ಬೆಂಗಳೂರು: ಫೆ.5 ರಂದು ವಿಕಲಚೇತನರಿಂದ ಧರಣಿ

Update: 2018-02-01 18:10 GMT

ಬೆಂಗಳೂರು, ಫೆ.1: ವಿಕಲಚೇತನರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಬಹುಜನ ದಲಿತ ಸಂಘರ್ಷ ಸಮಿತಿ ವತಿಯಿಂದ ‘ವಿಕಲಚೇತನರ ನಡೆ ರಾಜಕೀಯ ಮೀಸಲಾತಿ ಕಡೆ’ ಎನ್ನುವ ಘೋಷಣೆಯೊಂದಿಗೆ ಫೆ.5 ರಂದು ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಧರಣಿ ನಡೆಸಲು ನಿರ್ಧರಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಆರ್.ಎಂ.ಎನ್.ರಮೇಶ್, ರಾಜ್ಯದಲ್ಲಿ ಅಧಿಕಾರ ನಡೆಸಿದ ಎಲ್ಲ ಸರಕಾರಗಳು ವಿಕಲಚೇತರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲ್ಲದೆ, ಅಂಗವಿಕಲರ ಧ್ವನಿಯಾಗಿ ಒಬ್ಬರೂ ವಿಧಾನಸಭೆಯಲ್ಲಿ ಇಲ್ಲ. ಹೀಗಾಗಿ, ನಮ್ಮ ಸಮಸ್ಯೆಗಳು ಹಾಗೂ ಬೇಡಿಕೆಗಳು ಈಡೇರಬೇಕಾದರೆ ರಾಜಕೀಯ ಮೀಸಲಾತಿ ಅಗತ್ಯವಿದೆ. ಈ ನಿಟ್ಟಿನಲ್ಲಿ ಎಲ್ಲ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಂತೆ ಶೇ.5 ರಷ್ಟು ವಿಕಲಚೇತನರಿಗೆ ಪ್ರತ್ಯೇಕ ರಾಜಕೀಯ ಮೀಸಲಾತಿ ಘೋಷಿಸಬೇಕು ಎಂದು ಈ ಮೂಲಕ ಒತ್ತಾಯಿಸಲಾಗುತ್ತದೆ ಎಂದು ಹೇಳಿದರು.

ರಾಜ್ಯದಲ್ಲಿ ಕಳೆದೆರಡು ವರ್ಷಗಳಿಂದ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗೆ ಆಯುಕ್ತರನ್ನು ನೇಮಕ ಮಾಡದೆ, ಬೇಜವಾಬ್ದಾರಿಯಾಗಿ ಸರಕಾರ ವರ್ತಿಸುತ್ತಿದೆ. ಇದರಿಂದಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಅಂಗವಿಕಲರಿಗೆ ಸಿಗಬೇಕಾದ ಯಾವುದೇ ಸೌಲಭ್ಯಗಳು ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ ಎಂದ ಅವರು, ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ 2016 ರಂತೆ ಶೇ.0.5 ರಷ್ಟು ಅನುದಾನವನ್ನು ವಿಕಲಚೇತನರಿಗಾಗಿ ಮೀಸಲಿಟ್ಟಿದ್ದು ರಾಜ್ಯ ಸರಕಾರ ಅದನ್ನು ಪಾಲಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೇಡಿಕೆಗಳು: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಬೇರ್ಪಡಿಸಬೇಕು. 10 ವರ್ಷಗಳಿಂದ ಎಂಆರ್‌ಡಬ್ಲೂ, ವಿಆರ್‌ಡಬ್ಲೂಗಳನ್ನು ಖಾಯಂ ಮಾಡಬೇಕು ಅಥವಾ ಕನಿಷ್ಠ ವೇತನ ನೀಡಬೇಕು. ಕರ್ತವ್ಯದ ಸಂದರ್ಭದಲ್ಲಿ ಮರಣ ಹೊಂದಿದವರಿಗೆ ಐದು ಲಕ್ಷ ಪರಿಹಾರ ನೀಡಬೇಕು. ಬಾಕಿ ಉಳಿದಿರುವ ವಿಕಲಚೇತನರ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕು. ಎಸ್ಸಿ, ಎಸ್ಟಿ ವಿಕಲಚೇತನರಿಗೆ ಕನಿಷ್ಠ 2 ಎಕರೆ ಭೂಮಿಯನ್ನು ನೀಡಬೇಕು. ನಿರುದ್ಯೋಗಿ ವಿಕಲಚೇತನರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಶೇ.50 ರಷ್ಟು ಸಹಾಯ ಧನದೊಂದಿಗೆ 25 ಲಕ್ಷ ಸಾಲ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News