ಅಮೆರಿಕಾದ ಪ್ರಜಾಪ್ರಭುತ್ವ ಅಪಾಯದಲ್ಲಿದೆ: ನೂತನ ಅರ್ಥಶಾಸ್ತ್ರಜ್ಞರ ವರದಿ

Update: 2018-02-01 17:31 GMT

ವಾಶಿಂಗ್ಟನ್, ಫೆ.1: ಜಾಗತಿಕ ಸರಕಾರಗಳ ಆರೋಗ್ಯದ ಮೇಲೆ ಕಣ್ಣಿಡುವ ವಾರ್ಷಿಕ ಪ್ರಜಾಪ್ರಭುತ್ವ ಸೂಚಿಯು ಬಿಡುಗಡೆ ಮಾಡಿರುವ 2017ರ ಫಲಿತಾಂಶವು ನಿರಾಶಾದಾಯಕವಾಗಿದೆ. 89 ದೇಶಗಳಲ್ಲಿ ಪ್ರಜಾಸತಾತ್ಮಕ ನಿಯಮಗಳು ಕಳೆದ ವರ್ಷಕ್ಕಿಂತ ಕೆಟ್ಟದ್ದಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಜಗತ್ತಿನ ಜನಸಂಖ್ಯೆಯಲ್ಲಿ ಕೇವಲ ಶೇ. 4.5 ಮಾತ್ರ ಸಂಪೂರ್ಣ ಕ್ರಿಯಾಶೀಲವಾಗಿರುವ ಪ್ರಜಾಪ್ರಭುತ್ವದಲ್ಲಿ ಜೀವಿಸುತ್ತಿದೆ. 2015ರಲ್ಲಿ ಈ ಪ್ರಮಾಣ ಶೇ. 8.9 ಆಗಿತ್ತು ಎಂದು ವರದಿ ವಿವರಿಸುತ್ತದೆ.

ಈ ಆಘಾತಕಾರಿ ಇಳಿಕೆ ಅಮೆರಿಕವನ್ನು ದೋಷಿಯಾಗಿಸಿರುವ ವರದಿಯು ಕಳೆದ ವರ್ಷ ದೇಶವನ್ನು ಸಂಪೂರ್ಣ ದಿಂದ ಲೋಪಗಳಿರುವ ಪ್ರಜಾಪ್ರಭುತ್ವದ ಪಟ್ಟಿಗೆ ಹಿಂಭಡ್ತಿ ಮಾಡಿತ್ತು. ಅಮೆರಿಕ ಸರಕಾರದ ಮೇಲೆ ಸಾರ್ವಜನಿಕವಾಗಿ ಕಡಿಮೆಯಾಗುತ್ತಿರುವ ನಂಬಿಕೆಯೇ ಈ ಹಿಂಭಡ್ತಿಗೆ ಕಾರಣವಾಗಿತ್ತು. 2017ರಲ್ಲೂ ಅಮೆರಿಕಾ ತನ್ನ ಅದೇ ಕಳಪೆ ನಿರ್ವಹಣೆಯನ್ನು ಮುಂದುವರಿಸಿದೆ. ದೇಶದ ರಾಜಕೀಯ ಮತ್ತು ಆರ್ಥಿಕ ಜಡತ್ವದಿಂದ ರೋಸಿ ಹೋಗಿರುವ ಮತದಾರರು ಅನುಭವಿಸುತ್ತಿದ್ದ ದುರ್ಬಲೀಕರಣವನ್ನು ನಿಭಾಯಿಸುವಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಫಲವಾಗಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಆದರೆ ಟ್ರಂಪ್ ಅಧ್ಯಕ್ಷತೆ ದೇಶವನ್ನು ಮತ್ತಷ್ಟು ವಿಭಜಿಸಿದೆ. ವಲಸೆ, ಆರ್ಥಿಕತೆ ಮತ್ತು ಪಾರಿಸಾರಿಕ ನೀತಿಗಳ ವಿಷಯದಲ್ಲಿ ಅಮೆರಿಕನ್ನರ ಮಧ್ಯೆಯಿರುವ ಭಿನ್ನಾಭಿಪ್ರಾಯ ಬೃಹತ್ ಮಟ್ಟದಲ್ಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ರಿಪಬ್ಲಿಕನ್ ಮತ್ತು ಡೆಮಾಕ್ರಾಟ್ ಎಂದು ತಮ್ಮನ್ನು ಗುರುತಿಸಿಕೊಳ್ಳುತ್ತಿರುವವರ ಮಧ್ಯೆ ಹೆಚ್ಚಾಗುತ್ತಿರುವ ಅಂತರ ಟ್ರಂಪ್ ಸರಕಾರಕ್ಕೆ ಆಡಳಿತ ನಡೆಸಲು ಯಾಕೆ ಕಷ್ಟವಾಗುತ್ತಿದೆ ಎಂಬುದನ್ನು ವಿವರಿಸುವಲ್ಲಿ ನೆರವಾಗುತ್ತದೆ ಎಂದು ಪ್ರಜಾಪ್ರಭುತ್ವ ಸೂಚಿಯಲ್ಲಿ ವಿವರಿಸಲಾಗಿದೆ.

