ಸಾಹಿತಿಗಳ ಬಗ್ಗೆ ಆರೋಪ ಸಲ್ಲದು

Update: 2018-02-01 18:32 GMT

ಮಾನ್ಯರೇ,

ಇತ್ತೀಚೆಗೆ ರಾಜ್ಯದಲ್ಲಿ ಆಯ್ಕೆಯಾದ ಕೇಂದ್ರದ ಸಚಿವರೊಬ್ಬರು ಕಲಹ ಉಂಟು ಮಾಡುವುದೇ ತಮ್ಮ ಇಲಾಖೆಯ ‘ಕೌಶಲ’ವೆಂದು ಭಾವಿಸಿದಂತಿದೆ. ಈ ಹಿನ್ನೆಲೆಯಲ್ಲಿ ಪ್ರತೀ ದಿನ ಒಂದಲ್ಲ ಒಂದು ವಿವಾದಾತ್ಮಕ ಹೇಳಿಕೆಗಳನ್ನು ಕೊಡುತ್ತಾ, ಸುದ್ದಿಯಲ್ಲಿದ್ದಾರೆ. ಸಾಹಿತಿಗಳು, ಪ್ರಗತಿಪರರು ಕೇವಲ ಪ್ರಶಸ್ತಿ ಮತ್ತು ನಿವೇಶನದ ಆಸೆಗಾಗಿ ತಮ್ಮ ಸಾಹಿತ್ಯ ಕೃಷಿ ಮಾಡುತ್ತಾರೆ, ಪ್ರಗತಿಪರರು ಸರಕಾರದ ಪರವಾಗಿದ್ದಾರೆ ಎನ್ನುವ ಹೇಳಿಕೆಯನ್ನು ನೀಡಿರುತ್ತಾರೆ. ಕಡುಬಡತನದ ನಡುವೆ ತಮ್ಮ ಬದುಕನ್ನು ಸ್ವಾಭಿಮಾನದಿಂದ ನಡೆಸಿದ ಡಿವಿಜಿಯವರ ವಿಚಾರ ಬಹುಶಃ ಇವರಿಗೆ ಗೊತ್ತಿಲ್ಲ.

ಮೈಸೂರು ಮಹಾರಾಜರಿಂದ ಹಿಡಿದು ಅಂದಿನ ದಿವಾನರಾಗಿದ್ದ ಎಲ್ಲರಿಂದಲೂ ಬೇಕಾದ ನೆರವನ್ನು ಪಡೆದುಕೊಳ್ಳಲು ಸಾಧ್ಯವಿದ್ದರೂ ಯಾರ ಕೃಪೆಗೂ ಒಳಗಾಗದೆ ಬದುಕಿದಂತಹ ಮತ್ತು ತಮಗೆ ಬಂದ ಹಲವಾರು ಸ್ವರೂಪದ ಪ್ರಶಸ್ತಿಯ ಮೊತ್ತವನ್ನು ಗೋಕುಲೆ ಸಾರ್ವಜನಿಕ ಸಂಸ್ಥೆಗೆೆ ನೀಡಿದ ವಿಚಾರ ಅವರು ಅರಿತರೆ ಒಳ್ಳೆಯದು. ಹಾಗೆಯೇ ಬೇಂದ್ರೆಯವರಾಗಲೀ, ಕಾರಂತರಾಗಲೀ ಸರಕಾರದ ಹಂಗಿನಲ್ಲಿ ಬದುಕಿದವರಲ್ಲ. ಮಾಸ್ತಿಯವರು ದಾನ ಮಾಡುವಷ್ಟು ಸಂಪಾದಿಸಿದ್ದರು. ಇನ್ನು ಕುವೆಂಪುರವರು ಸರಕಾರಗಳನ್ನು ಲೆಕ್ಕಿಸದೆ ತಮ್ಮ ಖಚಿತವಾದ ಅಭಿಪ್ರಾಯಗಳನ್ನು ನಿಷ್ಠುರವಾಗಿಯೇ ಹೇಳುತ್ತಿದ್ದರು. ಇಂತಹ ಸಾಹಿತಿಗಳ ಪಟ್ಟಿಯಲ್ಲಿ ನೂರಾರು ಜನರು ಇದ್ದಾರೆ. ಇತ್ತೀಚಿನ ದಿನಗಳಲ್ಲಿ ದೇವನೂರ ಮಹಾದೇವರವರು ಬಯಸಿದ್ದರೆ ವಿಧಾನ ಪರಿಷತ್ತಿನ ಸದಸ್ಯರಾಗಬಹುದಿತ್ತು. ಹಲವು ನಿವೇಶನಗಳನ್ನು ಪಡೆದುಕೊಳ್ಳಬಹುದಿತ್ತು. ಇವುಗಳನ್ನು ಅವರು ಕಣ್ಣೆತ್ತಿಯೂ ನೋಡಿಲ್ಲ. ಇದೇ ರೀತಿಯಲ್ಲಿ ಸಮಾಜಮುಖಿ ಹೋರಾಟಗಳಲ್ಲಿ ತೊಡಗಿಸಿಕೊಂಡಿರುವ ಅನೇಕ ಪ್ರಗತಿಪರರು ಬಡತನದಲ್ಲಿ ಬದುಕುತ್ತಿದ್ದಾರೆ. ಆದರೆ ತಮ್ಮ ಬದ್ಧತೆಯನ್ನು ಬಿಟ್ಟುಕೊಟ್ಟವರಲ್ಲ.

