ಸಮಾಜ ಸೇವಾಕರ್ತ ದೇಶದ ಆಸ್ತಿ: ವಾಜುಬಾಯಿ ವಾಲಾ
ಬೆಂಗಳೂರು, ಫೆ.3: ದೇಶ ಹಾಗೂ ಸಮಾಜ ಸೇವೆ ಮಾಡುವಂತಹ ಮನೋಭಾವನೆವುಳ್ಳ ವ್ಯಕ್ತಿಗಳು ದೇಶದ ಆಸ್ತಿ ಎಂದು ರಾಜ್ಯಪಾಲ ವಾಜುಬಾಯಿ ವಾಲಾ ಅಭಿಪ್ರಾಯಪಟ್ಟರು
ಶನಿವಾರ ರಾಜಭವನದ ಗಾಜಿನಮನೆಯ ಆವರಣದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಶಾಖೆ ಏರ್ಪಡಿಸಿದ್ದ ಸಮಾರಂಭದಲ್ಲಿ ರಾಜ್ಯ ಪುರಸ್ಕಾರ ಪ್ರಮಾಣ ಪತ್ರಗಳನ್ನು ಕಬ್ಸ್, ಬುಲ್‌ಬುಲ್ಸ್, ಸ್ಕೌಟ್ಸ್, ಗೈಡ್ಸ್, ರೋವರ್ಸ್ ಮತ್ತು ರೇಂಜರ್ಸ್‌ಗಳಿಗೆ ವಿತರಿಸಿ ಮಾತನಾಡಿದ ಅವರು, ಬಾಲ್ಯದಲ್ಲಿ ರೂಢಿಸಿಕೊಂಡ ಉತ್ತಮ ಸಂಸ್ಕಾರವನ್ನು ಜೀವನ ಪೂರ್ತಿ ರೂಢಿಸಿಕೊಂಡವರು ದೇಶದ ಆಸ್ತಿಯಾಗಿ ರೂಪುಗೊಳ್ಳುತ್ತಾರೆ ಎಂದು ತಿಳಿಸಿದರು.
ನನ್ನ ದೇಶ, ನನ್ನ ರಾಜ್ಯ, ನನ್ನ ಜಿಲ್ಲೆ, ನನ್ನ ನಗರ, ನನ್ನ ಹಳ್ಳಿಯ ಜನರ ಸೇವೆ ಮಾಡುತ್ತೇನೆ ಎಂಬ ಸಂಕಲ್ಪವನ್ನು ಕೈಗೊಂಡು ಗೈಡ್ ಹಾಗೂ ರೋವರ್ಸ್‌ಗಳು ವಿಶ್ವದೆಲ್ಲೆಡೆ ಸಂಚರಿಸುತ್ತಿದ್ದಾರೆ. ಮಾನವ ಸೇವೆ ಮಾಡುವುದು ಇವರ ಗುರಿ. ಶ್ರವಣಬೆಳಗೊಳದಲ್ಲಿ ನಡೆಯಲಿರುವ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಜನತೆಯ ಸೇವೆ ಮಾಡಲು 2,000 ಸ್ಕೌಟ್ಸ್ ಅಂಡ್ ಗೈಡ್ಸ್ ತೆರಳುತ್ತಿರುವುದು ಶ್ಲಾಘನೀಯ ಎಂದು ಅವು ವೆುಚ್ಚುಗೆ ವ್ಯಕ್ತಪಡಿಸಿದರು.
ಧೈರ್ಯವೇ ನಮಗೆ ಆಸ್ತಿಯಾಗಬೇಕು. ಕೈಯಲ್ಲಿ ಬಂದೂಕು ಇದ್ದರೂ ಅದನ್ನು ಚಲಾಯಿಸಲು ಗುಂಡಿಗೆ ಇರದಂತಹ ವ್ಯಕ್ತಿಯಿಂದ ಪ್ರಯೋಜನವೇನು. ಧೈರ್ಯವಂತ ಮಕ್ಕಳು ನಮ್ಮ ದೇಶದ ಆಸ್ತಿ. ದೇಶದ ಒಳಿತಿಗಾಗಿ ಜೀವಿತಾವಧಿಯವರೆಗೆ ಕೆಲಸ ಮಾಡೋಣ ಎಂದು ಅವರು ನೆರೆದಿದ್ದ ವಿವಿಧ ತಂಡಗಳಿಗೆ ಕರೆ ನೀಡಿದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಸರಕಾರದ ಮುಖ್ಯ ಕಾರ್ಯದರ್ಶಿ, ಭಾರತ ಸ್ಕೌಟ್ಸ್ ಗೈಡ್ಸ್ ಉಪಾಧ್ಯಕ್ಷೆ ಕೆ.ರತ್ನಪ್ರಭಾ ಅವರು ಮಾತನಾಡಿ ಸ್ಕೌಟ್ಸ್ ಮತ್ತು ಗೈಡ್ಸ್‌ಗಳಾಗಿ ಸೇವಾ ಕಾರ್ಯದಲ್ಲಿ ತೊಡಗುವ ಮಕ್ಕಳಲ್ಲಿ ಶಿಸ್ತು, ಜವಾಬ್ದಾರಿ ಮತ್ತು ದೇಶಕಟ್ಟುವ ಮನೋಭಾವನೆ ಬೆಳೆದು ಉತ್ತಮ ಪ್ರಜೆಗಳಾಗುವ ವ್ಯಕ್ತಿತ್ವ ಹೊಂದುತ್ತಾರೆ ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭ 2017-18ನೆ ಸಾಲಿನ 33 ಜಿಲ್ಲೆಗಳ ಕಬ್ಸ್, ಬುಲ್‌ಬುಲ್ಸ್, ಸ್ಕೌಟ್ಸ್, ಗೈಡ್ಸ್, ರೋವರ್ಸ್ ಮತ್ತು ರೇಂಜರ್ಸ್‌ಗಳಿಗೆ ಸಾಂಕೇತಿಕವಾಗಿ ಚತುರ್ಥ ಚರಣ್, ಹೀರಕ್ ಪಂಕ್ ಮತ್ತು ರಾಜ್ಯ ಪುರಸ್ಕಾರ ಪ್ರಮಾಣ ಪತ್ರಗಳನ್ನು ರಾಜ್ಯಪಾಲರು ವಿತರಿಸಿದರು.
ಕಾರ್ಯಕ್ರಮದಲ್ಲಿ ಭಾರತ ಸ್ಕೌಟ್ಸ್ ಗೈಡ್ಸ್‌ನ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ, ರಾಜ್ಯ ಆಯುಕ್ತೆ ಗೀತಾ ನಟರಾಜ್, ಉಪಾಧ್ಯಕ್ಷ ಕೊಂಡಜ್ಜಿ ಷಣ್ಮುಖಪ್ಪ ಮುಂತಾದವರು ಉಪಸ್ಥಿತರಿದ್ದರು.