×
Ad

ಸತ್ತವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿರುವ ಬಿಜೆಪಿಯವರು: ರಾಮಲಿಂಗಾ ರೆಡ್ಡಿ

Update: 2018-02-01 20:51 IST

ಬೆಂಗಳೂರು,ಫೆ.1: ‘ಸತ್ತವರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುವ ಬಿಜೆಪಿಯವರು, ಹತ್ಯೆಗೊಳಗಾದವರನ್ನು ತಮ್ಮ ಪಕ್ಷದ ಬೂತ್ ಮಟ್ಟದ ಸಕ್ರಿಯ ಕಾರ್ಯಕರ್ತ ಎಂದು ಸುಳ್ಳು ಹೇಳುತ್ತಿದ್ದಾರೆ’ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ.

ಗುರುವಾರ ವಿಕಾಸಸೌಧದಲ್ಲಿನ ತನ್ನ ಕೊಠಡಿಯಲ್ಲಿ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿನ ಜೆ.ಸಿ.ನಗರದಲ್ಲಿ ಹತ್ಯೆಗೀಡಾದ ಯುವಕ ಸಂತೋಷ್, ಬಿಜೆಪಿ ಅಥವಾ ಸಂಘಪರಿವಾರದ ಕಾರ್ಯಕರ್ತನಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

ವೈಯಕ್ತಿಕ ಗಲಾಟೆಯಿಂದ ಹತ್ಯೆ: ಸಂತೋಷ್ ಹತ್ಯೆ ವೈಯಕ್ತಿಕ ಗಲಾಟೆ ಹಿನ್ನೆಲೆಯಲ್ಲಿ ನಡೆದಿದ್ದು, ಆರೋಪಿ ವಾಸೀಂ ಹಾಗೂ ಹತ್ಯೆಗೀಡಾದ ಸಂತೋಷ್ ಇಬ್ಬರು ಸ್ನೇಹಿತರು. ಒಂದೇ ಕಡೆಯಲ್ಲಿ ವಾಸ ಮಾಡುತ್ತಿದ್ದರು ಎಂದು ರಾಮಲಿಂಗಾರೆಡ್ಡಿ ಹೇಳಿದರು.

ಆರೋಪಿ ವಾಸೀಂ ಬಳಿ ಇದ್ದ ಸ್ಕ್ರೂಡ್ರೈವರ್‌ನಿಂದ ಸಂತೋಷ್ ತೊಡೆಗೆ ಚುಚ್ಚಿದ್ದು, ತೀವ್ರ ರಕ್ತಸ್ರಾವದಿಂದ ಆತ ಸಾವನ್ನಪ್ಪಿದ್ದಾನೆ. ಆರೋಪಿ ವಾಸೀಂ ಯಾವುದೇ ಲಾಂಗ್, ಮಚ್ಚು ಸೇರಿದಂತೆ ಮಾರಕಾಸ್ತ್ರಗಳನ್ನು ಬಳಕೆ ಮಾಡಿಲ್ಲ ಎಂದ ಅವರು, ಹಿಂದೂ- ಮುಸ್ಲಿಮ್ ಯುವಕರ ಮಧ್ಯೆ ಗಲಾಟೆ ನಡೆದರೆ, ಬಿಜೆಪಿಯವರು ಅದಕ್ಕೆ ರಾಜಕೀಯ ಬಣ್ಣ ಹಚ್ಚುತ್ತಾರೆ ಎಂದು ಟೀಕಿಸಿದರು.

ಬಹಿರಂಗ ಚರ್ಚೆಗೆ ಬನ್ನಿ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಮಾಜಿ ಗೃಹ ಸಚಿವ ಆರ್.ಅಶೋಕ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಈ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ. ಬಿಜೆಪಿ ಆಡಳಿತಾವಧಿಯಲ್ಲಿ ಬೆಂಗಳೂರು ನಗರದಲ್ಲಿ 96 ಕೊಲೆ ಪ್ರಕರಣಗಳು ವರದಿಯಾಗಿದ್ದು, ನಮ್ಮ ಸರಕಾರ ಬಂದ ಬಳಿಕ 67 ಕೊಲೆ ಪ್ರಕರಣಗಳು ವರದಿಯಾಗಿವೆ ಎಂದು ತಿಳಿಸಿದರು.

10ಲಕ್ಷ ರೂ.ಪರಿಹಾರ: ಕೊಲೆಯಾದ ಸಂತೋಷ್ ಕುಟುಂಬಕ್ಕೆ 10 ಲಕ್ಷ ರೂ.ಪರಿಹಾರ ಘೋಷಿಸಬೇಕು ಹಾಗೂ ಕುಟುಂಬದ ಸದಸ್ಯರೊಬ್ಬರಿಗೆ ಸರಕಾರಿ ಉದ್ಯೋಗ ನೀಡುವಂತೆ ಮನವಿ ಮಾಡಿದ್ದು, ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸತ್ಯಹರಿಶ್ಚಂದ್ರನ ಸಂಬಂಧಿಕರು
‘ನಾನು ಬಿಜೆಪಿ ಮುಖಂಡರಾದ ಆರ್.ಅಶೋಕ್, ಸಿ.ಟಿ.ರವಿ, ಈಶ್ವರಪ್ಪ, ಅನಂತ ಕುಮಾರ್ ಹೆಗಡೆ, ಪ್ರತಾಪಸಿಂಹ, ಶೋಭಾ ಕರಂದ್ಲಾಜೆಯವರ ವಂಶವಾಹಿನಿ (ಡಿಎನ್‌ಎ) ಪರೀಕ್ಷೆ ಮಾಡಿಸಿದ್ದು, ಅವರು ಸತ್ಯಹರಿಶ್ಚಂದ್ರನ ಸಂಬಂಧಿಕರು ಎಂಬುವುದು ಗೊತ್ತಾಗಿದೆ. ನಾವು ಆಗಾಗ ಸುಳ್ಳು ಹೇಳುತ್ತೇವೆ. ಆದರೆ, ಅವರು ಸುಳ್ಳು ಹೇಳುವುದೇ ಇಲ್ಲ’
-ರಾಮಲಿಂಗಾರೆಡ್ಡಿ ಗೃಹ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News