×
Ad

ರೈತರ ಸಾಲ ಮನ್ನಾ ನಿರೀಕ್ಷೆ ಹುಸಿ: ಸಿ.ಎಂ ಸಿದ್ದರಾಮಯ್ಯ

Update: 2018-02-01 20:14 IST

ಬೆಂಗಳೂರು, ಫೆ.1: ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಿರುವ 2018-19ನೆ ಸಾಲಿನ ಮುಂಗಡ ಪತ್ರ ದೂರದರ್ಶಿತ್ವ, ದೃಷ್ಟಿಕೋನ ಇಲ್ಲದ, ಜನಪರವಲ್ಲದ ಕೇವಲ ಭರವಸೆಗಳ ಕಣ್ಣುಕಟ್ಟಿನ ಮುಂಗಡ ಪತ್ರವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.

ಗುರುವಾರ ಗೃಹ ಕಚೇರಿ ಕೃಷ್ಣಾದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರೈತರ ಸಾಲ ಮನ್ನಾ ಕುರಿತು ಇರಿಸಿಕೊಂಡಿದ್ದ ನಿರೀಕ್ಷೆ ಹುಸಿಯಾಗಿದೆ. ಕೇಂದ್ರ ಸರಕಾರ ರಾಜ್ಯಗಳತ್ತ ಬೆರಳು ತೋರಿಸುತ್ತಿದ್ದು, ರಾಷ್ಟ್ರೀಕೃತ ಹಾಗೂ ಗ್ರಾಮೀಣ ಬ್ಯಾಂಕುಗಳ ಮೂಲಕ ರೈತರು ಪಡೆದಿರುವ ಸಾಲ ಮನ್ನಾ ಮಾಡುವ ಗೋಜಿಗೆ ಹೋಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

2022ರ ವೇಳೆಗೆ ಎಲ್ಲರಿಗೂ ವಸತಿ ಕಲ್ಪಿಸುವುದಾಗಿ ಕೇಂದ್ರ ಸರಕಾರ ಘೋಷಣೆ ಮಾಡಿತ್ತು. ಆದರೆ ಈ ಯೋಜನೆಗೆ ಮುಂಗಡ ಪತ್ರದಲ್ಲಿ ಹಣಕಾಸು ನಿಗದಿ ಮಾಡಿಲ್ಲ. 2019ರಲ್ಲಿ ಎದುರಾಗಲಿರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡೇ ಜೇಟ್ಲಿ ಈ ಮುಂಗಡ ಪತ್ರ ಸಿದ್ಧಪಡಿಸಿದ್ದಾರೆ ಎಂದು ಅವರು ಹೇಳಿದರು.

ನಿರುದ್ಯೋಗ ಸಮಸ್ಯೆ ನಿವಾರಣೆಗಾಗಿ ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಅವರ ಹೇಳಿಕೆ ಪ್ರಕಾರ ನಾಲ್ಕು ವರ್ಷದಲ್ಲಿ ಎಂಟು ಕೋಟಿ ಉದ್ಯೋಗ ಸೃಷ್ಟಿ ಆಗಬೇಕಿತ್ತು. ಆ ಕುರಿತಾಗಿಯೂ ಮುಂಗಡ ಪತ್ರದಲ್ಲಿ ಯಾವುದೇ ಸ್ಪಷ್ಟತೆ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಕೃಷಿ, ಶಿಕ್ಷಣ, ವಸತಿ ಹಾಗೂ ಆರೋಗ್ಯ ವಲಯಕ್ಕೆ ಅನುದಾನ ನೀಡದಿರುವುದು ಸರಿಯಲ್ಲ. ಬಿಜೆಪಿಯವರು ಕೇವಲ ಪುಂಗಿ ಗಿರಾಕಿಗಳು. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸೋಲುವುದು ನಿಶ್ಚಿತ ಎಂಬುದು ಮನವರಿಕೆ ಆಗಿರುವುದರಿಂದಲೇ ಕರ್ನಾಟಕಕ್ಕೆ ಬಜೆಟ್‌ನಲ್ಲಿ ಏನೂ ಕೊಟ್ಟಿಲ್ಲ. ರಾಜ್ಯದ ಜನರಿಗೆ ಇದರಿಂದ ಭಾರೀ ನಿರಾಸೆಯಾಗಿದೆ ಎಂದು ಅವರು ಹೇಳಿದರು.

ಕೆಲ ತೆರಿಗೆಗಳನ್ನು ಏರಿಕೆ ಮಾಡಿ ಕಾರ್ಪೊರೇಟ್ ತೆರಿಗೆಯನ್ನು ಕಡಿಮೆ ಮಾಡಿದ್ದಾರೆ. ನೋಟು ಅಮಾನ್ಯದ ನಿರ್ಧಾರವೂ ಬಂಡವಾಳಶಾಹಿಗಳ ಪರವಾಗಿಯೇ ಇತ್ತು ಎಂಬುದನ್ನು ಗಮನಿಸಬೇಕು. ಮೂರು ಲೋಕಸಭೆ ಕ್ಷೇತ್ರಕ್ಕೆ ಒಂದರಂತೆ ಮೆಡಿಕಲ್ ಕಾಲೇಜು ತೆರೆಯುವುದಾಗಿ ಹೇಳಿದ್ದಾರೆ. ಆದರೆ, ನಾವು ಜಿಲ್ಲೆಗೊಂದರಂತೆ ಕಾಲೇಜು ಮಾಡಲು ಮುಂದಾಗಿದ್ದೇವೆ. ಈಗಾಗಲೆ 16 ಕಾಲೇಜುಗಳು ಕಾರ್ಯಾರಂಭ ಮಾಡಿವೆ. ಐದು ವರ್ಷದಲ್ಲಿ ಬಿಜೆಪಿಯವರು ಒಂದೇ ಒಂದು ಕಾಲೇಜು ತೆರೆಯಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಚುನಾವಣೆಗೆ ದಿಕ್ಸೂಚಿ: ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳದಲ್ಲಿ ನಡೆದ ಮರು ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ್ದು, ಬಿಜೆಪಿ ತನ್ನ ಆಡಳಿತ ಇರುವ ರಾಜ್ಯದಲ್ಲೆ ಮುಗ್ಗರಿಸಿದೆ. ಇದು ಮುಂಬರುವ ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟರು

ಬೆಂಗಳೂರು ಉಪ ನಗರ ರೈಲು ವ್ಯವಸ್ಥೆ ಬಗ್ಗೆ ಬಜೆಟ್‌ನಲ್ಲಿ ಹೇಳಲಾಗಿದೆ. ಮೆಟ್ರೋ ರೈಲು ಕಾಮಗಾರಿ ಈಗಾಗಲೇ ಭರದಿಂದ ಸಾಗಿದೆ. ಅದರ ಜೊತೆಗೆ ಉಪ ನಗರ ರೈಲು ವ್ಯವಸ್ಥೆ ಕುರಿತು ನಿನ್ನೆ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಈಕ್ವಿಟಿ ಕುರಿತು ತೀರ್ಮಾನ ಮಾಡಿದ್ದೇವೆ. ಕೇಂದ್ರವೂ ಈಕ್ವಿಟಿ ಘೋಷಣೆ ಮಾಡಿರುವುದು ಒಳ್ಳೆಯದು.
-ಸಿದ್ದರಾಮಯ್ಯ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News