ಜಗತ್ತಿನ ಅತ್ಯಂತ ಪ್ರಜಾಸತಾತ್ಮಕ ದೇಶಗಳ ಪಟ್ಟಿಯಲ್ಲಿ, ನಾರ್ವೆ, ಐಸ್‌ಲ್ಯಾಂಡ್, ಸ್ವೀಡನ್, ನ್ಯೂಝಿಲ್ಯಾಂಡ್, ಡೆನ್ಮಾರ್ಕ್, ಐರ್‌ಲ್ಯಾಂಡ್, ಕೆನಡಾ, ಆಸ್ಟ್ರೇಲಿಯಾ, ಫಿನ್‌ಲ್ಯಾಂಡ್ ಮತ್ತು ಸ್ವಿಟ್ಝರ್‌ಲ್ಯಾಂಡ್ ಸೇರಿವೆ. ಎರಡು ಪ್ರಮುಖ ಯೂರೋಪ್ ದೇಶಗಳಾದ ಬ್ರಿಟನ್ ಮತ್ತು ಜರ್ಮನಿ ಕೂಡಾ ಈ ಪಟ್ಟಿಯಲ್ಲಿದೆ. ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಪೈಕಿ ಕೇವಲ ಉರುಗ್ವೆ ಮಾತ್ರ ಈ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದೆ.

ಜಗತ್ತಿನಾದ್ಯಂತ ಪ್ರಜಾಪ್ರಭುತ್ವದ ಆಶಯಗಳನ್ನು ಅಳಿಸಲಾಗುತ್ತಿದೆ. ವಾಕ್ ಸ್ವಾತಂತ್ರದ ಮೇಲೆ ನಿರ್ಬಂಧ, ಸರಕಾರಗಳ ಮೇಲಿನ ನಂಬಿಕೆಯಲ್ಲಿ ಕುಸಿತ, ಪ್ರಮುಖ ಮುಖ್ಯವಾಹಿನಿ ರಾಜಕೀಯ ಪಕ್ಷಗಳ ಜನಪ್ರಿಯತೆಯಲ್ಲಿ ಇಳಿಕುಖ ಮತ್ತು ನಾಗರಿಕ ಸ್ವಾತಂತ್ರ್ಯಗಳ ಮೇಲೆ ತಡೆ ಮುಂತಾದುವುಗಳು ಇದಕ್ಕೆ ಸಂಬಂಧಪಟ್ಟ ಕೆಲವು ಲಕ್ಷಣಗಳಾಗಿವೆ ಎಂದು ವರದಿ ವಿವರಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News