ಅಪೂರ್ವ ಒಳನೋಟಗಳ ವಿಮರ್ಶಾ ಸಂಕಲನ

Update: 2018-02-03 17:44 GMT

ಸಾಹಿತ್ಯ ಸಂಸ್ಕೃತಿ ಕುರಿತ ವಿಮರ್ಶಾ ಲೇಖನಗಳ ಸಂಕಲನವಿದು. ಐದು ಶೀರ್ಷಿಕೆಗಳಡಿಯಲ್ಲಿ ಇವು ವಿಭಾಗೀಕರಣಗೊಂಡಿವೆ. ‘ಭಕ್ತಿ ಪರಂಪರೆ ಮತ್ತು ಭಾರತೀಯತೆ’ ಲೇಖನದಲ್ಲಿ ಭಾರತೀಯತೆಯ ಪರಿಕಲ್ಪನೆಯಿಂದ ದೇಶದ ಐಕ್ಯತೆಯ ಕುರಿತ ಚರ್ಚೆ ಆರಂಭವಾಗಿ, ಭಕ್ತಿಪಂಥ ದೇಶೀಯ-ಆಧ್ಯಾತ್ಮಿಕ ನೆಲೆಗಳಿಂದ, ಆಚರಣಾ ಕ್ರಮಗಳಿಂದ ಭಾರತಾದ್ಯಂತ ವಿಸ್ತರಿಸಿ ವಿಕಾಸಗೊಂಡ ಬಗೆಯತ್ತ ಬೆಳಕು ಚೆಲ್ಲಲಾಗಿದೆ.

‘ವೈದಿಕ ಪರಂಪರೆಯ ಒಳ್ಳೆಯ ಅಂಶಗಳೊಂದಿಗೆ ಶೂದ್ರ, ಹಿಂದುಳಿದ ದಲಿತ ಜಾತಿಗಳ ದಿವ್ಯ ಶಕ್ತಿಯನ್ನು ಬೆಸೆಯುವ ಕೆಲಸವಾದಾಗ ಮಾತ್ರ ಸಮಾನತಾ ಸಮಾಜ ಬೆಳೆಯಲು ಸಾಧ್ಯವೆಂಬ ಆಶಯವನ್ನು ಕನಕದಾಸರ ಕೀರ್ತನೆಗಳಲ್ಲಿನ ಜಾತಿತಾರತಮ್ಯದ ಆಯಾಮಗಳು ಲೇಖನದಲ್ಲಿ ಗುರುತಿಸಲಾಗಿದೆ.’ ಈ ಎರಡು ಲೇಖನಗಳು ಪುರಾಣ, ಇತಿಹಾಸ, ಸಮಾಜ, ಸಂಸ್ಕೃತಿ - ಎಲ್ಲವೂ ಸಂಗಮಿಸಿರುವ ಮುಂದಿನ ಲೇಖನಗಳಿಗೆ ಪ್ರವೇಶಿಕೆಯಾಗಿವೆ. ಆಕಾಶ-ಭೂಮಿ, ಭೂಮಿ-ಮನುಷ್ಯ, ಮನುಷ್ಯ-ಸಮಾಜ - ಇವುಗಳ ಸಂಬಂಧವನ್ನು ಕುರಿತಂತೆಯೆ ಜಾಗತಿಕ ಸಾಹಿತ್ಯ ಮೂಡಿಬಂದದ್ದು, ಅದರಲ್ಲೂ ಮನುಷ್ಯತ್ವವೊಂದೇ ಬಹುಮುಖ್ಯವೆಂದು ಜಗತ್ತಿಗೆ ಸಾರಿದೆ.

