ಯೂಟ್ಯೂಬ್‌ನಲ್ಲಿ ಅಶ್ವಿನ್ ಬೌಲಿಂಗ್ ಶೈಲಿ ನೋಡುತ್ತಾ ಬೆಳೆದ ಯುವಕ ಐಪಿಎಲ್ ಸ್ಟಾರ್!

Update: 2018-02-03 06:36 GMT

ಕಾಬೂಲ್, ಫೆ.3: ಯೂ ಟ್ಯೂಬ್‌ನಲ್ಲಿ ಭಾರತದ ಆಫ್ ಸ್ಪಿನ್ನರ್ ಆರ್.ಅಶ್ವಿನ್ ಬೌಲಿಂಗ್ ವಿಡಿಯೋವನ್ನು ನೋಡುತ್ತಾ ಸ್ಪಿನ್ ಬೌಲಿಂಗ್ ಮರ್ಮ ಅರಿಯಲು ಯತ್ನಿಸಿದ ಅಫ್ಘಾನಿಸ್ತಾನದ ಉದಯೋನ್ಮುಖ ಬೌಲರ್ ಇದೀಗ ಐಪಿಎಲ್‌ನಲ್ಲಿ ಅಶ್ವಿನ್‌ರೊಂದಿಗೆ ಆಡುವ ಅಪೂರ್ವ ಅವಕಾಶವನ್ನು ಪಡೆದುಕೊಂಡಿದ್ದಾರೆ.

 ಅಫ್ಘಾನ್‌ನ 17ರ ಹರೆಯದ ಮುಜೀಬ್ ಝದ್ರಾನ್ ಅಂತಹ ಅದೃಷ್ಟವಂತ ಬೌಲರ್ ಆಗಿದ್ದಾರೆ.

 ‘‘ನಾನು ಯೂ ಟ್ಯೂಬ್‌ನಲ್ಲಿ ಅಶ್ವಿನ್ ಮಾತ್ರವಲ್ಲ, ಸುನೀಲ್ ನರೇನ್(ವಿಂಡೀಸ್ ಸ್ಪಿನ್ನರ್) ಹಾಗೂ ಅಜಂತಾ ಮೆಂಡಿಸ್(ಶ್ರೀಲಂಕಾ) ಹೇಗೆ ಚೆಂಡನ್ನು ಹಿಡಿದುಕೊಂಡು ಎಸೆಯುತ್ತಾರೆ ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೆ. ಲೆಕ್ಕವಿಲ್ಲದ್ದಷ್ಟು ಸಮಯ ಅಭ್ಯಾಸ ನಡೆಸಿದ್ದೆ. ಬೆರಳಿನ ಮೂಲಕ ಚೆಂಡನ್ನು ತಳ್ಳುವ ಕಲೆ ಕರಗತ ಮಾಡಿಕೊಂಡೆ’’ ಎಂದು ಮುಜೀಬ್ ಹೇಳಿದ್ದಾರೆ. ಇತ್ತೀಚೆಗೆ ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳು ಮುಜೀಬ್‌ಗೆ ಬಿಡ್ ಸಲ್ಲಿಸಿದ್ದವು. ಅಂತಿಮವಾಗಿ ಪಂಜಾಬ್ ತಂಡ 4 ಕೋ.ರೂ.ಗೆ ಮುಜೀಬ್‌ರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ. ಅಶ್ವಿನ್ ಕೂಡ ಪಂಜಾಬ್ ತಂಡಕ್ಕೆ ಹರಾಜಾಗಿದ್ದಾರೆ.

 2017ರ ಸೆಪ್ಟಂಬರ್‌ನಲ್ಲಿ ಅಫ್ಘಾನಿಸ್ತಾನ ತಂಡ ಬಾಂಗ್ಲಾದೇಶ ಕ್ರಿಕೆಟ್ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ 5 ಪಂದ್ಯಗಳಲ್ಲಿ 17 ವಿಕೆಟ್‌ಗಳನ್ನು ಕಬಳಿಸಿದ್ದ ಮುಜೀಬ್ ಅಫ್ಘಾನಿಸ್ತಾನ ತಂಡ 3-1 ಅಂತರದಿಂದ ಸರಣಿ ಜಯಿಸಲು ನೆರವಾಗಿದ್ದರು. ಏಷ್ಯಾಕಪ್‌ನಲ್ಲೂ ಉತ್ತಮ ಪ್ರದರ್ಶನ ನೀಡಿರುವ ಅವರು 5 ಪಂದ್ಯಗಳಲ್ಲಿ 20 ವಿಕೆಟ್‌ಗಳನ್ನು ಉರುಳಿಸಿದ್ದರು. ಈಗ ನಡೆಯುತ್ತಿರುವ ಐಸಿಸಿ ಅಂಡರ್-19 ವಿಶ್ವಕಪ್‌ನಲ್ಲಿ ನ್ಯೂಝಿಲೆಂಡ್ ವಿರುದ್ಧ ಕ್ವಾರ್ಟರ್ ಫೈನಲ್‌ನಲ್ಲಿ 14 ರನ್‌ಗೆ 4 ವಿಕೆಟ್‌ಗಳನ್ನು ಉಡಾಯಿಸಿ ಅಫ್ಘಾನಿಸ್ತಾನ ತಂಡ ಮೊದಲ ಬಾರಿ ಸೆಮಿ ಫೈನಲ್‌ಗೆ ತಲುಪಲು ನೆರವಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News