ಶಿವೇಶ್ವರ ದೊಡ್ಡಮನಿ

Update: 2018-02-04 07:39 GMT

ಧಾರವಾಡದ ಯುವ ಬರಹಗಾರ ಶಿವೇಶ್ವರ ದೊಡ್ಡಮನಿ (1925-1950) ಕವಿ, ಪತ್ರಕರ್ತ ಹಾಗೂ ಹೋರಾಟಗಾರರಾಗಿದ್ದರು. ಬಸವರಾಜ ಕಟ್ಟೀಮನಿ, ನಿರಂಜನ ಮುಂತಾದ ಖ್ಯಾತರ ಒಡನಾಡಿಯಾಗಿದ್ದ ಶಿವೇಶ್ವರ 25ರ ತೀರಾ ಚಿಕ್ಕ ವಯಸ್ಸಿನಲ್ಲಿ ಸಾವಿಗೀಡಾದರು. ಶಿವೇಶ್ವರರ ಸಾಹಿತ್ಯ ಪ್ರೀತಿ, ಬಡತನದ ಬದುಕು ಹಾಗೂ ಸ್ವಚ್ಛ ವ್ಯಕ್ತಿತ್ವಗಳ ಬಗ್ಗೆ ಬಸವರಾಜ ಕಟ್ಟೀಮನಿಯವರು ಬರೆದ ಲೇಖನವಿದು.

ಮಬ್ಬಿಗಿಳಿದ ಸಾಲು ಸಾಲು ಅಮೃತಶಿಲೆಯ ಗೋರಿ

ಕತ್ತಲೆದೆಯ ಚೂರಿ;

ಮನದ ಮಕ್ಕಳೆಲ್ಲ ನಕ್ಕ ಮಲ್ಲಿಗೆ ಬನತೋಟ

ಮರೆದು ಮಸಣವಾಟ.

                           -ಗೋಪಾಲಕೃಷ್ಣ ಅಡಿಗ

‘‘ಕನ್ನಡದಲ್ಲಿ ಕವಿಯಾಗಿ ಜನಿಸಬೇಡ’’ ಎಂದು ಹಿರಿಯ ರೊಬ್ಬರು ಹೇಳಿರುವುದುಂಟು. ಆ ಮಾತಿನಲ್ಲಿ ನಿರಾಸೆ ಮೂಡಿದ್ದರೂ ಸತ್ಯವೂ ಇದೆಯೆಂಬುದನ್ನು ಅಲ್ಲಗಳೆಯುವಂತಿಲ್ಲ.

ಕನ್ನಡದಲ್ಲಿ ಪುಸ್ತಕಗಳನ್ನು ಕೊಂಡು ಓದುವ ಜನ ವಿರಳ. ಕವಿತೆಯ ಪುಸ್ತಕಗಳನ್ನೋದುವವರು ಇನ್ನೂ ವಿರಳ. ಪತ್ರಿಕೆಗಳಲ್ಲಿ ಪ್ರಕಟವಾಗುವ ಕವಿತೆಗಳನ್ನು ವಿಮರ್ಶಾತ್ಮಕವಾಗಿ ನೋಡಿ ಹೊಸದಾಗಿ ತಲೆಯೆತ್ತುವ ತರುಣ ಕವಿಗಳ ಯೋಗ್ಯತೆಯನ್ನು ಕಂಡು ಹಿಡಿದು ಮೆಚ್ಚಿಕೊಳ್ಳುವವರು ಇನ್ನೂ ವಿರಳ. ಇಂಗ್ಲೆಂಡ್, ಅಮೆರಿಕ, ರಶ್ಯಾ ಮೊದಲಾದ ರಾಷ್ಟ್ರಗಳಲ್ಲಿ ಗುಣಗ್ರಾಹಿಗಳೂ ನಿಷ್ಪಕ್ಷಪಾತಿಗಳೂ ಆದ ವಿಮರ್ಶಕರು, ಪ್ರಕಾಶಕರು ಪ್ರತಿಭಾಶಾಲಿಗಳಾದ ತರುಣ ಕವಿಗಳನ್ನು ಪ್ರೋತ್ಸಾಹಿಸಿ ಬೆಳಕಿಗೆ ತರುತ್ತಾರೆ. ಅವರ ಗ್ರಂಥಗಳು ಸಾವಿರಗಳ ಸಂಖ್ಯೆಯಲ್ಲಿ ಮಾರಾಟವಾಗುತ್ತವೆ. ಹೊಟ್ಟೆಯ ಪಾಡಿಗಾಗಿ ಇಷ್ಟವಿಲ್ಲದ ನೌಕರಿಯಲ್ಲಿ ಕೊಳೆಯಬೇಕಾದ ಪ್ರಸಂಗ ಅವರಿಗೆ ಬರುವುದಿಲ್ಲ. ಕಾವ್ಯಾಭ್ಯಾಸ, ಕಾವ್ಯಚಿಂತನೆ, ಕಾವ್ಯರಚನೆಗಳಲ್ಲೇ ತೊಡಗಿಕೊಂಡು ಅವರು ತಮ್ಮ ಕ್ಷೇತ್ರದಲ್ಲಿ ಮುಂದುವರಿಯಲು ಸಾಧ್ಯವಾಗುತ್ತದೆ.

