ಸದಾಶಿವ ವರದಿ ಜಾರಿಗೆ ಒತ್ತಾಯ: ಬಜೆಟ್ ಪೂರ್ವಭಾವಿ ಸಭೆ ಬಹಿಷ್ಕರಿಸಿದ ಮಾರಸಂದ್ರ ಮುನಿಯಪ್ಪ

Update: 2018-02-03 14:36 GMT

ಬೆಂಗಳೂರು, ಫೆ.3: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದಾಶಿವ ಆಯೋಗದ ವರದಿ ಜಾರಿಯ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದ್ದರು. ಆದರೆ, ಹದಿನೆಂಟು ದಿನಗಳು ಕಳೆದರೂ ಯಾವುದೆ ಕ್ರಮ ಕೈಗೊಂಡಿಲ್ಲ ಎಂದು ಬಿಎಸ್‌ಪಿ ಮುಖಂಡ ಮಾರಸಂದ್ರ ಮುನಿಯಪ್ಪ ಕಿಡಿಕಾರಿದ್ದಾರೆ.

ಶನಿವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ದಲಿತ ಸಂಘಟನೆಗಳ ಮುಖಂಡರ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಪೂರ್ವಭಾವಿ ಸಭೆ ನಡೆಸಲು ಮುಂದಾಗುತ್ತಿದ್ದಂತೆಯೇ ದಲಿತ ಮುಖಂಡ ಮಾರಸಂದ್ರ ಮುನಿಯಪ್ಪ ಅವರು ಸಿಎಂ ಅವರಿಗೆ ಸದಾಶಿವ ಆಯೋಗದ ವರದಿ ಜಾರಿಯ ಬಗ್ಗೆ ಮೊದಲು ನಿರ್ಧಾರ ಪ್ರಕಟಿಸಿ ಆಮೇಲೆ ಸಭೆ ನಡೆಸಿ ಎಂದು ಮನವಿ ಮಾಡಿದರು.

ಆದರೆ, ಸಿಎಂ ಅವರು ಈ ದಿನದ ಕಾರ್ಯಕ್ರಮವನ್ನು ಬಜೆಟ್ ಪೂರ್ವಭಾವಿ ಸಭೆಗೆ ಮೀಸಲಿಟ್ಟಿದ್ದು, ಇದರ ಬಗ್ಗೆ ಮಾತ್ರ ಮಾತನಾಡುತ್ತೇನೆ ಎಂದು ತಮ್ಮ ನಿರ್ಧಾರವನ್ನು ಪ್ರಕಟಿಸಿದರು. ಅಲ್ಲದೆ, ಮಾರಸಂದ್ರ ಮುನಿಯಪ್ಪ ಅವರನ್ನು ಸಮಾಧಾನಪಡಿಸಲು ಯತ್ನಿಸಿದರು. ಆದರೆ, ಮುನಿಯಪ್ಪ ಅವರು ಸಿಎಂ ಅವರ ಯಾವ ಮಾತಿಗೂ ಸ್ಪಂದಿಸದೆ ಸಭೆಯನ್ನು ಬಹಿಷ್ಕರಿಸಿ ಇತರ ದಲಿತ ಮುಖಂಡರೊಂದಿಗೆ ಸಭೆಯಿಂದ ಹೊರ ನಡೆದರು.

ಸಿಎಂ ಅವರು ಉದ್ದೇಶಪೂರ್ವಕವಾಗಿ ಸದಾಶಿವ ಆಯೋಗದ ವರದಿಯನ್ನು ನಿರ್ಲಕ್ಷ ಮಾಡುತ್ತಿದ್ದಾರೆ ಎಂದು ಹೇಳಿದರು.

ಸಿಎಂ ಸಭೆ ಬಹಿಷ್ಕಾರ
ಸಿದ್ದರಾಮಯ್ಯ ಅವರ ತಾಳಕ್ಕೆ ಹೆಜ್ಜೆ ಹಾಕುವ ದಲಿತ ಸಂಘಟನೆಗಳ ಸಭೆ ಕರೆದಿದ್ದಾರೆ. ಸದಾಶಿವ ಆಯೋಗದ ವರದಿ ಜಾರಿ ಮಾಡಿ ಅಂದರೆ ಸಿಎಂ ಯಾವುದೆ ಭರವಸೆ ನೀಡುತ್ತಿಲ್ಲ. ನಮ್ಮ ಜೊತೆಗೆ ಮೃದುವಾಗಿ ವರ್ತಿಸಿಲ್ಲ. ಹೊಲೆಮಾದಿಗರನ್ನು ಜೋಡಿಸಬೇಕು ಎಂಬುದು ನಮ್ಮ ಮನವಿ. ಆದರೆ, ಸಿಎಂ ಲಿಂಗಾಯತ, ವೀರಶೈವರನ್ನು ಕಚ್ಚಾಡಿಸಿದಂತೆ ಹೊಲೆ ಮಾದಿಗರನ್ನು ಕಚ್ಚಾಡಿಸುತ್ತಿದ್ದಾರೆ.
-ಎನ್.ಮೂರ್ತಿ, ದಲಿತ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News