ಸರಕಾರದ ಸವಲತ್ತಿಗೆ, ಪ್ರಶಸ್ತಿಗೆ ತಮ್ಮ ನಿಲುವುಗಳನ್ನು ಮತ್ತು ವಿಚಾರಧಾರೆಯನ್ನು ಬದಿಗಿಟ್ಟು ರಾಜಿಯಾದವರು ಕೆಲವು ಮಂದಿ ಇರಬಹುದು. ಹಾಗೆಂದು ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ಅಳೆಯುವುದು ಸರಿಯಲ್ಲ. ರಾಜಕೀಯ ಪಕ್ಷಗಳನ್ನು ಬೆಂಬಲಿಸುವುದು ಎಂದರೆ ಸಿದ್ಧಾಂತಗಳನ್ನು ಬೆಂಬಲಿಸುವುದು ಎಂದರ್ಥ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಹೋರಾಟ ನಡೆಸಿದವರಲ್ಲಿ ಅನೇಕ ಮಂದಿ ಇಂದು ಬಿಜೆಪಿಯ ವಿರುದ್ಧವಿದ್ದಾರೆ. ವಿಶೇಷವಾಗಿ 1990ರ ನಂತರ ಈ ದೇಶದಲ್ಲಿ ಕೋಮು ಸಾಮರಸ್ಯ ಕದಡಲು ನಡೆದಂತಹ ಹಲವಾರು ಪ್ರಕರಣಗಳಿಂದ ಇಂತಹ ನಿಲುವುಗಳನ್ನು ಕೈಗೊಂಡಿರುತ್ತಾರೆ. ಜಾತ್ಯತೀತತೆಯ ನಿಲುವಿಗಾಗಿ ಕಾಂಗ್ರೆಸನ್ನು ಬೆಂಬಲಿಸುವ ಅನೇಕ ಸಾಹಿತಿಗಳು ಮತ್ತು ಪ್ರಗತಿಪರರು ಹಿಂದಿನ ಕೇಂದ್ರ ಸರಕಾರದ ವಿದೇಶಿ ಬಂಡವಾಳದ ನೀತಿ, ಬಹುರಾಷ್ಟ್ರೀಯ ಕಂಪೆನಿಗಳಿಗೆ ಮನ್ನಣೆ, ಅಣು ಒಪ್ಪಂದ, ಗ್ಯಾಟ್ ಡಂಕೆಲ್ ಪ್ರಸ್ತಾವನೆ, ಭ್ರಷ್ಟಾಚಾರ ಇಂತಹ ವಿಚಾರಗಳು ಬಂದಾಗ ಬಹಿರಂಗವಾಗಿಯೇ ವಿರೋಧಿಸಿದ್ದಾರೆ.

ಸಾಹಿತಿಗಳು ಮತ್ತು ಪ್ರಗತಿಪರರಿಗೆ ಪಕ್ಷಗಳು ಮುಖ್ಯವಲ್ಲ. ಜಾತ್ಯತೀತತೆ ಮತ್ತು ಕೋಮುವಾದದ ನೆಲೆಯಲ್ಲಿ ತಮ್ಮ ನಿಲುವುಗಳನ್ನು ಅವರು ವ್ಯಕ್ತಪಡಿಸುತ್ತಾರೆ. ಸಾಹಿತಿಗಳಾದ ಮಾತ್ರಕ್ಕೆ ರಾಜಕೀಯ ಅಭಿಪ್ರಾಯ ವ್ಯಕ್ತಪಡಿಸಬಾರದು ಎಂದಿದೆಯೇ?

Similar News