ಕನ್ನಡದಲ್ಲಿ ಎಲ್ಲವೂ ಇದಕ್ಕೆ ವಿರುದ್ಧವೆ. ಇಲ್ಲಿ ಭಾವುಕ ಕವಿಜೀವಗಳಿಗೆ ಕೊಂಚವೂ ಪ್ರೋತ್ಸಾಹವಿಲ್ಲ. ಎತ್ತ ತಿರುಗಿದರೂ ತಾತ್ಸಾರ, ಕುಚೇಷ್ಟೆ, ನಿರ್ಲಕ್ಷ, ಅಸೂಯೆ. ಅವರ ಕವನಸಂಕಲನಗಳು ಪ್ರಕಟವಾಗುವುದು ಹಾಗಿರಲಿ, ಪತ್ರಿಕೆಗಳಲ್ಲಿ ಕವಿತೆಗಳು ಪ್ರಕಟವಾಗುವುದೂ ಕಷ್ಟಕರವಾಗುತ್ತದೆ. ತಮಗೆ ತಾವೇ ನಿರ್ಮಿಸಿಕೊಂಡ ಶ್ರೇಷ್ಠತೆಯ ಪೀಠವನ್ನೇರಿ ಕುಳಿತ ಕೆಲವರು ಸಂಪಾದಕರು ಈ ತರುಣ ಕವಿಗಳನ್ನು ಅತ್ಯಂತ ಅನಾದರದಿಂದ ನೋಡುತ್ತಾರೆ. ನೂರಾರು ತರುಣ ಕವಿಗಳ ಅನುಭವಕ್ಕೆ ಬಂದ ವಿಚಾರವಿದು.

ದೊಡ್ಡಮನಿ ಶಿವೇಶ್ವರನಿಗಂತೂ ಈ ಕಟು ಅನುಭವ ಮೃತ್ಯುದೂತನಂತಾಯಿತು! ಆತನ ನಿಕಟ ಸ್ನೇಹಿತರಲ್ಲೊಬ್ಬನಾಗಿದ್ದ ನಾನು ಈ ವಿಷಯವನ್ನು ಚೆನ್ನಾಗಿ ಅರಿತುಕೊಂಡಿದ್ದೆ.

ಶಿವೇಶ್ವರ ದೊಡ್ಡಮನಿ ಉದಯೋನ್ಮುಖ ಕವಿಯೆಂಬ ವಿಚಾರ ನಮಗೆ ಗೊತ್ತಿದ್ದಿತು! ಆತನ ಭವಿಷ್ಯದ ಬಗೆಗೆ ನಿಮ್ಮಲ್ಲಿ ಹಲವರಾದರೂ ಏನೇನೂ ಆಸೆಯಿಟ್ಟುಕೊಂಡಿರಲು ಸಾಕು. ಎರಡು ವರ್ಷಗಳ ಹಿಂದೆ ಆತ ಹಠಾತ್ತನೆ ಸಾವಿಗೀಡಾದ. ‘‘ಇಪ್ಪತ್ತೈದರ ಪ್ರಾಯದಲ್ಲೇ ಹೇಗೆ ಸತ್ತ ಶಿವೇಶ್ವರ? ಆತನಿಗೇನಾಗಿದ್ದಿತು?’’ ಎಂದು ಕೆಲವರು ಕೇಳಿದರು. ‘‘ವಿಷಮ ಜ್ವರದಿಂದ ಸತ್ತ’’ ಎಂದು ಹೇಳಿ ಸುಮ್ಮನಾದರು ಆತನ ಬಂಧುಗಳು.

