×
Ad

ಕಲಾವಿದ ಕೈಗನ್ನಡಿ ಇದ್ದಂತೆ: ಕವಿ ಜಯಂತ್ ಕಾಯ್ಕಿಣಿ

Update: 2018-02-04 18:28 IST

ಬೆಂಗಳೂರು, ಫೆ. 4: ಕಲಾವಿದರಿಗೆ ಕನ್ನಡಿಯೆಂಬುದು ಕಿಟಕಿಯಿದ್ದಂತೆ. ಸಾವಿರಾರು ಪಾತ್ರಗಳನ್ನು ಆ ಕನ್ನಡಿಯ ಮೂಲಕ ನೋಡುತ್ತಾರೆ. ಆತ್ಮವಿಶ್ವಾಸದ ಕೈಗನ್ನಡಿ ಇದ್ದಾಗ ಆತ ತೆರೆದುಕೊಳ್ಳಲು ಸಾಧ್ಯ ಎಂದು ಕವಿ ಜಯಂತ್ ಕಾಯ್ಕಿಣಿ ಅಭಿಪ್ರಾಯ ಪಟ್ಟಿದ್ದಾರೆ.

ರವಿವಾರ ನಗರದ ಬಸವನಗುಡಿಯ ವಾಡಿಯಾ ಸಭಾಂಗಣದಲ್ಲಿ ಸಾವಣ್ಣ ಪ್ರಕಾಶನ ವತಿಯಿಂದ ಆಯೋಜಿಸಿದ್ದ ಬಹುಭಾಷಾ ನಟ ಪ್ರಕಾಶ್ ರೈ ಅವರ ಅಂಕಣ ಬರಹಗಳ ಸಂಗ್ರಹ ‘ಇರುವುದೆಲ್ಲವ ಬಿಟ್ಟು’ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಕಲಾವಿದರು ಕನ್ನಡಿಯಿಲ್ಲದೆ ಬದುಕಲು ಅಸಾಧ್ಯ ಎಂದು ಹೇಳಿದರು.

ಮನುಷ್ಯನ ಜೀವನದುದ್ದಕ್ಕೂ ಅನೇಕ ಕಥೆಗಳಿರುತ್ತವೆ. ಬದುಕಿನಲ್ಲಿ ಎಲ್ಲವೂ ಸರಿ ಇರುವುದಿಲ್ಲ. ಆ ಎಲ್ಲವನ್ನೂ ತಿದ್ದಿ ಸರಿದಾರಿಗೆ ತೆಗೆದುಕೊಂಡು ಹೋಗುವುದೇ ಬದುಕು. ಎಲ್ಲವೂ ಸರಾಗ, ಸುಲಲಿತವಾಗಿ ಇದ್ದಿದ್ದರೆ ಬದುಕಿಗೆ ಅರ್ಥವೇ ಇರುತ್ತಿರಲಿಲ್ಲ. ಜೀವನದಲ್ಲಿ ಯಾವ ಪಾಠವನ್ನೂ ಕಲಿಯಲು ಆಗುತ್ತಿರಲಿಲ್ಲ. ಹೀಗಾಗಿ ಪ್ರತಿಯೊಬ್ಬರೂ ಅಸಾಹಿತ್ಯಿಕವಾದ ಜೀವನವನ್ನು ಸಾಹಿತ್ಯದೆಡೆಗೆ ತೆಗೆುಕೊಂಡು ಹೋಗಬೇಕಿದೆ ಎಂದರು.

ಸಾಹಿತ್ಯ ಎಂಬುದು ಬದುಕಿನಿಂದ ಬರುತ್ತದೆ. ಆಗ ಬದುಕು ಸಾಕಾರಗೊಳ್ಳುತ್ತದೆ. ಪ್ರತಿಯೊಬ್ಬರೂ ಉತ್ಕಟವಾಗಿ ಬದುಕಬೇಕು. ಆಗ ಮಾತ್ರ ಬದುಕಿನಲ್ಲಿ ಸಂಭ್ರಮ ