ಪಾಕಿಸ್ತಾನಕ್ಕೆ ಮೂರನೇ ಸ್ಥಾನ

Update: 2018-02-01 18:31 GMT

ಕ್ವೀನ್ಸ್‌ಟೌನ್(ನ್ಯೂಝಿಲೆಂಡ್), ಫೆ.1: ಎರಡು ಬಾರಿಯ ಚಾಂಪಿಯನ್ ಪಾಕಿಸ್ತಾನ ಐಸಿಸಿ ಅಂಡರ್-19 ಕ್ರಿಕೆಟ್ ವಿಶ್ವಕಪ್‌ನಲ್ಲಿ ಮೂರನೆ ಸ್ಥಾನ ಪಡೆದಿದೆ.

 ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ನಡುವೆ ಮೂರು- ನಾಲ್ಕನೇ ಸ್ಥಾನಕ್ಕಾಗಿ ನಡೆದ ಪ್ಲೇ-ಆಫ್ ಪಂದ್ಯ ಒಂದೂ ಎಸೆತ ಕಾಣದೇ ಮಳೆಗಾಹುತಿಯಾದ ಹಿನ್ನೆಲೆಯಲ್ಲಿ ಪಾಕ್‌ಮೂರನೇ ಸ್ಥಾನ ಪಡೆದಿದೆ. ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ‘ಡಿ’ ಗುಂಪಿನಲ್ಲಿವೆ. ಟೂರ್ನಿಯ ಗ್ರೂಪ್ ಹಂತದ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ ಪಾಕ್‌ನ್ನು ಮಣಿಸಿತ್ತು. ಗ್ರೂಪ್‌ನ ಕೊನೆಯ ಪಂದ್ಯದಲ್ಲಿ ಅಫ್ಘಾನ್ ತಂಡ ಐರ್ಲೆಂಡ್ ವಿರುದ್ಧ ಅಚ್ಚರಿಯ ಸೋಲು ಕಂಡ ಕಾರಣ ಪಾಕಿಸ್ತಾನ ‘ಡಿ’ ಗುಂಪಿನಲ್ಲಿ ಅಗ್ರ ಸ್ಥಾನಕ್ಕೇರಿತ್ತು.

 ಅಫ್ಘಾನಿಸ್ತಾನ ಐಸಿಸಿ ಅಂಡರ್-19 ಕ್ರಿಕೆಟ್ ವಿಶ್ವಕಪ್‌ನಲ್ಲಿ ಇದೇ ಮೊದಲ ಬಾರಿ ನಾಲ್ಕನೇ ಸ್ಥಾನ ಪಡೆದಿದೆ. ಈ ಹಿಂದೆ 2010, 2012, 2014 ಹಾಗೂ 2016ರ ಆವೃತ್ತಿಯ ಟೂರ್ನಿಯಲ್ಲಿ ಕ್ರಮವಾಗಿ 16ನೇ, 10ನೇ, ಏಳನೇ ಹಾಗೂ 9ನೇ ಸ್ಥಾನ ಪಡೆದುಕೊಂಡಿತ್ತು. ಪಾಕಿಸ್ತಾನ ಮೂರನೇ ಬಾರಿ ಮೂರನೇ ಸ್ಥಾನ ಪಡೆದಿದೆ. 2000 ಹಾಗೂ 2010ರಲ್ಲಿ ಮೂರನೇ ಸ್ಥಾನ ಪಡೆದುಕೊಂಡಿತ್ತು. ಪಾಕ್ ತಂಡ 2012ರ ಅಂಡರ್-19 ವಿಶ್ವಕಪ್‌ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದು, ಆಗ 8ನೇ ಸ್ಥಾನ ಪಡೆದಿತ್ತು. ಪಾಕ್ ತಂಡ 2004 ಹಾಗೂ 2006ರ ಆವೃತ್ತಿಯಲ್ಲಿ ಸತತ ಎರಡು ಬಾರಿ ಚಾಂಪಿಯನ್‌ಪಟ್ಟವನ್ನು ಅಲಂಕರಿಸಿರುವ ಮೊದಲ ತಂಡವಾಗಿದೆ.

ಈ ವರ್ಷದ ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ಮೂರು ವಿಕೆಟ್‌ಗಳಿಂದ ಗೆದ್ದಿರುವ ಪಾಕ್ ತಂಡ ಸೆಮಿ ಫೈನಲ್‌ನಲ್ಲಿ ಭಾರತದ ವಿರುದ್ಧ ಕೇವಲ 69 ರನ್‌ಗಳಲ್ಲಿ ಆಲೌಟಾಗುವ ಮೂಲಕ 203 ರನ್‌ಗಳಿಂದ ಸೋತಿತ್ತು.

ನಮ್ಮ ತಂಡ ಮೂರನೇ ಸ್ಥಾನ ಪಡೆದಿರುವುದಕ್ಕೆ ಸಂತೋಷವಾಗಿದೆ. ಇದು ಟೂರ್ನಮೆಂಟ್‌ನಲ್ಲಿ ನಮ್ಮ ಪ್ರದರ್ಶನವನ್ನು ಪ್ರತಿಬಿಂಬಿಸುತ್ತಿದೆ. ನಾವು ಫೈನಲ್‌ನಲ್ಲಿ ಆಡುವ ಗುರಿ ಹೊಂದಿದ್ದೆವು.

-ಮನ್ಸೂರ್ ರಾಣಾ, ಪಾಕ್ ಕೋಚ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News