ಆತ ಹೇಗೆ ಸತ್ತನೆಂಬುದನ್ನು ನಾನು ಚೆನ್ನಾಗಿ ಬಲ್ಲೆ. ಇಪ್ಪತ್ತೈದರ ಪ್ರಾಯದಲ್ಲಿ ಸಾಮಾನ್ಯವಾಗಿ ಎಲ್ಲರೂ ಸಾಯುವುದಿಲ್ಲ. ಆತನ ಸಾವಿಗೆ ಕಾರಣವಾದುದು ವಿಷಮಜ್ವರ ಎಂಬುದೇನೋ ನಿಜ. ಆದರೆ ಜನರು ತಿಳಿದುಕೊಂಡಂಥ ವಿಷಮ ಜ್ವರವಲ್ಲ ಅದು. ಸಾಮಾಜಿಕ, ಆರ್ಥಿಕ, ಸಾಹಿತ್ಯಿಕ, ಸಾಂಸ್ಕೃತಿಕ ವಿಷಮತೆಯ ಜ್ವರ ಅದು. ಭಾವಜೀವಿ ಕೀಟ್ಸ್ ನರಳಿ ನರಳಿ ಸತ್ತ ವಿಷಯ ನಿಮಗೆ ಗೊತ್ತಿರಬಹುದು. ಜಾಕ್ ಲಂಡನ್, ಸಾನೆ ಗುರೂಜಿ ಮೊದಲಾದ ಪ್ರಖ್ಯಾತ ಲೇಖಕರು ಈ ದುಷ್ಟ ಪ್ರಪಂಚದಲ್ಲಿ ಹೆಚ್ಚು ದಿನ ಬದುಕಲಿಚ್ಛಿಸದೆ ಆತ್ಮಹತ್ಯೆ ಮಾಡಿಕೊಂಡ ವಿಷಯವೂ ನಿಮಗೆ ಗೊತ್ತಿರಬಹುದು. ಅವರ ಹಾಗೆ ಶಿವೇಶ್ವರ ಆತ್ಮಹತ್ಯೆ ಮಾಡಿಕೊಳ್ಳಲಿಲ್ಲವೆಂಬುದು ನಿಜವಾದರೂ ಈ ನೀಚ ಸಮಾಜ ವ್ಯವಸ್ಥೆಯ ಸಾವಿರ ಕ್ರೂರ ಕೈಗಳು ಆತನ ಹೃದಯ, ಮನಸ್ಸು, ಮಿದುಳು, ಚೇತನಗಳನ್ನು ಒಳಗೊಳಗೇ ಹಿಸುಕಿ ಆತನನ್ನು ಕೊಂದು ಹಾಕಿದವೆಂದು ನಾನು ಹೇಳಬಯಸುತ್ತೇನೆ. ಆತ ಇಷ್ಟು ಬೇಗ ಸಾಯಲು ಸಾಹಿತ್ಯ ಕ್ಷೇತ್ರದ ಕೆಲವು ವ್ಯಕ್ತಿಗಳೂ ಅಪ್ರತ್ಯಕ್ಷವಾಗಿ ಕಾರಣರಾದರೆಂದು ಹೇಳಬಯಸುತ್ತೇನೆ.

ಇದನ್ನೋದಿ ನಿಮ್ಮ ಮೈಮೇಲೆ ಮುಳ್ಳು ಏಳಬಹುದು. ‘‘ಆ! ನಿಜವೇ?’’ ಎಂದು ನೀವು ದಿಗಿಲುಗೊಂಡು ಕೇಳಬಹುದು. ನಿಜ, ಸಂಪೂರ್ಣ ನಿಜ.

ದೊಡ್ಡಮನಿಯನ್ನು ಯಾರು ಕೊಂದರು? ಆ ಸಂಕುಚಿತ ಮನಸ್ಸಿನ, ನೀಚ ಸ್ವಾರ್ಥದ, ಭೀಕರ ವಿಷಮತೆಯ ಪಾಪಿ ಸಮಾಜ ಆತನನ್ನು ಕೊಂದಿತು. ‘‘ದೇವರು ಆತನನ್ನು ಕರೆದೊಯ್ದ’’ನೆಂದು ಹೇಳುವುದೊಂದು ದೊಡ್ಡ ಸುಳ್ಳು. ಸಮಾಜದ ದೆವ್ವಗಳು ಆತನನ್ನು ಕೆಣಕಿ, ಕೆರಳಿಸಿ, ಅವಮಾನಗೊಳಿಸಿ, ಆತನ ಶಕ್ತಿಯನ್ನೆಲ್ಲ ಹೀರಿಕೊಂಡು ಮೃತ್ಯುವಿನ ದವಡೆಗೆ ದೂಡಿದುವು.

       ನಿರಂಜನ

“I would drown this society in my vomit” ಎಂದು ಫ್ಲಾಬೇ ಒಮ್ಮೆ ಹೇಳಿದ್ದ. ತನ್ನ ಕಾಲದ ವಿಷಮ ಸಮಾಜವನ್ನು ಕುರಿತು ಆತನಾಡಿದ ಮಾತು ಅದು. ಇಂದಿನ ನಮ್ಮ ಸಮಾಜವನ್ನು, ಅದರ ಶಿರೋಮಣಿಗಳೆಂದು ಮೆರೆಯುತ್ತಿರುವ ಡಾಂಭಿಕರನ್ನು ನಿರೀಕ್ಷಿಸಿದಾಗ ನನಗೂ ಒಮ್ಮಿಮ್ಮೆ ಹಾಗೇ ಅನ್ನಿಸುತ್ತದೆ. ಭಾವಜೀವಿಗಳಿಗೆ, ಕವಿಗಳಿಗೆ, ಲೇಖಕರಿಗೆ, ಕನಸುಗಾರರಿಗೆ, ಕಲಾವಿದರಿಗೆ, ವಿಶಾಲ ಮನಸ್ಕರಿಗೆ, ಧ್ಯೇಯವಾದಿಗಳಿಗೆ ಇಲ್ಲಿ ಲಭಿಸುವ ಅಸಡ್ಡೆಯನ್ನು ಕಂಡಾಗ ಘೋರ ತಿರಸ್ಕಾರದಿಂದ ಹೊರಡುವ ಉದ್ಗಾರ ಇದು.

