ರಾಜ್ಯ ಚುನಾವಣೆಯಲ್ಲಿ ಇವಿಎಂ-ವಿವಿಪ್ಯಾಟ್ ಬಳಕೆ: ಓಂಪ್ರಕಾಶ್ ರಾವತ್
ಬೆಂಗಳೂರು, ಫೆ.1: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಇಲೆಕ್ಟ್ರಾನಿಕ್ ಮತಯಂತ್ರಗಳ ಜತೆಗೆ ವಿವಿಪ್ಯಾಟ್(ವೋಟರ್ ವೆರಿಫೈಯೇಬಲ್ ಆಡಿಟ್ ಟ್ರೇಲ್) ಬಳಕೆ ಮಾಡಲಾಗುವುದು. ವಿವಿ ಪ್ಯಾಟ್‌ಗೆ ಸಂಬಂಧಿಸಿದ ಪ್ರಾತ್ಯಕ್ಷಿಕೆಯನ್ನು ಶೀಘ್ರದಲ್ಲೇ ನೀಡಲಾಗುವುದು ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಓಂಪ್ರಕಾಶ್ ರಾವತ್ ತಿಳಿಸಿದರು.
ವಿಕಾಸ ಸೌಧದಲ್ಲಿ ಎರಡು ದಿನಗಳಿಂದ ಚುನಾವಣಾ ಆಯೋಗವು ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಸರಕಾರದ ಮುಖ್ಯ ಕಾರ್ಯದರ್ಶಿ, ರಾಜ್ಯ ಪೊಲೀಸ್ ಮಹಾನಿರ್ದೇಶಕರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಇನ್ನಿತರ ಅಧಿಕಾರಿಗಳೊಂದಿಗೆ ಚುನಾವಣಾ ಸಿದ್ಧತೆಗಳ ಕುರಿತು ಪರಿಶೀಲಿಸಿದ ನಂತರ ಗುರುವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಮಹಾದಾಯಿ ಪ್ರತಿಭಟನೆ, ಕಾವೇರಿ ತೀರ್ಪು ಹೊರಬೀಳುತ್ತಿರುವುದು ಸೇರಿದಂತೆ ಇನ್ನಿತರ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕಾನೂನು ಸುವ್ಯಸ್ಥೆ ಕಾಪಾಡುವ ಬಗ್ಗೆ ಸಮಾಲೋಚನೆ ನಡೆಸಲಾಗಿದೆ. ರಾಜಕೀಯ ಪಕ್ಷಗಳ ಬಹುತೇಕ ಪ್ರತಿನಿಧಿಗಳು ಒಂದೇ ಹಂತದಲ್ಲಿ, ಒಂದೇ ದಿನ ಚುನಾವಣೆ ನಡೆಸುವಂತೆ, ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ಪ್ರಚೋದನಕಾರಿ ಶಕ್ತಿಗಳನ್ನು ತಡೆಯುವಂತೆ ಮನವಿ ಮಾಡಿದ್ದಾರೆ ಎಂದು ಅವರು ತಿಳಿಸಿದರು.
ನಿಷ್ಪಕ್ಷಪಾತ, ಪಾರದರ್ಶಕ ಚುನಾವಣೆ ನಡೆಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗುವುದು. ಮತಗಟ್ಟೆಗಳಿಗೆ ಬಂದು ಮತ ಚಲಾಯಿಸಲು ಅನುಕೂಲವಾಗುವಂತೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲಾಗುವುದು. ಮಾಹಿತಿ ತಂತ್ರಜ್ಞಾನದ ನೆರವಿನಿಂದ ಚುನಾವಣಾ ಕಾರ್ಯಗಳನ್ನು ಇನ್ನಷ್ಟು ದಕ್ಷತೆಯಿಂದ ನಿರ್ವಹಿಸಲಾಗುವುದು ಎಂದು ಅವರು ತಿಳಿಸಿದರು.