ಈ ಧೋರಣೆಯನ್ನು ಎಸ್.ಆರ್.ವಿಜಯಶಂಕರ ಹಾಗೂ ಕೆ.ಸತ್ಯನಾರಾಯಣ ಅವರ ವಿಮರ್ಶಾ ನೆಲೆಗಳ ಕುರಿತ ಬರಹಗಳಲ್ಲಿ ಮತ್ತಷ್ಟು ಖಚಿತಪಡಿಸಿಕೊಳ್ಳಲಾಗಿದೆ. ವಿಮರ್ಶೆಯಲ್ಲಿ ವಹಿಸಬೇಕಾದ ಎಚ್ಚರಗಳನ್ನು ಸೂಚಿಸುತ್ತ ವಿಜಯಶಂಕರರ ವಿಮರ್ಶೆಯಲ್ಲಿ ವ್ಯಕ್ತಗೊಳ್ಳುವ ‘ಅಖಂಡ ಪೂರ್ಣದೃಷ್ಟಿ’ಯನ್ನು, ಪರಂಪರೆಗೆ ವಿಮುಖರಾಗದೆ ವರ್ತಮಾನವನ್ನು ಕಟ್ಟಿಕೊಳ್ಳುವ ವಿಮರ್ಶೆಯ ಬಗೆಯುವ ಬಗೆಯನ್ನು ಶೋಧಿಸಲಾಗಿದೆ. ಅನುಭವಜನ್ಯದಿಂದ ಪುನರ್‌ವ್ಯಾಖ್ಯಾನಕ್ಕೆ ತೊಡಗುವ ಸತ್ಯನಾರಾಯಣರ ಸಾಹಿತ್ಯ ವಿಮರ್ಶೆಯ ಬಗೆಗೂ ವಸ್ತುನಿಷ್ಠ ಚಿಂತನೆಯಿದೆ.

‘ರಾ.ಯ.ಧಾರವಾಡಕರ ಅವರ ಹೊಸಗನ್ನಡ ಅರುಣೋದಯ- ಕೆಲವು ಚಿಂತನೆಗಳು’ ಲೇಖನದಲ್ಲಿ 19ನೇ ಶತಮಾನದ ತಾತ್ವಿಕ ಗ್ರಹಿಕೆ, ಬರವಣೆಗೆಯ ಕ್ರಮ- ಇತ್ಯಾದಿಗಳ ಹಿನ್ನೆಲೆಯಲ್ಲಿ ಕರ್ನಾಟಕ ಸಂಸ್ಕೃತಿಯ ಚಾರಿತ್ರಿಕ ಸ್ವರೂಪವನ್ನು ಕಟ್ಟಿಕೊಡಲಾಗಿದೆ. ಜಿ. ವೆಂಕಟಯ್ಯನವರ ‘ನೊಂದಜೀವ’, ಗೊರೂರರ ಪ್ರಬಂಧಗಳು, ಬಿಳುಮನೆ ರಾಮದಾಸರ ‘ಲಡಾಯಿ’, ಓಲೆಕುಲೆಟ್‌ರ ‘ಲೇರಿಯೋಂಕ’, ಜಗದೀಶ ಕೊಪ್ಪ ಅವರು ಅನುವಾದಿಸಿದ ‘ಮರುಭೂಮಿಯ ಹೂ’ ಪಠ್ಯ ಕೇಂದ್ರಿತ ಬರಹಗಳಾಗಿವೆ.

ಮೈಸೂರಿನ ಹೊಲೆಯರ ಕುಟುಂಬದ ಕುರಿತ ‘ನೊಂದಜೀವ’ ಬುದ್ಧ್ದ, ಗಾಂಧಿ, ಅಂಬೇಡ್ಕರರ ಆಶಯಗಳನ್ನು ಒಳಗೊಂಡದ್ದು. ನಮ್ಮೂರ ರಸಿಕರು, ಹಳ್ಳಿಯ ಚಿತ್ರಗಳು, ಗರುಡಗಂಬದ ದಾಸಯ್ಯ, ಬೆಸ್ತರ ಕರಿಯ, ಬೈಲಹಳ್ಳಿ ಸರ್ವೆ, ಬೆಟ್ಟದಮನೆಯಲ್ಲಿ ಮತ್ತು ಇತರ ಪ್ರಬಂಧಗಳು, ಹಳೆಯ ಪಳೆಯ ಮುಖಗಳು- 1929-1981ರ ಅವಧಿಯಲ್ಲಿ ಬಂದಿರುವ ಈ ಸಂಕಲನಗಳ ಪ್ರಬಂಧಗಳಲ್ಲಿ ಗೊರೂರು ಕಥನಾತ್ಮಕ ಶೈಲಿಯನ್ನು ಬಳಸಿ ಧ್ವನಿಪೂರ್ಣವಾಗಿಸಿರುವ ರೀತಿಯನ್ನು ವಿಶ್ಲೇಷಿಸಲಾಗಿದೆ. ರಾಮದಾಸರ ಇನ್ನಿತರ ಸೃಜನಕೃತಿಗಳ ಹಿನ್ನೆಲೆಯಲ್ಲಿ ‘ಲಡಾಯಿ’ ಕಾದಂಬರಿಯ ಮಹತ್ವದತ್ತ ಗಮನಹರಿಸಲಾಗಿದೆ.

