ಗೊಂಬೆ ಕಲಾವಿದೆ ಇಂದುಶ್ರೀಗೆ ಪುರಸ್ಕಾರ
ಬೆಂಗಳೂರು, ಫೆ.3: ಭೇಟಿ ಬಚಾವೋ-ಭೇಟಿ ಪಡಾವೋ ಯೋಜನೆ ಅಡಿಯಲ್ಲಿ ನನ್ನನ್ನು ಗುರುತಿಸಿ ಶ್ರೇಷ್ಠ ‘ಧ್ವನಿಮಾಯೆ’ ಕಲಾವಿದೆ ಎಂದು ಪುರಸ್ಕಾರ ನೀಡಿರುವುದು ಸಂತೋಷ ತಂದುಕೊಟ್ಟಿದೆ ಎಂದು ಮಾತನಾಡುವ ಗೊಂಬೆ ಕಲಾವಿದೆ ಇಂದುಶ್ರೀ ಹೇಳಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡದ ಕಲಾವಿದೆಯಾಗಿ ರಾಷ್ಟ್ರಮಟ್ಟದ ಗೌರವಕ್ಕೆ ಪಾತ್ರರಾಗಿದ್ದು, ಈ ಕ್ಷೇತ್ರದಲ್ಲಿ ಇನ್ನಷ್ಟು ಹೆಚ್ಚು ಸೇವೆ ಸಲ್ಲಿಸಲು ಸ್ಪೂರ್ತಿ ನೀಡಿದೆ. ಈ ಪ್ರಶಸ್ತಿಗೆ ನಾನು ಯಾವುದೇ ಅರ್ಜಿ ಸಲ್ಲಿಸಿರಲಿಲ್ಲ. ಆಯ್ಕೆ ಸಮಿತಿಯಿಂದಲೇ ಸಮೀಕ್ಷೆ ನಡೆಸಿ ಸಾಧಕಿಯರನ್ನು ಆಯ್ಕೆ ಮಾಡಿದ್ದಾರೆ. ಪ್ರಶಸ್ತಿಗಾಗಿ ನನ್ನ ಹೆಸರು ಇದ್ದದ್ದೂ ನನಗೆ ಗೊತ್ತಿರಲಿಲ್ಲ ಎಂದರು.
ರಾಜ್ಯ ಸರಕಾರದಿಂದ ನೀಡುವ ಹಲವು ಪ್ರಶಸ್ತಿಗಳಿಗೆ ಎರಡು ಬಾರಿ ಅರ್ಜಿ ಸಲ್ಲಿಸಿದ್ದೆ. ಆದರೆ, ಯಾವುದೇ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಈ ಕುರಿತು ನನಗೆ ಯಾವುದೇ ಬೇಸರವೂ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, 22 ವರ್ಷಗಳಿಂದ ಮಾತನಾಡುವ ಗೊಂಬೆಯಾಗಿದ್ದ ನನಗೆ ರಾಷ್ಟ್ರಮಟ್ಟದಲ್ಲಿ ಗುರುತಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ತಿಳಿಸಿದರು.
ಈ ಪ್ರಶಸ್ತಿಗೆ ಮೊದಲು ಸುಮಾರು 5 ಸಾವಿರಕ್ಕೂ ಹೆಚ್ಚು ಮಹಿಳಾ ಸಾಧಕರ ಪಟ್ಟಿ ಸಿದ್ದಪಡಿಸಲಾಗಿತ್ತು. ಕೊನೆಗೆ ಆ ಪಟ್ಟಿಯನ್ನು 112ಕ್ಕೆ ಇಳಿಸಲಾಯಿತು. ದೇಶದ ವಿವಿಧ ರಾಜ್ಯಗಳಲ್ಲಿ ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ನೂರಾರು ಮಹಿಳಾ ಸಾಧಕಿಯರ ಮಧ್ಯದಲ್ಲಿ ತಾವು ಆಯ್ಕೆಯಾಗಿದ್ದು, ರಾಷ್ಟ್ರಪತಿಯಿಂದ ಪ್ರಶಸ್ತಿ ಸ್ವೀಕರಿಸಿದ್ದು ಖುಷಿ ತಂದಿದೆ. ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ ರಾಷ್ಟ್ರಪತಿ ಕೋವಿಂದ್ ಸಾಧಕಿಯನ್ನು ಪ್ರತ್ಯೇಕವಾಗಿ ಕರೆದು ಮಾತನಾಡಿಸಿ, ತಮ್ಮ ಸಾಧನೆಯನ್ನು ಮುಕ್ತಕಂಠದಿಂದ ಕೊಂಡಾಡಿದರು. ಇದು ಸಾಕಷ್ಟು ಸಂತಸ ತಂದಿದ್ದು, ಮುಂದಿನ ದಿನಗಳಲ್ಲಿ ಹೆಚ್ಚೆಚ್ಚು ಸಾಧನೆ ಮಾಡಲು ಸ್ಪೂರ್ತಿ ನೀಡಿದಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.