ಸಮ ಸಮಾಜಕ್ಕಾಗಿ ಅರಳಿದ ಹೂವು 'ರೋಸ'

Update: 2018-02-03 12:30 GMT

ರೋಸ ಪಾರ್ಕ್ಸ್, ಸ್ವಭಾವತಃ ಸಂಕೋಚದ ಹೆಣ್ಣು ಮಗಳು. ಅಮೆರಿಕದ ಅಲಬಾಮಾದ ಮೊಂಟ್‌ಗೊಮೆರಿ ಆಕೆಯ ಊರು. ಹೊಟ್ಟೆಪಾಡಿಗೆ ಮಳಿಗೆ ಯೊಂದರಲ್ಲಿ ಟೈಲರ್ ವೃತ್ತಿ. ಅವತ್ತು ಗುರುವಾರ, ಡಿಸೆಂಬರ್ 1, 1955. ಆಕೆ ತನ್ನ ಎಂದಿನ ದಿನಚರಿಯಂತೆ ಕೆಲಸ ಮುಗಿಸಿಕೊಂಡು ಮನೆಗೆ ಹೊರಡಲು ಸಂಜೆ 6ರ ಬಸ್ ಏರುತ್ತಾಳೆ. ಆ ಬಸ್ಸಿನಲ್ಲಿ ನಡೆದ ಘಟನೆ ಕರಿಯ ಬಿಳಿಯ ತಾರತಮ್ಯದ ಮನುಷ್ಯ-ಮನುಷ್ಯರ ನಡುವಿನ ಅಂತರದ ನಿರ್ನಾಮಕ್ಕೆ ನಾಂದಿ ಹಾಡೀತೆಂಬ ಸಣ್ಣ ಕುರುಹೂ ಇರದ ರೋಸ ಪಾರ್ಕ್ಸ್ ಸಿಕ್ಕ ಸೀಟಿನಲ್ಲಿ ಕೂರುತ್ತಾಳೆ. ಅದು ವರ್ಣಭೇದ ಜೀವಂತವಾಗಿ, ಕಾನೂನುಬದ್ಧವಾಗಿದ್ದ ಕಾಲ. ಕರಿಯರಿಗೆ ಹೊಟೇಲ್, ಕ್ಲಬ್, ಶಾಲೆ, ಕೊನೆಗೆ ಕ್ಷೌರಿಕನ ಅಂಗಡಿಗೂ ಮುಕ್ತ ಪ್ರವೇಶವಿರಲಿಲ್ಲ. ಅಮೆರಿಕದ ಬಸ್ಸುಗಳಲ್ಲಿ ಕರಿಯ ಮತ್ತು ಬಿಳಿಯ ಪ್ರಯಾಣಿಕರಿಗೆ ಪ್ರತ್ಯೇಕ ಆಸನ ವ್ಯವಸ್ಥೆ. ಬಿಳಿಯರಿಗೆ ಬಹುತೇಕ ಮುಂಭಾಗದಲ್ಲಿ ಆಸನ ವ್ಯವಸ್ಥೆಯಿದ್ದು ಕರಿಯರಿಗೆ ಹಿಂಭಾಗದಲ್ಲಿ. ಕರಿಯರು ಮುಂದೆ ಚಾಲಕನ ಬಳಿ ಬಂದು ಟಿಕೆಟ್ ಪಡೆದು ಮತ್ತೆ ಹಿಂದಿನ ಬಾಗಿಲಿಗೆ ಬಂದು ಬಸ್ಸನ್ನು ಏರಬೇಕಿತ್ತು. ಎಷ್ಟೋ ಬಾರಿ ಟಿಕೆಟ್ ಪಡೆದು ಹಿಂದಕ್ಕೆ ಬಂದು ಬಸ್ ಹತ್ತ್ತಿಕೊಳ್ಳುವುದರೊಳಗೆ ಬಸ್ಸನ್ನು ಚಲಾಯಿಸಿಕೊಂಡು ಹೋದ ಸಂದರ್ಭಗಳುಂಟು. ಇಂಥ ಅನುಭವ ರೋಸಳಿಗೂ ಆಗಿತ್ತು.

