ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಬೇಕು: ಶಾಲಿನಿ ರಜನೀಶ್

Update: 2018-02-03 14:05 GMT

ಬೆಂಗಳೂರು, ಫೆ.3: ಮಕ್ಕಳಲ್ಲಿರುವ ಪ್ರತಿಭೆಗಳನ್ನು ಹೊರತರಲು ಹಾಗೂ ಅವರ ಕನಸುಗಳನ್ನು ನನಸು ಮಾಡಲು ಮಕ್ಕಳ ರಾಗಕ್ಕಿಂತ ಉತ್ತಮವಾದ ವೇದಿಕೆಯಿಲ್ಲ. ಈ ನಿಟ್ಟಿನಲ್ಲಿ ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸಿದರೆ ಹೆಚ್ಚು ಪ್ರತಿಭಾವಂತರು ಬೆಳೆಯುತ್ತಾರೆ ಎಂದು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಅಭಿಪ್ರಾಯಪಟ್ಟಿದ್ದಾರೆ.

ಶನಿವಾರ ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ಆಯೋಜಿಸಿದ್ದ 500 ಮಕ್ಕಳ ನಾಟ್ಯ ಕಾರ್ಯಕ್ರಮದ ನಂತರ ಮಾತನಾಡಿದ ಅವರು, ಮಕ್ಕಳಲ್ಲಿರುವ ಪ್ರತಿಭೆಗಳನ್ನು ಹೊರತರಲು ಹಾಗು ಅವರ ಕನಸುಗಳನ್ನು ನನಸು ಮಾಡಲು ಇಂತಹ ಕಾರ್ಯಕ್ರಮಗಳು ಹೆಚ್ಚು ಸಹಕಾರಿಯಾಗಬಲ್ಲವು ಎಂದರು.

ನಾಟ್ಯ ಕಾರ್ಯಕ್ರಮದ ನಿರ್ದೇಶಕ ಜನಾರ್ಧನ್ ರಾಜ್ ಅರಸ್ ಮಾತನಾಡಿ, ಮಕ್ಕಳ ಜಾಗೃತಿ ಸಂಸ್ಥೆಯು ಸತತವಾಗಿ 12 ಸರಕಾರಿ ಶಾಲೆಗಳು, ಬಾಲಮಂದಿರಗಳು, ಯುವ ಜಾಗೃತಿ ಕೇಂದ್ರಗಳು ಹಾಗೂ ಸಮುದಾಯ ಕೇಂದ್ರಗಳ ಮೂಲಕ ಹಲವಾರು ವಿಷಯಗಳ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.

ನಾಟ್ಯ ಕಾರ್ಯಕ್ರಮವು ಸಾಮಾಜಿಕ ಹಾಗೂ ಸಾಂಸ್ಕೃತಿಕ ಚೌಕಟ್ಟುಗಳನ್ನು ಮೀರಿ ಎಲ್ಲ ಮಕ್ಕಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿದೆ. ಈ ವೇದಿಕೆ ನಿಜವಾಗಿಯೂ ಮಕ್ಕಳಲ್ಲಿ ದೊಡ್ಡ ಮಟ್ಟದ ಕನಸುಗಳನ್ನು ಕಾಣಲು ಹಾಗೂ ತಮ್ಮ ಜೀವನದಲ್ಲಿ ಉನ್ನತ ಮಟ್ಟದ ಆಕಾಂಕ್ಷೆಗಳನ್ನು ಬೆಳೆಸಿಕೊಳ್ಳಲು ಸ್ಪೂರ್ತಿ ತಂದುಕೊಟ್ಟಿದೆ ಎಂದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ವಿದ್ಯಾರ್ಥಿನಿ ಚೈತ್ರ, ನಾನು ಇಷ್ಟು ದೊಡ್ಡ ವೇದಿಕೆಯ ಮೇಲೆ ನೃತ್ಯ ಪ್ರದರ್ಶನ ನೀಡುತ್ತೇನೆಂದು ಊಹಿಸಿಕೊಂಡಿರಲಿಲ್ಲ. ನನಗೆ ಸಿಕ್ಕಿದ ರೀತಿಯಲ್ಲಿ ಇಂತಹ ಅವಕಾಶಗಳು ಎಲ್ಲರಿಗೂ ಸಿಕ್ಕಿದರೆ ಇನ್ನೂ ಹೆಚ್ಚಿನ ಮಕ್ಕಳು ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡಲು ಸಾಧ್ಯವಾಗುತ್ತದೆ ಎಂದು ಅನುಭವ ಹಂಚಿಕೊಂಡರು.

ಸರಕಾರಿ ತೆಲುಗು ಶಾಲೆಯ ವಿದ್ಯಾರ್ಥಿನಿ ಮೀನಾಕ್ಷಿ ಮಾತನಾಡಿ, ಶಾಲಾ ಮಕ್ಕಳಿಗೆ ಇದೊಂದು ದೊಡ್ಡ ಅವಕಾಶವಾಗಿದೆ. ನಮ್ಮ ಶಾಲೆಯ ಶಿಕ್ಷಕರಲ್ಲಿ ಶಾಲೆಯ ಎಲ್ಲ ಪ್ರತಿಭಾವಾನ್ವಿತ ಮಕ್ಕಳಿಗೂ ಇಂತಹ ವೇದಿಕೆಗಳಲ್ಲಿ ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶನ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿಕೊಂಡರು.

ಕಾರ್ಯಕ್ರಮದಲ್ಲಿ ರಾಜ್ಯದ ಹಲವು ಪುರಾತನ ಕಾಲದ ಅರಸರು, ತತ್ವಜ್ಞಾನಿಗಳು ಹಾಗೂ ಪ್ರವರ್ತಕರ ವೈಭೋಗ ಮತ್ತು ನಮ್ಮ ರಾಜ್ಯದ ಅತ್ಯುನ್ನತ ನೈಸರ್ಗಿಕ ಸೌಂದರ್ಯವನ್ನು ಪ್ರದರ್ಶಿಸಿದರು. ವೇದಿಕೆಯಲ್ಲಿ ಮಕ್ಕಳ ಜಾಗೃತಿ ಸಂಸ್ಥೆಯ ಮುಖ್ಯ ನಿರ್ವಾಹಕ ಎಂ.ಮುರಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News