ಕಡಲೆ ಖರೀದಿ ಪ್ರಮಾಣ ಹೆಚ್ಚಿಸಲು ಪ್ರಯತ್ನ: ವಿನಯ್‌ ಕುಲಕರ್ಣಿ

Update: 2018-02-02 17:51 GMT

ಧಾರವಾಡ, ಫೆ.02: ಸರಕಾರ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಾಲ್ ಕಡಲೆ ಕಾಳುಗಳಿಗೆ 4,400 ರೂ.ಗಳಂತೆ ಪ್ರತಿ ರೈತರಿಂದ 10 ಕ್ವಿಂಟಾಲ್ ಖರೀದಿಸಲು ಆರಂಭಿಸಿದೆ. ಆದರೆ, ರೈತರು ಖರೀದಿ ಪ್ರಮಾಣ ಹೆಚ್ಚಿಸಲು ಬೇಡಿಕೆ ಇಟ್ಟಿದ್ದು, ಈ ನಿಟ್ಟಿನಲ್ಲಿ ಸರಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ವಿನಯ್ ಕುಲಕರ್ಣಿ ಹೇಳಿದ್ದಾರೆ.

ಶುಕ್ರವಾರ ಧಾರವಾಡ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಕಡಲೆ ಕಾಳು ಖರೀದಿ ಕೇಂದ್ರದ ಪ್ರಾರಂಭೋತ್ಸವ ನೆರವೇರಿಸಿ ಮಾತನಾಡಿದ ಅವರು, ಹೆಚ್ಚಿನ ವೆಚ್ಚ ಮಾಡಿ ರೈತರು ಕಡಲೆ ಕಾಳು ಉತ್ಪಾದನೆ ಮಾಡಿದ್ದಾರೆ. ಆದರೆ, ಈಗಿನ ದರ ಕಡಿಮೆಯಾಗಿದೆ ಎಂದರು.

ಕಡಲೆಕಾಳು ದರ ಕುಸಿತಕ್ಕೆ ಹೊರ ದೇಶಗಳಿಂದ ಕಡಲೆ ಕಾಳು ಆಮದು ಮಾಡಿಕೊಂಡಿರುವುದೇ ಕಾರಣವಾಗಿದೆ. ಒಬ್ಬ ರೈತನ ಒಂದು ಖಾತೆಗೆ ಗರಿಷ್ಠ ಹತ್ತು ಕ್ವಿಂಟಾಲ್ ಮಾತ್ರ ಕಡಲೆಕಾಳು ಖರೀದಿಗೆ ಅವಕಾಶವಿದೆ. ಇದನ್ನು ಕನಿಷ್ಠ 20 ಕ್ವಿಂಟಾಲ್‌ಗೆ ಹೆಚ್ಚಿಸಲು ಸರಕಾರಕ್ಕೆ ವಿನಂತಿಸುತ್ತೇನೆ ಎಂದು ಅವರು ತಿಳಿಸಿದರು.

ಕೃಷಿ ಉತ್ಪನ್ನ ಮಾರುಕಟ್ಟೆಗೆ ಎಲ್ಲ ಮೂಲಭೂತ ಸೌಕರ್ಯಗಳನ್ನು ಪೂರೈಸಲಾಗುವುದು. ರಸ್ತೆ ಕಾಮಗಾರಿ, ವಿದ್ಯುತ್, ಕುಡಿಯುವ ನೀರು ಸೇರಿದಂತೆ ಅಗತ್ಯ ಸೇವೆಗಳನ್ನು ನೀಡಲಾಗುವುದು ಎಂದು ವಿನಯ್ ಕುಲಕರ್ಣಿ ಹೇಳಿದರು.

ಧಾರವಾಡ ಎಪಿಎಂಸಿ ಮಾಜಿ ಅಧ್ಯಕ್ಷ ರಮೇಶ್ ತಳಗೇರಿ ಮಾತನಾಡಿ, ರೈತರಿಂದ ಕಡಲೆ ಕಾಳು ಖರೀದಿಸಲು ಹಾಕಿರುವ ಮಿತಿಯನ್ನು ಹೆಚ್ಚಿಸಬೇಕು. ಮತ್ತು ಪಹಣಿ ಪತ್ರಿಕೆಯಲ್ಲಿ ಕಡಲೆಕಾಳು ಬೆಳೆ ಎಂದು ಸರಿಯಾಗಿ ದಾಖಲಿಸಬೇಕು ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಎಪಿಎಂಸಿ ಅಧ್ಯಕ್ಷ ಸಿದ್ದಣ್ಣ ಪ್ಯಾಟಿ ಮಾತನಾಡಿ, ಕಡಲೆಕಾಳು ಖರೀದಿ ಆರಂಭಿಸಿರುವುದು ರೈತರಿಗೆ ತುಂಬಾ ಅನುಕೂಲವಾಗಿದೆ. ರೈತರು ಇದರ ಸದುಪಯೋಗ ಮಾಡಿಕೊಳ್ಳಬೇಕು. ಹೆಬ್ಬಳ್ಳಿ ದೊಡ್ಡ ಗ್ರಾಮವಾಗಿದ್ದು, ಸುತ್ತಲಿನ ಹಳ್ಳಿಗಳಿಗೆ ಕೇಂದ್ರಸ್ಥಾನದಲ್ಲಿದೆ. ಆದುದರಿಂದ, ಹೆಬ್ಬಳ್ಳಿಯಲ್ಲಿ ಕಡಲೆಕಾಳು ಖರೀದಿ ಕೇಂದ್ರ ಆರಂಭಿಸಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೃ.ಉ.ಮಾ.ಸಮಿತಿ ಉಪಾಧ್ಯಕ್ಷ ರಾಯಪ್ಪಹುಡೆದ, ಸದಸ್ಯರಾದ ಮಹಾವೀರ್ ಜೈನ್, ಎಸ್.ಎನ್.ಸುರೇಬಾನ, ಎಚ್.ಆರ್.ಸನದಿ, ರೇಣುಕಾ ಕಳ್ಳಿಮನಿ, ಅಕ್ಕಮ್ಮ ಕುಮಾರ ದೇಸಾಯಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ, ಕಾರ್ಯದರ್ಶಿ ವಿ.ಎಂ.ಲಮಾಣಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News