ರೋಸ ಪಾರ್ಕ್ಸ್ ಕರಿಯ ಹೆಣ್ಣುಮಗಳು;

ಆಫ್ರಿಕನ್-ಅಮೆರಿಕನ್. ಹಾಗಾಗಿ ಕರಿಯರಿಗೆ ಮೀಸಲಾದ ಸೀಟಿನಲ್ಲಿಯೇ ಆಸೀನಳಾಗಿರುತ್ತಾಳೆ. ಮನೆ ತಲುಪಲು 20 ನಿಮಿಷದ ಹಾದಿ ಅಷ್ಟೆ. ಪ್ರಯಾಣಿಕರಿಂದ ಬಸ್ಸು ತುಂಬುತ್ತದೆ. ಬಿಳಿಯರ ಸೀಟುಗಳು ಭರ್ತಿ. ತಮ್ಮ ಸೀಟುಗಳು ಖಾಲಿ ಇಲ್ಲದಿದ್ದಾಗ ಬಿಳಿಯರು ಕರಿಯರ ಸೀಟಿನಲ್ಲಿ ಕೂರಬಹುದು. ತಾವು ಕೂತಿರುವ ಸೀಟನ್ನು ಕರಿಯರು ಎದ್ದು ಬಿಳಿಯರಿಗೆ ಬಿಟ್ಟು ಕೊಡುತ್ತಾರೆ. ಕೊಡಬೇಕು. ಅದು ಆ ಊರಿನ ಕಾನೂನು. ಅಂದು ಕೂಡ ಹಾಗೆ ಆಯಿತು. ಬಿಳಿಯರು ತಮ್ಮ ಸೀಟಿಲ್ಲದೆ ಕರಿಯರ ಸೀಟಿಗೆ ಬಂದರು. ರೋಸಳ ಪಕ್ಕದಲ್ಲಿದ್ದ ಕರಿಯರು ತಮ್ಮ ಸೀಟನ್ನು ಬಿಳಿಯರಿಗೆ ಬಿಟ್ಟು ಕೊಡುತ್ತಾರೆ. ರೋಸ ಪಾರ್ಕ್ಸ್ ಎದ್ದು ತನ್ನ ಸೀಟನ್ನು ಬಿಟ್ಟು ಕೊಡಬೇಕಿತ್ತು. ಹೂಹ್ಞೂಂ! ಆಕೆ ತನ್ನ ಪಾಡಿಗೆ ಕೂತೇ ಇದ್ದಳು. ಇದನ್ನು ನೋಡಿ ಕೋಪೋದ್ರಿಕ್ತನಾದ ಬಸ್ ಚಾಲಕನ ಕೂಗಿಗೂ ಕಿವಿಗೊಡುವುದಿಲ್ಲ ರೋಸ. ಇದು ಅಮೆರಿಕದಂಥ ದೇಶದಲ್ಲಿ ಎಂದೂ ಸಂಭವಿಸಿರದಂಥ ಘಟನೆ. ವಾತಾವರಣ ಬಿಗುವಾಯಿತು. ಬಸ್ಸಿನಲ್ಲಿದ್ದ ಅಷ್ಟೂ ಪ್ರಯಾಣಿಕರ ಕಣ್ಣು ರೋಸಳೆಡೆಗೆ. ಚಾಲಕನ ಕೂಗಾಟ ಚೀರಾಟ ಮುಂದುವರಿದಿತ್ತು. ರೋಸ ಮಾತ್ರ ಕಲ್ಲಿನಂತೆ ನಿಶ್ಚಲ. ಅವಳು ಬಿಳಿಯರಿಗೆ ಕಾದಿರಿಸಿದ ಸ್ಥಳದಲ್ಲಿ ಕೂತಿರುವುದಿಲ್ಲ. ಆದರೆ ರೋಸಾಳ ಆ ನಡವಳಿಕೆ ಕೂಡ ಕಾನೂನು ಬಾಹಿರವಾಗಿತ್ತು. ಚಾಲಕನಿಂದ ಪೋಲಿಸರಿಗೆ ದೂರು ಹೋಗುತ್ತದೆ. ಪೋಲಿಸರು ರೋಸಳನ್ನು ಬಂಧಿಸಿ ದಂಡಿಸುತ್ತಾರೆ. ಈ ಸುದ್ದಿ ಕಾಡ್ಗಿಚ್ಚಿನಂತೆ ಇಡೀ ಊರಿಗೆ ಹರಡುತ್ತದೆ. ಇದು ಕರಿಯರ ನಡುವೆ ಆಕ್ರೋಶದ ಸಂಚಲನವನ್ನು ಮೂಡಿಸುತ್ತದೆ. ಕರಿಯರೆಲ್ಲ ಒಗ್ಗೂಡಿ ರೋಸಳ ನಡೆಯನ್ನು ಬೆಂಬಲಿಸಿ ಚಳವಳಿಗೆ ಕರೆ ಕೊಡುತ್ತಾರೆ. ಮೊದಲು ಬಂದವರಿಗೆ ಬಸ್ಸಿನ ಸೀಟು, ಕರಿಯ ಚಾಲಕರ ನೇಮಕ, ಹೀಗೆ ತಮ್ಮ ಬೇಡಿಕೆಗಳನ್ನು ಮುಂದಿಟ್ಟು ಅದು ಈಡೇರುವವರೆಗೂ ಬಸ್ ಪ್ರಯಾಣವನ್ನು ನಿಷೇಧಿಸಿಕೊಳ್ಳುತ್ತಾರೆ. ಇದು ಮುಂದೆ ‘‘ಮೊಂಟ್‌ಗೊಮೆರಿ ಬಸ್ ನಿಷೇಧ ಚಳವಳಿ’’ಯೆಂದು ಐತಿಹಾಸಿಕವಾಗುತ್ತದೆ. ರೋಸ ಪಾರ್ಕ್ಸ್ ತನಗೆ ವಿಧಿಸಿದ ದಂಡನೆಯನ್ನು ಮೇಲಿನ ಕೋರ್ಟಿನಲ್ಲಿ ಪ್ರಶ್ನಿಸುತ್ತಾಳೆ. ಆ ಊರಿನಲ್ಲಿದ್ದ ಸುಮಾರು 40,000 ಕರಿಯರು ಬಸ್ ಪ್ರಯಾಣವನ್ನು