ಎಚ್.ದಂಡಪ್ಪ,

‘ಲೇರಿಯೋಂಕ’ ಕುರಿತ ಲೇಖನ ಕುತೂಹಲಕಾರಿಯಾದುದು. ಮಾಸಾಯಿಯೆಂಬ ಬುಡಕಟ್ಟಿಗೆ ಸೇರಿದ ‘ಲೇರಿಯೋಂಕ’ ಎಂಬ ಬಾಲಕ ಶಿಕ್ಷಣ ಕಲಿತು ಹೊಸ ಅನುಭವ ಪಡೆದ ರೀತಿಯನ್ನು ಕುರಿತ ಕಾದಂಬರಿ. ಆಫ್ರಿಕನ್ ಬುಡಕಟ್ಟುಗಳಲ್ಲಿನ ಆಸೆ ಆಕಾಂಕ್ಷೆ, ಆತಂಕ ತಲ್ಲಣ, ಸಂಪ್ರದಾಯ ಆಧುನಿಕತೆಗಳ ನಡುವಿನ ಸಂಘರ್ಷ - ಇತ್ಯಾದಿಗಳನ್ನು ಮೊದಲಘಟ್ಟದ ಕನ್ನಡ ಕಾದಂಬರಿಗಳ ಸ್ವರೂಪ ಧ್ಯೇಯ ಧೋರಣೆಗಳೊಂದಿಗೆ ತೌಲನಿಕವಾಗಿ ವಿವೇಚಿಸಿರುವುದು ಸ್ವಾಗತಾರ್ಹ ಸಂಗತಿ. ಬುಡಕಟ್ಟಿನ ಪರಂಪರೆ ಹಾಗೂ ಮಹಿಳಾ ಆತ್ಮಚರಿತ್ರೆಗಳ ಅನನ್ಯತೆಯ ದೃಷ್ಟಿಯಿಂದ ‘ಮರು ಭೂಮಿಯ ಹೂ’ ಕುರಿತಾದ ಲೇಖನ ಬಹಳ ಮುಖ್ಯವಾದುದ್ದು.

