಾಡಿ

contributor

Editor - ಅಬ್ದುಲ್ ರಹ್ಮಾನ್ ತಲಪಾಡಿ

contributor

Similar News