ಸಂಪೂರ್ಣವಾಗಿ ನಿಲ್ಲಿಸುತ್ತಾರೆ. ಹಲವಾರು ಕರಿಯರು ತಮ್ಮ ಕೆಲಸಕ್ಕೆ ನಡೆದೇ ಹೋಗುತ್ತಾರೆ, ಕರಿಯ ಟ್ಯಾಕ್ಸಿ ಚಾಲಕರು ಚಳವಳಿ ಉತ್ತೇಜಿಸಲು ಕರಿಯ ಪ್ರಯಾಣಕರಿಗೆ ಕೇವಲ 10 ಸೆಂಟ್ ಅಂದರೆ ಬಸ್ ಚಾರ್ಜಿನ ಬೆಲೆಯನ್ನಷ್ಟೇ ಪಡೆದು ಸಹಕರಿಸುತ್ತಾರೆ. ಕರಿಯ ಮುಖಂಡರು ಸೇರಿ ಕಾರ್ ಪೂಲಿಂಗ್ ವ್ಯವಸ್ಥೆಯನ್ನು ಕೂಡ ಮಾಡುತ್ತಾರೆ. ದಿನ ದಿನಕ್ಕೂ ಚಳವಳಿ ಕಾವು ಪಡೆಯುತ್ತದೆ. ನಿಗದಿತವಾಗಿ ಕರಿಯರು ಒಗ್ಗೂಡಿ ಚರ್ಚಿಸಿ, ಮುಂದಿನ ನಡೆಯನ್ನು ನಿರ್ಧರಿಸುತ್ತಾರೆ. ತಮ್ಮ ಚಳವಳಿಯ ನಾಯಕನನ್ನಾಗಿ ಯುವ ಪ್ಯಾಸ್ಟರ್ ‘ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್’ ಅವರನ್ನು ಆಯ್ಕೆ ಮಾಡುತ್ತಾರೆ. ಮುಂದೆ ಅವರು ಅಮೆರಿಕ ನಾಗರಿಕ ಚಳವಳಿಯ ರಾಷ್ಟ್ರ ನಾಯಕರಾಗಿ ರೂಪುಗೊಳ್ಳುವುದು ಇತಿಹಾಸ. ಮೊಂಟ್‌ಗೊಮೆರಿ ಬಸ್ ಪ್ರಯಾಣಿಕರಲ್ಲಿ ಬಹುಪಾಲು ಕರಿಯ ಪ್ರಯಾಣಿಕರೇ! ಕರಿಯರು ಈ ಚಳವಳಿಯನ್ನು ತಮ್ಮ ಆತ್ಮಾಭಿಮಾನದ ಸಂಕೇತವಾಗಿ ಪರಿಗಣಿಸುತ್ತಾರೆ. ಮಕ್ಕಳೂ ವೃದ್ಧರೂ ಸೇರಿದಂತೆ ಯಾರೊಬ್ಬರೂ ಬಸ್ ಪ್ರಯಾಣ ಮಾಡುವುದಿಲ್ಲ. ಕೆಲವರಂತೂ ತಮ್ಮ ಕೆಲಸ-ಕಾರ್ಯಗಳಿಗೆ 20-30 ಕಿ.ಮೀ.ಗಳಷ್ಟು ದೂರ ನಡೆದೇ ಹೋಗುತ್ತಾರೆ. ಡಝನ್‌ಗಟ್ಟಲೆ ಬಸ್ಸುಗಳನ್ನು ಪ್ರಯಾಣಿಕರಿಲ್ಲದೆ ನಿಲ್ಲಿಸಲಾಗಿರುತ್ತದೆ. ಬಸ್ ಕಂಪೆನಿಗಳಿಗೆ ತೀವ್ರ ಆರ್ಥಿಕ ಮುಗ್ಗಟ್ಟು ಉಂಟಾಗುತ್ತದೆ. ಕರಿಯರಿಗೆ ತಮ್ಮನ್ನು ಹೀನಾಯವಾಗಿ ಕಾಣಲಾಗುತ್ತಿದ್ದ ವ್ಯವಸ್ಥೆಯನ್ನು ಎದುರಿಸುವ ಸ್ಥೈರ್ಯ ತುಂಬಿ ಬಂದಿರುತ್ತದೆ. ಕಾಲಾಂತರದಿಂದ ಅನುಭವಿಸಿ ಸಹಿಸಿಕೊಂಡಿದ್ದ ಯಾತನೆಯ ಕಟ್ಟೆ ಒಡೆಯಲು ಈ ಚಳವಳಿ ನೆಪವಾಗುತ್ತದೆ. ಇತ್ತ ಕೋರ್ಟಿನ ಮನವಿ ವಿಚಾರಣೆ ಆಮೆ ವೇಗದಲ್ಲಿ ನಡೆಯುತ್ತಿರುತ್ತದೆ. ಮನವಿ, ಮೇಲ್ಮನವಿ ವಿಚಾರಣೆಗಳು ನಡೆದು, ಅಮೆರಿಕದ ಉಚ್ಚ ನ್ಯಾಯಾಲಯ ಇದೊಂದು ಅರ್ಥಹೀನ ನಿಯಮ, ಯಾವುದೇ ಭೇದವಿಲ್ಲದೆ ಪ್ರತಿಯೊಬ್ಬ ಪ್ರಜೆಯೂ ಸಮಾನ ಹಕ್ಕು ಮತ್ತು ಸುರಕ್ಷತೆಗೆ ಅರ್ಹ ಎಂದು ತೀರ್ಪು ಕೊಡುತ್ತದೆ. ಒಂದು ವರ್ಷಕ್ಕೂ ಅಧಿಕ ಅಂದರೆ 381 ದಿನಗಳ ಬಸ್ ನಿಷೇಧ ಚಳವಳಿ ಅಂತ್ಯಗೊಳ್ಳುತ್ತದೆ. ಕರಿಯರ ಬೇಡಿಕೆಗಳು ಈಡೇರಿ ವರ್ಣಭೇದವಿಲ್ಲದ ಸಮ ಸಮಾಜದ ವ್ಯವಸ್ಥೆಯ ದಾರಿ ಸುಗಮವಾಗುತ್ತದೆ.

