ಹಳೆಯ ತಪ್ಪು ತಿದ್ದಿಕೊಂಡು ಗೂಳಿಹಟ್ಟಿ ಶೇಖರ್ ಬಿಜೆಪಿಗೆ ಸೇರ್ಪಡೆ: ಯಡಿಯೂರಪ್ಪ

Update: 2018-02-03 14:30 GMT

ಬೆಂಗಳೂರು, ಫೆ. 3: ಕಾಲ ಬದಲಾದಂತೆ ಮಾಡಿದ ತಪ್ಪುಗಳನ್ನು ತಿದ್ದುಕೊಂಡು ಮಾಜಿ ಸಚಿವ ಗೂಳಿಹಟ್ಟಿ ಡಿ.ಶೇಖರ್ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಈ ಹಿಂದೆ ಮಾಡಿದ ತಪ್ಪುಗಳನ್ನು ಅವರು ಮುಂದೆ ಮಾಡುವುದಿಲ್ಲ ಎಂಬ ಭರವಸೆ ನೀಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಶನಿವಾರ ಇಲ್ಲಿನ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಗೂಳಿಹಟ್ಟಿ ಶೇಖರ್ ಅವರನ್ನು ಪಕ್ಷದ ಬಾವುಟ ನೀಡುವ ಮೂಲಕ ಪಕ್ಷಕ್ಕೆ ಬರ ಮಾಡಿಕೊಂಡ ಬಳಿಕ ಮಾತನಾಡಿದ ಅವರು, ಹಿಂದಿನ ತಪ್ಪುಗಳು ಇನ್ನು ಮುಂದೆ ಆಗುವುದಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ ಎಂದರು.

ಹೊಸ ಹುರುಪು: ಪರಿವರ್ತನಾ ಯಾತ್ರೆ ಸಮಾರೋಪ ಫೆ.4 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಜರುಗಲಿದ್ದು, ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. 3ಲಕ್ಷಕ್ಕೂ ಅಧಿಕ ಮಂದಿ ಸೇರುವ ನಿರೀಕ್ಷೆ ಇದೆ. ಚುನಾವಣೆ ಸಮೀಪಿಸುತ್ತಿರುವ ವೇಳೆ ಈ ಸಮಾವೇಶ ಕಾರ್ಯಕರ್ತರಲ್ಲಿ ಹೊಸ ಹುರುಪು ತುಂಬಲಿದೆ ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಜ.25ಕ್ಕೆ ಮೈಸೂರಿನಲ್ಲಿ ನಡೆದ ಕಾರ್ಯಕ್ರಮ ಹತ್ತಿಕ್ಕಲು ಯತ್ನಿಸಿ ವಿಫಲವಾದರು. ಇದೀಗ ಮೋದಿ ಕಾರ್ಯಕ್ರಮ ಹತ್ತಿಕ್ಕಲು ಯತ್ನಿಸಿದರೂ, ಅದು ಯಶಸ್ವಿಯಾಗಲಿಲ್ಲ ಎಂದು ತಿರುಗೇಟು ನೀಡಿದ ಅವರು, 1ಲಕ್ಷ ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಸಾಲ ಮಾಡಿದ್ದೇ ಸಿದ್ದರಾಮಯ್ಯರ ಸಾಧನೆ ಎಂದು ಟೀಕಿಸಿದರು.

ಸಾವಿರಾರು ಕೋಟಿ ರೂ.ಮೊತ್ತದ ವಿವಿಧ ಯೋಜನೆಗಳಿಗೆ ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದ್ದು, ಚುನಾವಣಾ ನೀತಿಸಂಹಿತೆ ಜಾರಿ ಬಳಿಕ ಹೇಗೆ ಹಣ ಖರ್ಚು ಮಾಡುತ್ತಾರೆ. ಆಗ ಅದು ‘ಹಳೆ ಕಲ್ಲು ಹೊಸ ಬಿಲ್’ ಆಗಲಿದೆ. ಕೇವಲ ಹಣ ಲೂಟಿ ಮಾಡುವ ಕೆಲಸವಷ್ಟೇ ಎಂದು ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಹೋದ ಕಡೆಯಲ್ಲೆಲ್ಲ ‘ಜೈಲಿಗೆ ಹೋದವರು’ ಎಂದು ಹೇಳುತ್ತಿದ್ದರು. ಇದೀಗ ಮಾಜಿ ಸಚಿವ ಆನಂದ್ ಸಿಂಗ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಪಕ್ಕದಲ್ಲೆ ಕೂರಿಸಿಕೊಂಡಿದ್ದಾರೆಂದು ಯಡಿಯೂರಪ್ಪ ಲೇವಡಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News