ಕೆಲ ಪಕ್ಷಗಳು ಈಗಿರುವ ಸರಕಾರ ಹೊಸ ಯೋಜನೆಗಳನ್ನು ಘೋಷಣೆ ಮಾಡುವುದಕ್ಕೆ ಕಡಿವಾಣ ಹಾಕುವಂತೆ ಮನವಿ ಮಾಡಿವೆ. ಇವಿಎಂ ಬಗ್ಗೆ ಪ್ರಶ್ನೆ ಎತ್ತಿವೆ. ಅಲ್ಲದೆ, ಬ್ಯಾಲೆಟ್ ಪೇಪರ್ ಮೂಲಕ ಮತದಾನಕ್ಕೆ ಅವಕಾಶ ನೀಡಲು ಮನವಿ ಮಾಡಿವೆ ಎಂದು ಅವರು ತಿಳಿಸಿದರು.
ಮತಗಟ್ಟೆಗಳ ಬಳಿ ಮತದಾನದ ದಿನ ಶಾಮಿಯಾನ, ಪೆಂಡಾಲ್ ಹಾಕುವ ವೆಚ್ಚ ಚುನಾವಣಾ ವೆಚ್ಚದಡಿ ಪರಿಗಣಿಸಲು ನಿರ್ಧಾರ ಮಾಡಿದ್ದೇವೆ. ಮಾಧ್ಯಮಗಳಲ್ಲಿ ಬರುವ ಜಾಹೀರಾತುಗಳನ್ನು ಪರಿಶೀಲಿಸಲು ಮೀಡಿಯಾ ಸರ್ಟಿಫಿಕೇಷನ್ ಕಮಿಟಿ ರಚಿಸಲಾಗುವುದು. ಈ ಮೂಲಕ ಕಾಸಿಗಾಗಿ ಸುದ್ದಿಯ ಮೇಲೆ ಕಣ್ಣಿಡಲಾಗುವುದು ಎಂದು ಅವರು ತಿಳಿಸಿದರು.
ಐಎಎಸ್, ಐಪಿಎಸ್ ಅಧಿಕಾರಿಗಳ ವರ್ಗಾವಣೆ ಕುರಿತು ಚುನಾವಣೆ ಘೋಷಣೆಯಾಗುವುದಕ್ಕಿಂತ ಮುಂಚೆ ಚುನಾವಣಾ ಆಯೋಗವು ಸರಕಾರಕ್ಕೆ ಕೇವಲ ಸಲಹೆ ನೀಡಬಹುದು. ಮತದಾರರ ಪಟ್ಟಿ ಪರಿಷ್ಕರಣೆ ಸೇರಿದಂತೆ ಚುನಾವಣೆಗೆ ಸಂಬಂಧಿಸಿದ ಕೆಲಸಗಳಲ್ಲಿ ಜಿಲ್ಲಾಧಿಕಾರಿಗಳು ಸಕ್ರಿಯರಾಗಿರುತ್ತಾರೆ. ಆದುದರಿಂದ, ಹಾಸನ ಜಿಲ್ಲಾಧಿಕಾರಿಯ ವರ್ಗಾವಣೆಗೆ ತಡೆಯಾಗಿದೆ ಎಂದು ಅವರು ಹೇಳಿದರು.
ಚುನಾವಣಾ ಅಧಿಸೂಚನೆ ಹೊರಬಿದ್ದ ಬಳಿಕ ಆಯೋಗವು ನೇರವಾಗಿ ಪ್ರವೇಶ ಮಾಡಲಿದ್ದು, ಒಂದೇ ಕಡೆ ಮೂರು ವರ್ಷ ಕೆಲಸ ಮಾಡಿದವರು, ತವರು ಜಿಲ್ಲೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗುತ್ತದೆ ಎಂದು ಓಂಪ್ರಕಾಶ್ ರಾವತ್ ಹೇಳಿದರು.