ಈ ಹೊತ್ತಿಗಾಗಲೇ ನಾಗರಿಕ ಹಕ್ಕು ಚಳವಳಿಯ ನಾಯಕಿಯಾಗಿ ರೋಸ ಪಾರ್ಕ್ಸ್ ರೂಪು ಗೊಂಡಿರುತ್ತಾಳೆ. ಈ ನಾಯಕತ್ವ ಅವಳ ವೈಯಕ್ತಿಕ ಬದುಕಿಗೆ ಎರವಾಗಿ, ತನ್ನ ಕೆಲಸ ಕಳೆದುಕೊಳ್ಳುತ್ತಾಳೆ. ಗಂಡ ರೇಮಂಡ್‌ನ ಕಚೇರಿಯ ಮಾಲಕ ತನ್ನ ಹೆಂಡತಿ ರೋಸಳಿಗೆ ಹೇಳಿ ಕೋರ್ಟಿನ ದಾವೆಯನ್ನು ಹಿಂಪಡೆಯುವಂತೆ ಒತ್ತಾಯಿಸುತ್ತಾನೆ, ಅದು ಫಲ ನೀಡದ ಕಾರಣ ಕೆಲಸದಿಂದ ಕಿತ್ತು ಹಾಕುತ್ತಾನೆ. ವಿಧಿಯಿಲ್ಲದೆ ರೋಸ ದಂಪತಿ ಊರು ಬಿಡಬೇಕಾಗುತ್ತದೆ. ನಂತರ ಡೆಟ್ರಾಯಿಟ್‌ನಲ್ಲಿ ನೆಲೆ ಕಂಡುಕೊಳ್ಳುತ್ತಾರೆ.

