×
Ad

ಬೆಂಗಳೂರು: ಮೋದಿ, ಅಮಿತ್ ಶಾ ಭಾವಚಿತ್ರವಿರುವ ಶವಪೆಟ್ಟಿಗೆ ಇಟ್ಟು ಪ್ರತಿಭಟನೆ

Update: 2018-02-03 19:04 IST

ಬೆಂಗಳೂರು, ಫೆ.3: ಬಿಜೆಪಿ ನಾಯಕರು ಅಶಾಂತಿ ಸೃಷ್ಟಿಸಿ, ಮುಗ್ಧರ ಸಾವಿನಲ್ಲೂ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬೆಂಗಳೂರು ನಗರ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಭಾವಚಿತ್ರವಿರುವ ಶವಪೆಟ್ಟಿಗೆ ಇಟ್ಟು ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಶನಿವಾರ ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು ಸಮಾಜದಲ್ಲಿ ಅಶಾಂತಿ ವಾತಾವರಣ ನಿರ್ಮಿಸುವ ಸಲುವಾಗಿ ಬಿಜೆಪಿ ನಾಯಕರು ವಿವಾದಿತ ಹೇಳಿಕೆಗಳು ನೀಡುವುದಲ್ಲದೆ, ಮುಗ್ಧರ ಸಾವಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಎಸ್.ಮನೋಹರ್, ಕೊಲೆಗೆ ಕೊಲೆಯೇ ಪ್ರತಿಕಾರ ಎಂದು ಸಂಘಪರಿವಾರ ನಾಯಕರ ಹೇಳಿಕೆಗಳನ್ನು ಬಿಜೆಪಿ ನಾಯಕರು ಇದುವರೆಗೂ ಖಂಡಿಸಿಲ್ಲ. ಅಲ್ಲದೆ, ಮುಗ್ಧರು ಸಾವನ್ನಪ್ಪಿದರೆ, ರಾಜ್ಯ ಸರಕಾರದ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಾರೆ ಎಂದು ಆರೋಪಿಸಿದರು.

ಬಿಜೆಪಿ ಪಕ್ಷವು ನೈತಿಕತೆಯನ್ನು ಗಾಳಿಗೆ ತೂರಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ವರ್ಚಸ್ಸು ವೃದ್ಧಿಸಿಕೊಳ್ಳಲು ರಾಜ್ಯದಲ್ಲಿ ಕೋಮುಗಲಭೆ ಮತ್ತು ಜಾತಿವಾದ ಸಮಾಜ ನಿರ್ಮಾಣ ಮಾಡಲು ಹೊರಟಿದ್ದಾರೆ ಎಂದು ಅವರು ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಅನಂತ್‌ಕುಮಾರ್ ಹೆಗಡೆ ಸೇರಿ ಪ್ರಮುಖ ನಾಯಕರು ರಾಜ್ಯವನ್ನು ಅತಂತ್ರಗೊಳಿಸಲು ಮುಂದಾಗಿದ್ದಾರೆ. ರಾಜಕೀಯ ಲಾಭಕ್ಕೆ ರಾಜ್ಯದ ಮುಗ್ಧ ಜನರನ್ನು ಬಲಿ ಕೊಡಲು ಸಿದ್ದರಾಗಿದ್ದಾರೆ ಎಂದ ಅವರು, ಯಾರೇ ಸತ್ತರೂ ಬಿಜೆಪಿ ಕಾರ್ಯಕರ್ತನ ಕೊಲೆಯಾಯಿತು ಎಂದು ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಬೆಂಗಳೂರು ನಗರ ಜಿಲ್ಲಾ ಕೇಂದ್ರ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಜನಾರ್ಧನ್, ಕೆಪಿಸಿಸಿ ವಕ್ತಾರ ಸಲೀಂ, ಶೇಖರ್, ಹೇಮರಾಜು, ರಚನಾ, ಆಶಾ ಸೇರಿ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News