ಶಿವೇಶ್ವರನ ದೃಷ್ಟಾಂತವನ್ನೇ ತೆಗೆದುಕೊಳ್ಳಲಿ : ಬಡ ನೇಕಾರ ಕುಟುಂಬವೊಂದರಲ್ಲಿ ಹುಟ್ಟಿದ್ದ ಆ ಜೀವ, ಹಳ್ಳಿಯ ಸರಳ ಸುಂದರ ವಾತಾವರಣದಲ್ಲಿ ಬೆಳೆದು, ಜಾನಪದ ಗೀತೆಗಳ ಸವಿಯನ್ನುಂಡು ಸಾಹಿತ್ಯದ ಕಡೆ ಆಕರ್ಷಿತವಾಯಿತು. ಮ್ಯಾಟ್ರಿಕ್ ಮುಗಿದ ಬಳಿಕ ಕಾಲೇಜಿಗೆ ಹೋಗಿ ವ್ಯಾಸಂಗ ಮಾಡುವ ಇಷ್ಟವಿದ್ದರೂ ಫೀಸ್‌ಗೆ ಹಣವಿಲ್ಲದ್ದರಿಂದ ವಿದ್ಯಾಭ್ಯಾಸಕ್ಕೆ ಶರಣು ಹೊಡೆಯಬೇಕಾಯಿತು. ಹುಟ್ಟು ಪ್ರತಿಭಾಶಾಲಿಯಾದ ಶಿವೇಶ್ವರ ಎಂ.ಎ. ವರೆಗೂ ಓದಿ ಯಾವುದೋ ಒಂದು ಕಾಲೇಜಿನಲ್ಲಿ ಲೆಕ್ಚರರ್ ಕೆಲಸಕ್ಕೆ ಸೇರಿದ್ದಲ್ಲಿ ಆತನೂ ಇನ್ನೊಬ್ಬ ಬೇಂದ್ರೆಯೊ, ಕುವೆಂಪುವೊ ಆಗಬಹುದಾಗಿದ್ದಿತು. ಆದರೆ....

ಜನಪದಗೀತೆಗಳನ್ನು ಸಂಗ್ರಹಿಸುತ್ತ, ಜತೆಯಲ್ಲೇ ಸ್ವತಂತ್ರವಾಗಿ ಕವಿತೆಗಳನ್ನು ರಚಿಸಿ ಪ್ರಕಟಿಸುತ್ತ ಕನ್ನಡ ಸಾಹಿತ್ಯದಲ್ಲಿ ಹೊಸ ಶಕ್ತಿ ಹುಟ್ಟಿಸಬೇಕೆಂಬುದು ಆತನ ಆಶಯವಾಗಿದ್ದಿತು. ಆತನ ಆಸೆಯ ಬಳ್ಳಿ ಅಸಡ್ಡೆಯ ಉಸಿರಿಗೆ ಸಿಕ್ಕಿ ಕಮರಿ ಹೋಯಿತು. ತಿಂಗಳೆರಡು ತಿಂಗಳು ಹಳ್ಳಿಪಳ್ಳಿ ತಿರುಗಿ ಕಷ್ಟಪಟ್ಟು ಆತ ಸಂಪಾದಿಸಿದ ಜನಪದ ಗೀತೆಗಳನ್ನು ಧಾರವಾಡದ ದೊಡ್ಡ ಆಕಾರದ ಮಾಸಪತ್ರಿಕೆಯೊಂದರ ಸಂಪಾದಕರು ಕಸದ ಬುಟ್ಟಿಗೆಸೆದು ‘‘ಕಳೆದುವು’’ ಎಂದು ಸುಳ್ಳು ಹೇಳಿದರು. ತನ್ನ ಸ್ವಂತ ತಾಯಿಯನ್ನು ಕಳೆದುಕೊಂಡಷ್ಟು ದುಃಖವಾಯಿತು ಶಿವೇಶ್ವರನಿಗೆ. ದುಃಖದ ಜತೆಯಲ್ಲೇ ರೋಷ, ತಿರಸ್ಕಾರ, ಸಮಾಜದ ಬಗೆಗೆ ಜಿಗುಪ್ಸೆ....

ಸಾಹಿತ್ಯ ಕ್ಷೇತ್ರದಲ್ಲಿಯೇ ತನ್ನ ಶಕ್ತಿ ಉತ್ಸಾಹ, ಪ್ರತಿಭೆಗಳನ್ನೆಲ್ಲ ವ್ಯಯಿಸುವ ಆಸೆ ಅವನದಾಗಿತ್ತು. ಆದರೆ ಅಲ್ಲಿ ಅವನಿಗೆ ದೊರೆತ ಸ್ವಾಗತ ಇಂಥದು. ಮನಸ್ಸಿಗೆ ವಿರುದ್ಧವಾಗಿ ಆತ ನಗರಸಭೆ, ಹೈಸ್ಕೂಲು, ಬ್ಯಾಂಕು ಮೊದಲಾದ ಕಡೆಗಳಲ್ಲಿ ಕಾರಕೂನಿಕೆ ಮಾಡಬೇಕಾಯಿತು. ಆ ಜನವೂ ಈತನನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ.

