×
Ad

ಸರಕಾರಿ ಜಾಗ ಒತ್ತುವರಿ ವಿಚಾರ: ಸೂಕ್ತ ಕ್ರಮ ಕೈಗೊಳ್ಳಲು ಮೆನ್ನಬೆಟ್ಟು ಗ್ರಾಪಂಗೆ ಹೈಕೋರ್ಟ್ ನಿರ್ದೇಶನ

Update: 2018-02-01 20:42 IST

ಬೆಂಗಳೂರು, ಫೆ.1: ಮಂಗಳೂರು ತಾಲೂಕಿನ ಮೆನ್ನಬೆಟ್ಟು ಗ್ರಾಮದಲ್ಲಿ ಸರಕಾರಿ ಜಾಗವನ್ನು ಒತ್ತುವರಿ ಮಾಡಿ ಕಾಂಪ್ಲೆಕ್ಸ್ ನಿರ್ಮಾಣ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಮೆನ್ನಬೆಟ್ಟು ಗ್ರಾಮ ಪಂಚಾಯತ್ ಗೆ ಹೈಕೋರ್ಟ್ ನಿರ್ದೇಶಿಸಿದೆ.

ಈ ಸಂಬಂಧ ಚಂದ್ರಶೇಖರ್‌ಶೆಟ್ಟಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿತು.

ಅರ್ಜಿದಾರರ ಪರ ವಾದಿಸಿದ ವಕೀಲ ಪಿ.ಪಿ.ಹೆಗಡೆ ಅವರು, ಮೆನ್ನಬೆಟ್ಟು ಗ್ರಾಮದ ದಿನೇಶ್ ಅಮಿನ್ ಅವರು ಅದೇ ಗ್ರಾಮದಲ್ಲಿ ತಮ್ಮ ಸ್ವಂತ ಜಾಗದ ಜೊತೆಗೆ ಸರಕಾರಿ ಜಾಗವನ್ನೂ ಒತ್ತುವರಿ ಮಾಡಿ ಕಾಂಪ್ಲೆಕ್ಸ್ ನಿರ್ಮಾಣ ಮಾಡಿದ್ದಾರೆ. ಹೀಗಾಗಿ, ಒತ್ತುವರಿ ಜಾಗಕ್ಕೆ ಸಂಬಂಧಪಟ್ಟಂತೆ ಸೂಕ್ತ ಕ್ರಮ ಕೈಗೊಳ್ಳಲು ನಿರ್ದೇಶಿಸಬೇಕೆಂದು ಪೀಠಕ್ಕೆ ಮನವಿ ಮಾಡಿದರು.

ಪ್ರತಿವಾದಿಗಳ ಪರ ವಾದಿಸಿದ ವಕೀಲರು, ಮೆನ್ನಬೆಟ್ಟು ಗ್ರಾಮದ ದಿನೇಶ್ ಅಮಿನ್ ಅವರು ತಮ್ಮ ಜಾಗದಲ್ಲಿಯೆ ಕಾಂಪ್ಲೆಕ್ಸ್‌ನ್ನು ನಿರ್ಮಾಣ ಮಾಡಿದ್ದಾರೆಯೇ ವಿನಹ ಸರಕಾರಿ ಜಾಗವನ್ನು ಒತ್ತುವರಿ ಮಾಡಿ ಕಾಂಪ್ಲೆಕ್ಸ್‌ನ್ನು ನಿರ್ಮಾಣ ಮಾಡಿಲ್ಲ ಎಂದು ಪೀಠಕ್ಕೆ ತಿಳಿಸಿದರು.

ವಕೀಲರ ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಪೀಠವು ಸರಕಾರಿ ಜಾಗದ ಒತ್ತುವರಿಗೆ ಸಂಬಂಧಪಟ್ಟಂತೆ ಮೆನ್ನಬೆಟ್ಟು ಗ್ರಾಮ ಪಂಚಾಯತ್ ಎರಡು ತಿಂಗಳಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಗ್ರಾಪಂ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಲು ಆದೇಶಿಸಿ, ಅರ್ಜಿಯನ್ನು ಇತ್ಯರ್ಥಪಡಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News