ಅವಮಾನಕರ ಭಾಷೆ ಬಳಸಿ ನಿಂದಸಿದ ಆರೋಪ; ಶಾಸಕ ಕೊತ್ತೂರು ಮಂಜುನಾಥ್ ವಿರುದ್ಧ ಕ್ರಮಕ್ಕೆ ಆಗ್ರಹ

Update: 2018-02-01 18:17 GMT

ಬೆಂಗಳೂರು, ಫೆ.1: ಮುಳಬಾಗಿಲು ಶಾಸಕ ಕೊತ್ತೂರು ಮಂಜುನಾಥ್ ದಲಿತರನ್ನು ಕೀಳಾಗಿ ಹಾಗೂ ಅವಮಾನಕರ ಭಾಷೆ ಬಳಸಿ ನಿಂದನೆ ಮಾಡಿದ್ದು, ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದಲಿತ ಸಾಮ್ರಾಜ್ಯ ಸ್ಥಾಪನಾ ಸಮಿತಿ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಎಂ.ಡಿ.ನಾರಾಯಣ್, ಶಾಸಕ ಮಂಜುನಾಥ್ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇದನ್ನು ಪ್ರಶ್ನಿಸಿದ ದಲಿತ ಹೋರಾಟಗಾರರನ್ನು ಅತ್ಯಂತ ಕೀಳಾದ ಪದ ಬಳಕೆ ಮಾಡಿ ನಿಂದಿಸಿದ್ದಾರೆ. ಈ ಸಂಬಂದ ರಾಜ್ಯಾದ್ಯಂತ ಹೋರಾಟಗಳನ್ನು ನಡೆಸಿದ್ದರೂ, ಇದುವರೆಗೂ ಸರಕಾರ ಹಾಗೂ ಜಿಲ್ಲಾಡಳಿತ ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳದಿರುವುದು ದುರಂತ ಎಂದು ಹೇಳಿದರು.

ರಾಜ್ಯದಲ್ಲಿ ಒಂದು ಕೋಟಿಗೂ ಅಧಿಕ ದಲಿತರಿದ್ದು, ಅಷ್ಟು ಜನರ ಮತ ಪಡೆದು ಅಧಿಕಾರ ನಡೆಸುತ್ತಿರುವ ಸರಕಾರ ದಲಿತರನ್ನು ಅವಮಾನಿಸಿದ ಶಾಸಕನ ಮೇಲೆ ಯಾವುದೇ ಕ್ರಮ ಕೈಗೊಳ್ಳದಿರುವುದು ನೋಡಿದರೆ ದಲಿತ ಪರ ಕಾಳಜಿ ಎಷ್ಟಿದೆ ಎಂದು ಅರ್ಥವಾಗುತ್ತದೆ. ಹೀಗಾಗಿ, ದಲಿತರನ್ನು ಅವಮಾನಿಸಿದ ಶಾಸಕರಿಗೆ ಹಾಗೂ ಅವರನ್ನು ರಕ್ಷಿಸುತ್ತಿರುವ ಸರಕಾರಕ್ಕೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸೂಕ್ತ ಉತ್ತರ ನೀಡುತ್ತೇವೆ ಎಂದು ತಿಳಿಸಿದರು.

ಶಾಸಕ ಕೊತ್ತೂರು ಮಂಜುನಾಥ್ ಮಾಂಸ ದಂಧೆ ವಹಿವಾಟು ಮಾಡುತ್ತಿದ್ದಾರೆ. ಅಲ್ಲದೆ, ಮಹಿಳೆಯರ ವಿಚಾರದಲ್ಲಿ ಅತ್ಯಂತ ಕೀಳು ಮನೋಭಾವ ಹೊಂದಿರುವ ಅವರು, ಮುಳಬಾಗಿಲು ಕ್ಷೇತ್ರದಲ್ಲಿ ಅವರಿಂದ ಲೈಂಗಿಕ ದೌರ್ಜನ್ಯಕ್ಕೆ ಹಲವಾರು ಜನರು ಬಲಿಯಾಗಿದ್ದಾರೆ. ಈ ಸಂಬಂಧ ನನ್ನ ಬಳಿ ಸೂಕ್ತ ಆಧಾರಗಳಿದ್ದು, ಮುಂದಿನ ದಿನಗಳಲ್ಲಿ ಅವುಗಳನ್ನು ಬಹಿರಂಗಪಡಿಸಲಾಗುತ್ತದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News