ಚಿಕ್ಕಂದಿನಿಂದಲೂ ಆತನ ಕಣ್ಣು ದುರ್ಬಲವಾಗಿದ್ದವು. ಸಮರ್ಥರಾದ ಡಾಕ್ಟರಿಗೆ ತೋರಿಸಿ ಚಿಕಿತ್ಸೆ ಮಾಡಿಸಿ, ಸಾಕಷ್ಟು ವಿಶ್ರಾಂತಿ ಪಡೆದಿದ್ದಲ್ಲಿ ಕಣ್ಣು ನೆಟ್ಟಗಾಗುವಂತಿದ್ದಿತು. ಚಿಕಿತ್ಸೆಗಾಗಿ ಆತನ ಬಳಿ ಹಣವಿರಲಿಲ್ಲ. ಕಾರಕೂನಿಕೆಯಿಂದ ಬರುವ ಸಂಬಳ ಹೊಟ್ಟೆಗೇ ಸಾಲದು. ಇನ್ನು ಚಿಕಿತ್ಸೆಗೆ ಹಣ ಎಲ್ಲಿಂದ ಬಂದೀತು? ವರ್ಷಗಳುರುಳಿದ ಹಾಗೆ ಕಣ್ಣಿನ ಶಕ್ತಿ ಕುಗ್ಗುತ್ತ ಬಂದಿತು. ಸಾಹಿತ್ಯ ಪ್ರೇಮಿಯೂ ಕವಿಯೂ ಆಗಿದ್ದ ಆತನಿಗೆ ಪುಸ್ತಕಗಳೆಂದರೆ ಅಪಾರ ಪ್ರೀತಿ, ತನ್ನ ಬಾಳಿನ ಎಲ್ಲ ಕಷ್ಟಗಳನ್ನೂ ಪುಸ್ತಕ ವಾಚನದಲ್ಲಿ ಮರೆತುಬಿಡುತ್ತಿದ್ದ. ದಿನ ಕಳೆದಂತೆ ಆ ಅಲ್ಪ ಸಮಾಧಾನವೂ ದೊರೆಯಲು ಅಸಾಧ್ಯವಾಯಿತು. ಕಣ್ಣಿಗೆ ಅಕ್ಷರಗಳೇ ಕಾಣಿಸವು. ಓದುವಂತಿಲ್ಲ, ಬರೆಯುವಂತಿಲ್ಲ, ಕತೆಯಿಲ್ಲ, ಕವಿತೆಯಿಲ್ಲ, ಜನಪದ ಗೀತೆಯಿಲ್ಲ. ಏನೂ ಇಲ್ಲದಂತಾಯಿತು ಆತನ ಪಾಲಿಗೆ

ಅಂಥ ಅರೆಕುರುಡು ಸ್ಥಿತಿಯಲ್ಲೂ ಆತ ಟೈಪಿಸ್ಟ್ ಆಗಿ ದುಡಿಯ ಬೇಕಾಗಿದ್ದಿತು. ಟೈಪ್‌ರೈಟರಿನೊಂದಿಗೆ ಸೆಣಸುವುದರಲ್ಲಿ ಆತನ ಜೀವನದ ಕೊನೆಯ ದಿನಗಳು ಕಳೆದು ಹೋದುವು. ಆ ಯಂತ್ರದೊಂದಿಗೆ, ತಾನೂ ಒಂದು ಯಂತ್ರವಾಗಿ ದುಡಿದ. ಆತನ ಯಾತನೆಯನ್ನು, ಅಸಹಾಯಕತೆಯನ್ನು ಗುರುತಿಸಿ ಯಂತ್ರ ನಡುಗುತ್ತಿದ್ದಿರಬೇಕು. ಆತನ ಅರೆಕುರುಡು ಕಣ್ಣುಗಳಿಂದ ಅದರ ಮೇಲೆ ಕಂಬನಿಗಳು ಉರುಳಿ ಬೀಳುತ್ತಿದ್ದಿರಬೇಕು.

ಶಿವೇಶ್ವರನ ಮನೆಯಿದ್ದುದು ನವಿಲೂರಿನಲ್ಲಿ. ನೌಕರಿ ಧಾರವಾಡದಲ್ಲಿ. ಬರುವ ಕ್ಷುಲ್ಲಕ ಸಂಬಳದಲ್ಲಿ ಧಾರವಾಡದಲ್ಲಿ ಮನೆ ಮಾಡಿ ಬದುಕುವಂತಿರಲಿಲ್ಲ. ಧಾರವಾಡದಿಂದ ನವಿಲೂರು ಮೂರು ಮೈಲಿನ ದಾರಿ. ಬೆಳಗ್ಗೆ ಸೈಕಲ್ ಹತ್ತಿಕೊಂಡು ಧಾರವಾಡಕ್ಕೆ ಬಂದು ಸಾಯಂಕಾಲ ಹಿಂದಿರುಗಬೇಕು. ತೆಳ್ಳನೆಯ ದುರ್ಬಲ ದೇಹ. ದಿನವೂ ಆರು ಮೈಲುಗಳವರೆಗೆ ಸೈಕಲಿನ ಸರ್ಕಸ್. ಒಮ್ಮೆಮ್ಮೆ ರಾತ್ರಿಯಾಗುವುದು. ಕತ್ತಲಲ್ಲೇ ಸೈಕಲ್ ಪ್ರಯಾಣ. ಸೈಕಲ್ ಚಕ್ರ....... ಕಾಲಚಕ್ರ...... ವಿಷಮತೆಯ ಕ್ರೂರ ಚಕ್ರ ಆತನ ಬಾಳನ್ನು ತುಂಡರಿಸುತ್ತಿತ್ತು.