ಕನ್ನಡಕ್ಕೆ ಅನುವಾದಗೊಂಡ ಮೊತ್ತಮೊದಲನೆಯ ಆಫ್ರಿಕದ ಕೃತಿ ನಿರಂಜನರ ಪ್ರಧಾನ ಸಂಪಾದಕತ್ವದಲ್ಲಿ ಹೊರಬಂದ 2ನೇ ಸಂಪುಟ ‘ಆಫ್ರಿಕದ ಹಾಡು’ ಸಿ.ಸೀತಾರಾಮ್ (ಆಯ್ದ ಕಥೆಗಳ ಸಂಕಲನ ಆಫ್ರಿಕದ ಹಾಡು, ಆಫ್ರಿಕಖಂಡದ ಕಥೆಗಳು (1980), ಎಂ.ಆರ್.ಕಮಲ (ಕತ್ತಲಹೂವಿನಹಾಡು 1989), ಕಪ್ಪುಹಕ್ಕಿಯ ಬೆಳಕಿನ ಹಾಡು, ಉತ್ತರ ನಕ್ಷತ್ರ(2005), ರೋಸ ಪಾರ್ಕ್ಸ್: ನನ್ನ ಕಥೆ (2004), ಮಾಯಾ ಏಂಜಲೋ ಆತ್ಮಕಥೆ (2007), ರಹ್ಮತ್ ತರೀಕೆರೆ (ವಸಾಹತು ಪ್ರಜ್ಞೆ ಮತ್ತು ವಿಮೋಚನೆ(1996), ಸಿ.ನಾಗಣ್ಣ (ಭಂಗ 2001), ಬಂಜಗೆರೆ ಜಯಪ್ರಕಾಶ್(ತಲೆಮಾರು-2003), ಎಚ್.ಎಸ್.ರಾಘವೇಂದ್ರರಾವ್ (ಕಪ್ಪು ಕವಿತೆ: ಆಫ್ರಿಕನ್ ಕವಿತೆಗಳು-2013)- ಮುಂತಾದವರ ಅನುವಾದ ಕೃತಿಗಳು ವಿಮರ್ಶೆಗೊಳಪಟ್ಟಿವೆ. ಅನುವಾದ ಪರಂಪರೆ, ಅದರ ಅಗತ್ಯ, ಪ್ರಭಾವ ಪ್ರೇರಣೆ ಅನನ್ಯತೆ- ಇತ್ಯಾದಿ ಅಂಶಗಳನ್ನು ಗುರುತಿಸುವಾಗ ಕನ್ನಡದ ಸಾಂಸ್ಕೃತಿಕ ಪರಂಪರೆಗನುಗುಣವಾಗಿ ಅನುವಾದಗೊಂಡಿರುವ ರೀತಿಯನ್ನು ಕುರಿತಾಗಿ ಒಳ್ಳೆಯ ಮಾತುಗಳು ವ್ಯಕ್ತವಾಗಿವೆ. ಪೂರಕವಾಗಿ ಅನುವಾದಿತ ಬಿಡಿ ಲೇಖನಗಳು, ಕವಿತೆಗಳ ಪಟ್ಟಿಯನ್ನ್ನು ನೀಡಲಾಗಿದ್ದು ಈ ಕ್ಷೇತ್ರದಲ್ಲಿ ಸಂಶೋಧನೆ ನಡೆಸುವವರಿಗೆ ಅಗತ್ಯ ಮಾಹಿತಿಯನ್ನು ನೀಡುತ್ತವೆ. ಪಠ್ಯದ ವ್ಯಾಖ್ಯಾನ ಇಲ್ಲವೇ ಸಮರ್ಥನೆಗೆ ದಂಡಪ್ಪನವರು ಪುರಾಣ ಸಮಾಜ ಇತಿಹಾಸ ಮುಂತಾದ ಜ್ಞಾನಶಾಖೆಗಳನ್ನು ಬಳಸಿಕೊಳ್ಳುವ ವೈದಾನಿಕತೆಯಲ್ಲೇ ಓದಿನ ದಾಹ ಎಂಥದ್ದೆಂಬುದರ ಅರಿವಾಗುತ್ತದೆ.

ಹೀಗಾಗಿ ಸಾಹಿತ್ಯ ಸಂಸ್ಕೃತಿ ವಿಮರ್ಶೆಯನ್ನು ಕುರಿತಾದ ಇಲ್ಲಿಯ ಪ್ರತಿಯೊಂದು ಬರಹವೂ ಇವತ್ತಿನ ಸಾಹಿತ್ಯ ವಿಮರ್ಶೆ ಹೇಗಿರಬೇಕೆಂಬುದಕ್ಕೆ ಮಾರ್ಗ ಸೂಚಿಗಳನ್ನ್ನು ನೀಡಬಲ್ಲದು. ದಂಡಪ್ಪನವರು ಸಿದ್ಧಾಂತಗಳ ಮೂಲಕ ಪ್ರವೇಶಿಸದೆ ಪಠ್ಯಗಳ ಮೂಲಕವೇ ಪ್ರವೇಶಿಸಿ ಹಲವು ವಿಚಾರಗಳು ಹರಡಿಕೊಳ್ಳುವಂತೆ ಮಾಡಿಬಿಡುತ್ತಾರೆ.

(ಚಕೋರ ಮತ್ತು ಚಂದ್ರಮ: ಎಚ್.ದಂಡಪ್ಪ, ವಿಸ್ಮಯ ಪಬ್ಲಿಕೇಷನ್ಸ್, ಚಂದ್ರ ಬಡಾವಣೆ, ಬೆಂಗಳೂರು-72 )

ನಾನು ಓದಿದ ಪುಸ್ತಕ

ಡಾ. ಜಿ.ಆರ್. ತಿಪ್ಪೇಸ್ವಾಮಿ

Writer - ಡಾ. ಜಿ.ಆರ್. ತಿಪ್ಪೇಸ್ವಾಮಿ

contributor

Editor - ಡಾ. ಜಿ.ಆರ್. ತಿಪ್ಪೇಸ್ವಾಮಿ

contributor

Similar News