ನಂತರ ರೋಸ ದೇಶಾದ್ಯಂತ ಸಂಚರಿಸಿ ಹಲವಾರು ನಾಗರಿಕ ಹಕ್ಕಿನ ಹೋರಾಟಗಳಲ್ಲಿ ಭಾಗವಹಿಸುತ್ತಾಳೆ. ವೈಯಕ್ತಿಕ ಜೀವನದಲ್ಲಿ ಹಣಕಾಸಿನ ಅಭಾವ ತೀವ್ರವಾಗಿದ್ದರೂ ತನ್ನ ಭಾಷಣ, ಪ್ರಶಸ್ತಿ ಮುಂತಾದವುಗಳಿಂದ ಬಂದ ಗೌರವ ಧನವನ್ನು ವಿದ್ಯಾರ್ಥಿಗಳಿಗೆ ದಾನ ಮಾಡುವುದು ನಿಲ್ಲುವುದಿಲ್ಲ. ಅವಳ ‘ರೋಸ ಪಾರ್ಕ್ಸ್-ನನ್ನ ಕಥೆ’ ಆತ್ಮಚರಿತ್ರೆ ಇಂದಿಗೂ ಸ್ಫೂರ್ತಿಗಾಥೆ. ಅಕ್ಷರಶಃ ಹೋರಾಟ ಗಾರ್ತಿ ರೋಸ ತುಂಬು ಜೀವನ ನಡೆಸಿ ತನ್ನ 92ನೇ ವಯಸ್ಸಿನಲ್ಲಿ ಕಾಲವಾಗುತ್ತಾಳೆ.

ರೋಸ ಪಡೆದ ಪ್ರಶಸ್ತಿ ಪುರಸ್ಕಾರಗಳು ಅಸಂಖ್ಯ. ಅಮೆರಿಕ ಮಾತ್ರವಲ್ಲದೆ ವಿದೇಶಗಳಿಂದಲೂ ಬಂದ ಪ್ರಶಸ್ತಿಗಳು ಹೋರಾಟಗಾರ್ತಿಗೆ ಸಂದ ಗೌರವ. ಆಕೆಯ ಬದುಕು ಮತ್ತು ಹೋರಾಟ ಯಾವತ್ತಿಗೂ ಸ್ಫೂರ್ತಿ.