ರಾಜ್ಯದಲ್ಲಿ 4.9 ಕೋಟಿ ಮತದಾರರಿದ್ದು, ಅವರಲ್ಲಿ 2.48 ಕೋಟಿ ಪುರುಷರು, 2.41 ಕೋಟಿ ಮಹಿಳೆಯರು ಹಾಗೂ 4340 ಮಂದಿ ತೃತೀಯ ಲಿಂಗಿಗಳಿದ್ದಾರೆ. ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ನಡೆಯುತ್ತಿದ್ದು, ಫೆ.28ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ಒಟ್ಟು 23 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಅರ್ಜಿಗಳ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಈಗಿರುವ ಮತದಾರರ ಪಟ್ಟಿಯಲ್ಲಿ ಶೇ.99.32 ಮತದಾರರು ಭಾವಚಿತ್ರವಿರುವ ಗುರುತಿನ ಚೀಟಿ ಹೊಂದಿದ್ದಾರೆ. ಅಂಚೆಯ ಮತಗಳಿಗಾಗಿ ಎಲ್ಲಾ 224 ಕ್ಷೇತ್ರಗಳಲ್ಲಿ ಇಲೆಕ್ಟ್ರಾನಿಕಲ್ ಟ್ರಾನ್ಸ್‌ಮಿಟೆಡ್ ಪೋಸ್ಟಲ್ ಬ್ಯಾಲಟ್ ಸಿಸ್ಟಮ್ ಅನ್ನು ಪರಿಚಯಿಸಲಾಗುವುದು ಎಂದು ಓಂ ಪ್ರಕಾಶ್ ರಾವತ್ ಹೇಳಿದರು.
ಈಗಿರುವ ಮಾಹಿತಿ ಪ್ರಕಾರ ಶೇ.74 ಮತಗಟ್ಟೆಗಳು ರ್ಯಾಂಪ್ ಹೊಂದಿವೆ, ಶೇ.80 ಮತಗಟ್ಟೆಗಳು ಕುಡಿಯುವ ನೀರಿನ ಸೌಲಭ್ಯ, ಶೇ.83ರಷ್ಟು ಮತಗಟ್ಟೆಗಳು ಶೌಚಾಲಯ ಸೌಲಭ್ಯ, ಶೇ.78 ಮತಗಟ್ಟೆಗಳು ವಿದ್ಯುತ್ ವ್ಯವಸ್ಥೆ ಹಾಗೂ ಶೇ.77 ಮತಗಟ್ಟೆಗಳು ನಿರೀಕ್ಷಣಾ ಕೊಠಡಿ, ಸೂರಿನ ವ್ಯವಸ್ಥೆ ಹೊಂದಿವೆ ಎಂದು ಅವರು ವಿವರಣೆ ನೀಡಿದರು.
ಚುನಾವಣೆ ಘೋಷಣೆ ಬಳಿಕ ವೀಕ್ಷಕರನ್ನು ನೇಮಕ, ಅಗತ್ಯವಿರುವಲ್ಲಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಬಳಕೆ, ಚುನಾವಣಾ ಅಕ್ರಮಗಳನ್ನು ತಡೆಯಲು ವಿಚಕ್ಷಣಾ ದಳ ರಚನೆ, ಸೂಕ್ಷ್ಮ ಮತಗಟ್ಟೆಗಳಲ್ಲಿ ಇಂಟರ್‌ನೆಟ್ ಪ್ರೋಟೊಕಾಲ್ ಟಿವಿ ಮೂಲಕ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗುವುದು ಎಂದು ಅವರು ತಿಳಿಸಿದರು.
ಸಾರ್ವಜನಿಕ ಕುಂದುಕೊರತೆ ನಿವಾರಣೆಗೆ ‘ಸಮಾಧಾನ್’, ಪಕ್ಷಗಳಿಗೆ ಪ್ರಚಾರ ಸಂಬಂಧಿ ವಿಷಯಗಳಿಗೆ ಅನುಮತಿ ನೀಡಲು ಏಕ ಗವಾಕ್ಷಿ ವ್ಯವಸ್ಥೆ ‘ಸುವಿಧಾ’, ವಾಹನಗಳ ನಿರ್ವಹಣೆಗೆ ‘ಸುಗಮ್’ ಎಂಬ ಮಾಹಿತಿ ತಂತ್ರಜ್ಞಾನ ಆಧಾರಿತ ವ್ಯವಸ್ಥೆ ರೂಪಿಸಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಚುನಾವಣಾ ಉಪ ಆಯುಕ್ತ ಅಶೋಕ್ ಲವಾಸಾ, ಕಾರ್ಯನಿರ್ವಾಹಕ ಆಯುಕ್ತರಾದ ಸಂದೀಪ್ ಸಕ್ಸೇನಾ, ಸುದೀಪ್ ಜೈನ್, ಹಿರಿಯ ಉಪ ಚುನಾವಣಾ ಆಯುಕ್ತ ಉಮೇಶ್ ಸಿನ್ಹಾ, ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಉಪಸ್ಥಿತರಿದ್ದರು.