ರಕ್ಷಿತ ಅರಣ್ಯ ಪ್ರದೇಶ ಗುತ್ತಿಗೆ ವಿಚಾರ: ಸರಕಾರದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ
ಬೆಂಗಳೂರು, ಫೆ.1: ಬೆಂಗಳೂರು ನಗರ ಜಿಲ್ಲೆ ಮಾಚೋಹಳ್ಳಿಯ 58 ಎಕರೆ 20 ಗುಂಟೆ ರಕ್ಷಿತ ಅರಣ್ಯ ಪ್ರದೇಶವನ್ನು ಹಿಂದುಳಿದ ಜಾತಿಗಳ 36 ಸಂಘ ಸಂಸ್ಥೆಗಳಿಗೆ ಗುತ್ತಿಗೆ ನೀಡುವ ರಾಜ್ಯ ಸರಕಾರದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ಈ ಕುರಿತಂತೆ ನಿವೃತ್ತ ಐಎಫ್‌ಎಸ್ ಅಧಿಕಾರಿ ಎ.ಕೃಷ್ಣಸ್ವಾಮಿ ಹಾಗೂ ಎಂ.ಆರ್.ಪುಟ್ಟಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿ, ಮುಂದಿನ ಆದೇಶದವರೆಗೂ ಯಾವುದೇ ಕ್ರಮಕ್ಕೆ ಮುಂದಾಗದಂತೆ ಸರಕಾರಕ್ಕೆ ನಿರ್ದೇಶಿಸಿದೆ.
ದಾಸನಪುರ ಹೋಬಳಿಯ ಮಾಚೋಹಳ್ಳಿ ಗ್ರಾಮದ ಸರ್ವೇ ನಂ.81ರಲ್ಲಿರುವ 58 ಎಕರೆ 20 ಗುಂಟೆ ಅರಣ್ಯ ಜಮೀನನ್ನು 36 ಖಾಸಗಿ ಸಂಘ ಸಂಸ್ಥೆಗಳಿಗೆ ನೀಡಲು ರಾಜ್ಯ ಸರಕಾರ 2017ರ ಡಿಸೆಂಬರ್ 18ರಂದು ಆದೇಶಿಸಿದೆ. 30 ವರ್ಷಗಳ ಅವಧಿಗೆ ಪ್ರತಿ ವರ್ಷ ಎಕರೆ ಒಂದಕ್ಕೆ 1 ಲಕ್ಷದಂತೆ ದರವನ್ನು ವಿಧಿಸಿ ಷರತ್ತುಗೊಳೊಂದಿಗೆ ಗುತ್ತಿಗೆ ನಿಗದಿಪಡಿಸಲಾಗಿದೆ. ಸರಕಾರದ ಈ ಆದೇಶವನ್ನು ಅರ್ಜಿದಾರರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ವಿಚಾರಣೆಯನ್ನು ಫೆ.17ಕ್ಕೆ ಮುಂದೂಡಲಾಗಿದೆ.