ಮೈ ಬಿಸಿಯಾದರೆ, ಜ್ವರ ಬಂದರೆ, ರಜ ಸಿಕ್ಕುವಂತಿಲ್ಲ. ಔಷಧ ತೆಗೆದುಕೊಳ್ಳಲು ಕೂಡ ಬಿಡುವಾಗುವಂತಿಲ್ಲ. ಚಹವೇ ಔಷಧವಾಯಿತು. ಸಿಗರೇಟಿನ ಹೊಗೆಯೇ ಸೂಜಿಮದ್ದಾಯಿತು. ಜ್ವರದಿಂದ ಕೈ ನಡುಗುತ್ತಿದ್ದಾಗಲೂ ಟೈಪ್ ಮಾಡಬೇಕು. ಅಂಥ ಸ್ಥಿತಿಯಲ್ಲೇ ಆರು ಮೈಲು ಸೈಕಲ್ ನೂಕಬೇಕು. ರಾತ್ರಿಯೆಲ್ಲಾ ಕೆಂಡದಂಥ ಜ್ವರ. ಬೆಳಗಾಗುತ್ತಲೂ ಹಾಗೇ ಎದ್ದು ಸೈಕಲ್ ತುಳಿದುಕೊಂಡು ಕೆಲಸಕ್ಕೆ ಬರಬೇಕು. ಬರದಿದ್ದರೆ ಕೆಲಸಕ್ಕೆ ಕಲ್ಲು. ಹೊಟ್ಟೆಗೆ ಕಲ್ಲು ಮಣ್ಣು?

ವಿರಾಮವಿಲ್ಲದ, ಉಪಚಾರವಿಲ್ಲದ ಕತ್ತೆಯ ದುಡಿತ. ಮನಸ್ಸಿಗೆ, ಮಿದುಳಿಗೆ ಶಾಂತಿಯಿಲ್ಲ. ಜ್ವರ ಹೆಚ್ಚಿತು. ವಿಷಮ ಜ್ವರವಾಯಿತು. ಮೂರು ದಿನಗಳವರೆಗೆ ಆ ಬಗೆಗೆ ಯಾರಿಗೂ ಹೇಳದೆ ಹಾಗೆಯೆ ಕೆಲಸಕ್ಕೆ ಹೋಗುತ್ತಿದ್ದ. ನಾಲ್ಕನೆಯ ದಿನ ‘ಚೆಂಬೆಳಕಿ’ನಲ್ಲಿ ಮಲಗಿದವನಿಗೆ ಬೆಳಗಿನಲ್ಲಿ ಏಳಲಾಗಲಿಲ್ಲ. ಮಧ್ಯಾಹ್ನವಾಯಿತು. ಜ್ವರ ವಿಪರೀತವಾಯಿತು. ಪ್ರಜ್ಞೆ ತಪ್ಪಿತು. ನವಿಲೂರಿನಿಂದ ತಾಯಿ ಹೌಹಾರಿ ಓಡಿ ಬಂದಳು. ‘‘ಮಗನೇ, ಶಿವಣ್ಣಾ, ಸ್ವಲ್ಪ ಅನ್ನ ಉಣ್ಣಪ್ಪಾ’’ ತಮ್ಮ ಎಂದು ಹಲುಬಿದಳು. ಮೂರು ದಿನಗಳಿಂದ ಶಿವೇಶ್ವರ ಏನನ್ನೂ ತಿಂದಿಲ್ಲ. ಆ ತಾಯ ಕರುಳು ಕಿತ್ತು ಬರತೊಡಗಿದೆ. ಶಿವೇಶ್ವರನಿಗೆ ಬಾಯಿ ಕಟ್ಟಿ ಹೋಗಿದೆ. ಮಾತು ಹೊರಡುತ್ತಿಲ್ಲ. ಗೆಳೆಯರು ಮಾತನಾಡಿಸಿದಾಗ ಅವರಿಗೂ ಮೌನವೇ ಉತ್ತರವಾಯಿತು. ಡಾಕ್ಟರು ಬಂದರು. ಅವರ ಸಲಹೆಯಂತೆ ಆತನನ್ನು ನವಿಲೂರಿಗೆ ಸಾಗಿಸಲಾಯಿತು. ಡಾಕ್ಟರು ಸೂಜಿಮದ್ದು ಕೊಟ್ಟರು. ಆತನ ಪ್ರಾಣವನ್ನುಳಿಸಲು ಪ್ರಯತ್ನಿಸಿದರು. ಆದರೆ ಆ ದೇಹದಲ್ಲಿ ಶಕ್ತಿಯೇ ಉಳಿದಿರಲಿಲ್ಲ. ಗೂಡುಕಟ್ಟಿಕೊಂಡ ಎದೆ, ಮೂಳೆಮೂಳೆಯಾದ ಮೈ. ವಿಷಮತೆಯ ರಾಕ್ಷಸ ಆತನ ನೆತ್ತರನ್ನೆಲ್ಲ ಹೀರಿ ಬಿಟ್ಟಿದ್ದ.