ನಂತರ ರೋಸ ದೇಶಾದ್ಯಂತ ಸಂಚರಿಸಿ ಹಲವಾರು ನಾಗರಿಕ ಹಕ್ಕಿನ ಹೋರಾಟಗಳಲ್ಲಿ ಭಾಗವಹಿಸುತ್ತಾಳೆ. ವೈಯಕ್ತಿಕ ಜೀವನದಲ್ಲಿ ಹಣಕಾಸಿನ ಅಭಾವ ತೀವ್ರವಾಗಿದ್ದರೂ ತನ್ನ ಭಾಷಣ, ಪ್ರಶಸ್ತಿ ಮುಂತಾದವುಗಳಿಂದ ಬಂದ ಗೌರವ ಧನವನ್ನು ವಿದ್ಯಾರ್ಥಿಗಳಿಗೆ ದಾನ ಮಾಡುವುದು ನಿಲ್ಲುವುದಿಲ್ಲ. ಅವಳ ‘ರೋಸ ಪಾರ್ಕ್ಸ್-ನನ್ನ ಕಥೆ’ ಆತ್ಮಚರಿತ್ರೆ ಇಂದಿಗೂ ಸ್ಫೂರ್ತಿಗಾಥೆ. ಅಕ್ಷರಶಃ ಹೋರಾಟ ಗಾರ್ತಿ ರೋಸ ತುಂಬು ಜೀವನ ನಡೆಸಿ ತನ್ನ 92ನೇ ವಯಸ್ಸಿನಲ್ಲಿ ಕಾಲವಾಗುತ್ತಾಳೆ.

ಆಗ ಅಮೆರಿಕದ ಸಮಾಜದಲ್ಲಿದ್ದ ವರ್ಣಭೇದ

►ಕರಿಯ-ಬಿಳಿಯ ಮಕ್ಕಳಿಗೆ ಪಠ್ಯ, ಶಾಲೆ ಪ್ರತ್ಯೇಕ

►ಚಿತ್ರಮಂದಿರ, ಕಲಾಮಂದಿರಗಳಲ್ಲಿ ಪ್ರತ್ಯೇಕ ಆಸನ ಮತ್ತು ಟಿಕೆಟ್ ವಿತರಣಾ ವ್ಯವಸ್ಥೆ

►ಒಳಾಂಗಣ ಮತ್ತು ಹೊರಾಂಗಣ ಕ್ರೀಡೆಗಳಲ್ಲಿ ಬಿಳಿಯರೊಂದಿಗೆ ಆಡುವುದು ನಿಷೇಧ

►ಕರಿಯ-ಬಿಳಿಯ ವಿವಾಹ ಕಾನೂನು ಬಾಹಿರ

►ರೈಲು, ಬಸ್ಸುಗಳಲ್ಲಿ ಪ್ರತ್ಯೇಕ ಆಸನ ವ್ಯವಸ್ಥೆ

►ಹೊಟೇಲ್‌ಗಳು ಪ್ರತ್ಯೇಕ; ಕೆಲವೆಡೆ ಪ್ರವೇಶವಿದ್ದರೂ ಪ್ರತ್ಯೇಕ ದ್ವಾರ ಮತ್ತು ಆಸನ ವ್ಯವಸ್ಥೆ.

ರೋಸ ಪಾರ್ಕ್ಸ್ ಬಸ್ಸಿನಲ್ಲಿ ಕುಳಿತಿರುವ ದೃಶ್ಯ

ರೋಸ ಪಾರ್ಕ್ಸ್ ಕೂತು ಬಂಧನವಾಗಿದ್ದ ಬಸ್ಸಿನ ಸೀಟಿನಲ್ಲಿ ಅಮೆರಿಕ ಅಧ್ಯಕ್ಷರಾಗಿದ್ದ ಬರಾಕ್ ಒಬಾಮ

ಬಂಧಿತ ರೋಸ ಪಾರ್ಕ್ಸ್

ರೋಸ ಪಾರ್ಕ್ಸ್ ಕುಳಿತಿದ್ದ ಬಸ್

Writer - ಬಸವರಾಜು ದೇಸಿ

contributor

Editor - ಬಸವರಾಜು ದೇಸಿ

contributor

Similar News