×
Ad

ಪ್ರಧಾನಿ ಮೋದಿಗೆ ಬಿಗಿ ಪೊಲೀಸ್ ಭದ್ರತೆ: ಟಿ.ಸುನೀಲ್‌ಕುಮಾರ್

Update: 2018-02-03 19:31 IST

ಬೆಂಗಳೂರು, ಫೆ.3: ಬಿಜೆಪಿಯ ಪರಿವರ್ತನಾ ಯಾತ್ರೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್‌ಕುಮಾರ್ ತಿಳಿಸಿದರು.

ಶನಿವಾರ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರಮನೆ ಮೈದಾನದಲ್ಲಿ ಬಿಜೆಪಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ.ಹೀಗಾಗಿ, ಅರಮನೆ ಸುತ್ತ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

11 ಡಿಸಿಪಿ, 33 ಎಸಿಪಿ ಸೇರಿ ಒಟ್ಟು 3 ಸಾವಿರ ಪೊಲೀಸ್ 50 ಕೆಎಸ್ಸಾರ್ಪಿ, 20 ಸಿಎಆರ್ ತುಕಡಿ, ಸಂಚಾರಿ ನಿಯಮಕ್ಕಾಗಿ ಸಂಚಾರಿಯ 1200 ಸಿಬ್ಬಂದಿ, 3 ಡಿಸಿಪಿ, ಎಸಿಪಿಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಸುನೀಲ್‌ಕುಮಾರ್ ತಿಳಿಸಿದರು.

ಯಾವುದೇ ಅಹಿತಕರ ಘಟನೆಯ ನಡೆಯದಂತೆ ಈಗಾಗಲೇ ಸೂಕ್ತ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ, ಸಂಚಾರದಟ್ಟಣೆ ಸಮಸ್ಯೆಯನ್ನು ತಗ್ಗಿಸಲು ಕೆಲ ಮಾರ್ಗಗಳನ್ನು ಮಾರ್ಪಡು ಮಾಡಲಾಗಿದೆ ಎಂದರು.

ಸಂಚಾರ: ಬಸ್‌ಗಳು ಸರ್ಕಸ್ ಮೈದಾನ ಮತ್ತು ಮಾವಿನಕಾಯಿ ಮಂಡಿ ಆವರಣದಲ್ಲಿ ನಿಲುಗಡೆ ಮಾಡಿ ಕಾರ್ಯಕ್ರಮದಲ್ಲಿ ಭಾಗವಹಿಸುವವರನ್ನು ಮೈದಾನದ ಒಳಗೆ ಮಾತ್ರ ಇಳಿಸುವುದು. ಯಾವುದೇ ಬಸ್‌ಗಳು ಜಯಮಹಲ್ ರಸ್ತೆಯಲ್ಲಿ ನಿಲ್ಲಿಸಲು ಅಥವಾ ನಿಲುಗಡೆ ಮಾಡಲು ಅವಕಾಶ ಇರುವುದಿಲ್ಲ. ಸರ್ಕಸ್ ಮೈದಾನ ಹಾಗೂ ಮಾವಿನಕಾಯಿ ಮಂಡಿ ಮೈದಾನದಲ್ಲಿ ಇಳಿಯುವವರು ಅರಮನೆ ಮೈದಾನದ ಒಳಭಾಗದಿಂದ ಕಾರ್ಯಕ್ರಮ ನಡೆಯುವ ಅರಮನೆ ಮೈದಾನಕ್ಕೆ ನಡೆದುಕೊಂಡು ಹೋಗಬೇಕು. ಅದೇರೀತಿ, ಬೈಕ್‌ಗಳು ಜಯಮಹಲ್ ರಸ್ತೆಯ ಸರ್ಕಸ್ ಮೈದಾನ ಪ್ರವೇಶಿಸಿ ಗೋಕಾರ್ಟಿಂಗ್ ಮೈದಾನದಲ್ಲಿ ನಿಲುಗಡೆ ಮಾಡಬಹುದಾಗಿದೆ ಎಂದು ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ವಾಹನ ನಿಲುಗಡೆ ನಿಷೇಧ: ರವಿವಾರ(ಫೆ.4) ಬೆಳಗ್ಗೆ 6 ಗಂಟೆಯಿಂದ ಸಂಜೆ 8ವರೆಗೂ ನಗರದ ಸರ್.ಸಿ.ವಿ.ರಾಮನ್ ರಸ್ತೆ, ಬಳ್ಳಾರಿ ರಸ್ತೆ, ಹೆಬ್ಬಾಳ ಮೇಲು ಸೇತುವೆ, ಎಚ್‌ಕ್ಯೂಟಿಸಿ ಮೇಖ್ರಿ ವೃತ್ತ, ಜಯಮಹಲ್ ರಸ್ತೆ, ತರಳಬಾಳು ರಸ್ತೆ, ಎಂ.ಜಯರಾವನ್ ರಸ್ತೆ, ಪ್ಯಾಲೇಸ್ ರಸ್ತೆ, ಆರ್‌ಟಿ ನಗರ ಮುಖ್ಯ ರಸ್ತೆ, ವಾಟರ್ ಟ್ಯಾಂಕ್ ಜಂಕ್ಷನ್‌ನಿಂದ ಗುಂಡೂರಾವ್ ಮನೆ, ಕಬ್ಬನ್ ರಸ್ತೆ ಬಳಿ ವಾಹನ ನಿಲುಗಡೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಪ್ರತಿಭಟನಾಕಾರರನ್ನು ಬಿಡುವುದಿಲ್ಲ
ಮಹಾದಾಯಿ-ಕಳಸಾ ಬಂಡೂರಿ ನೀರಿಗಾಗಿ ಕರಾಳ ದಿನಾಚರಣೆಗೆ ಕರೆ ನೀಡಿರುವ ಕನ್ನಡಪರ ಸಂಘಟನೆ ಹಾಗೂ ರೈತ ಚಳವಳಿಗಾರರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುತ್ತಿಗೆ ಹಾಕಿ ಕಪ್ಪುಬಾವುಟ ಪ್ರದರ್ಶನ ಮಾಡುವುದಾಗಿ ಕರೆ ನೀಡಿದ್ದಾರೆ. ಆದರೆ, ಅರಮನೆ ಮೈದಾನ ಸುತ್ತ-ಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ಪ್ರತಿಭಟನಾಕಾರರನ್ನು ಸಮಾವೇಶದ ಜಾಗಕ್ಕೆ ಬಿಡುವುದಿಲ್ಲ’
-ಟಿ.ಸುನೀಲ್‌ಕುಮಾರ್, ನಗರ ಪೊಲೀಸ್ ಆಯುಕ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News