ಶಿವೇಶ್ವರ ಉಳಿಯಲಿಲ್ಲ

1950 ಮಾರ್ಚ್ 26. ಅಂದು ನಟ್ಟಿರುಳಿನಲ್ಲಿ ಶಿವೇಶ್ವರನ ಪ್ರಾಣ ದೇಹವನ್ನು ತ್ಯಜಿಸಿತು.

ಆತ ಬದುಕಿದ್ದಾಗ ಆತನನ್ನು ಕಡೆಗಣಿಸಿದ್ದ ‘ಸುಸಂಸ್ಕೃತ’ ಸಾಹಿತಿಗಳು ಆತನ ಸಾವಿನ ಸುದ್ದಿ ತಿಳಿದ ಬಳಿಕ- ‘‘ಅಯ್ಯೋ, ಪಾಪ. ಇನ್ನೂ ತರುಣ ವಯಸ್ಸು. ಈಗಲೇ ಸಾಯಬಾರದಾಗಿತ್ತು’’ ಎಂದು ಹೇಳಿ ಮೊಸಳೆಯ ಕಣ್ಣೀರು ಕರೆದರು.

ಇಂಥ ಪ್ರಭೃತಿಗಳನ್ನು ಕುರಿತು ಗೆಳೆಯ ಅಡಿಗರು ಹೀಗೆ ಬರೆದಿದ್ದಾರೆ:

‘‘ಇರುವ ಕೋಗಿಲೆಯ ಬಡಿ, ಕೊಲ್ಲು; ಸತ್ತರೆ ಹುಲ್ಲು

ತುರುಕಿ ಇಡು ಸಾಲಾಗಿ ಕೊಂಬೆ ಮೇಲೆ....’’

ಸಮಾಜದ ಹೃದಯ ಹೀನತೆಗೆ ಬಲಿಯಾದ ಅನೇಕ ಕೋಗಿಲೆಗಳಲ್ಲಿ ಶಿವೇಶ್ವರನೂ ಒಬ್ಬ.

1949ರಲ್ಲಿ ಒಂದು ಸಾಯಂಕಾಲ ನಾವಿಬ್ಬರೂ ಸಾಧನಕೇರಿಯ ದಾರಿಯಲ್ಲಿ ಹೊರಟಿದ್ದಾಗ ಶಿವೇಶ್ವರನಾಡಿದ ಮಾತೊಂದು ನನಗೀಗ ನೆನಪಾಗುತ್ತಿದೆ.

‘‘ನಾನಿನ್ನು ಬಹಳ ದಿನ ಬದುಕುವುದಿಲ್ಲ ಅಂತ ಅನಿಸುತ್ತದೆ. ನನ್ನ ಮೈಯಲ್ಲಿ ಏನೂ ಉಳಿದಿಲ್ಲ. ಜೀವನದ ಘೋರ ಹೋರಾಟದಲ್ಲಿ ನನ್ನ ಶಕ್ತಿಯೆಲ್ಲ ಹನಿಹನಿಯಾಗಿ ಹೊರಟು ಹೋಯಿತು. ಸಾಯುವುದಕ್ಕೆ ಮೊದಲೊಮ್ಮೆ ಈ ಸಮಾಜದ ರಾಕ್ಷಸ ಸ್ವರೂಪವನ್ನು ಸ್ಪಷ್ಟ ಶಬ್ದಗಳಲ್ಲಿ ಬಯಲಿಗೆಳೆಯುವ ಇಚ್ಛೆಯಿದೆ. ನಾನೇನೋ ಸಾಯಬಹುದು. ಆದರೆ ನನ್ನಂತೆ ಇನ್ನಿತರರೂ ಸಾಯಬಾರದು’’.

ಶಿವೇಶ್ವರ ಸಮಾಧಾನದಿಂದ ಸಾಯಲಿಲ್ಲ. ತೃಪ್ತಿಯಿಂದ ಸಾಯಲಿಲ್ಲ, ಶಾಂತಿಯಿಂದ ಸಾಯಲಿಲ್ಲ, ಆತನ ಆತ್ಮಕ್ಕೆ-ಅದು ಇದ್ದುದೇ ನಿಜವಿದ್ದರೆ-ಶಾಂತಿಯೂ ಸಿಗುವಂತಿಲ್ಲ. ಆತನನ್ನು, ಆತನಂಥ ಲಕ್ಷಾವಧಿ ಜನರನ್ನು ಅಕಾಲಮೃತ್ಯುವಿಗೆ ಬಲಿಕೊಟ್ಟ ಈ ಕ್ರೂರ ಸಮಾಜ ವ್ಯವಸ್ಥೆ ಬುಡಮೇಲಾಗುವವರೆಗೂ ಆತನಿಗೆ ಶಾಂತಿ ಸಿಗಲಾರದು.

ಶಿವೇಶ್ವರ ತಾನೇ ಬರೆಯಬೇಕೆಂದುಕೊಂಡಿದ್ದುದನ್ನೆಲ್ಲ ನಾನಿಲ್ಲಿ ಬರೆದಿದ್ದೇನೆ. ಸತ್ತವರ ಬಗೆಗೆ ಸುಳ್ಳು ಬರೆಯಬಾರದು. ಆತ ಹೇಗಿದ್ದ, ಆತನ ವಿಚಾರಗಳು ಹೇಗಿದ್ದುವು, ಆತನು ಇಷ್ಟು ಬೇಗ ಸಾಯಲು ಏನು ಕಾರಣ ಎಂಬುದನ್ನೆಲ್ಲ ಇಲ್ಲಿ ಸ್ಪಷ್ಟವಾಗಿ ಬರೆದಿದ್ದೇನೆ.

ತನ್ನ ಕವನಸಂಕಲನವೊಂದು ಪ್ರಕಟವಾದುದನ್ನು ಕಂಡು ಸಾಯಬೇಕೆಂಬ ಅಪೇಕ್ಷೆ ಆತನಿಗಿದ್ದಿತು. ಅದೂ ವಿಫಲವಾಯಿತು.

ಕಳೆದ ವರ್ಷ ಕುಳುಕುಂದ ಶಿವರಾಯರು ‘‘ನಮ್ಮ ನಡುವಿನ ಗೋಡೆ’’ ಎಂಬ ಕಥಾ ಸಂಗ್ರಹವೊಂದನ್ನು ಪ್ರಕಟಿಸಿ ‘‘ಸಂಗಾತಿ ಶಿವೇಶ್ವರನ ಚಿರಸ್ಮರಣೆಗೆ’’ ಅದನ್ನು ಅರ್ಪಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಶಿವರಾಯರು ಹೊರಡಿಸುತ್ತಿದ್ದ ‘ಜನಶಕ್ತಿ’ ಪತ್ರಿಕೆಯ ಪ್ರಕಾಶಕನಾಗಿ ದುಡಿದಿದ್ದ ಶಿವೇಶ್ವರ. ಜನತೆಯ ಹೋರಾಟದಲ್ಲಿ ಭಾಗವಹಿಸಿ ಅದರ ಸವಿಯನ್ನೂ ಅನುಭವಿಸಿದ್ದ. ‘ಜನಶಕ್ತಿ’ ನಿಂತುಹೋಗುವ ಸಂದರ್ಭ ಬಂದಾಗ ಆತನಿಗೆ ಅತೀವ ಸಂಕಟವಾಗಿದ್ದಿತು.

ಇವರು ಕಮ್ಯುನಿಸ್ಟರು, ಅವರು ಸೋಶಿಯಲಿಸ್ಟರು ಎಂಬ ಭೇದಭಾವಕ್ಕೆ ಆತನ ಹೃದಯದಲ್ಲಿ ಎಡೆಯಿರಲಿಲ್ಲ. ಬಡವರಿಗಾಗಿ ಕೆಲಸ ಮಾಡುವವರನ್ನೆಲ್ಲ ಆತ ಪ್ರೀತಿಸುತ್ತಿದ್ದ.

ಸಾಹಿತ್ಯದಲ್ಲಿಯ ಕೆಲವರು ಹಿರಿಯರ ಬಗೆಗೂ ಆತನಿಗೆ ತುಂಬ ಪ್ರೀತಿಯಿದ್ದಿತು. ಶ್ರೀಗಳಾದ ಬೇಂದ್ರೆ, ಮಾಸ್ತಿ, ಗೋಕಾಕ, ದೀಕ್ಷಿತ ವಕೀಲರು ಎಲ್ಲರೂ ಆತನನ್ನು ಬಲ್ಲರು.

ಆತನ ಗೆಳೆಯರ ಬಳಗವೂ ಬಲು ದೊಡ್ಡದು. ‘ಶಿವೇಶ್ವರನೆಂದರೆ ಒಂದು ರತ್ನ’ ಎಂದು ಅವರೆಲ್ಲ ಹೇಳುತ್ತಿದ್ದರು.

(‘ನವಿಲೂರ ಮನೆಯಿಂದ’ ಸಂಗ್ರಹದ ಮುನ್ನುಡಿ)

Writer - ಬಸವರಾಜ ಕಟ್ಟೀಮನಿ

contributor

Editor - ಬಸವರಾಜ ಕಟ್ಟೀಮನಿ

contributor

Similar News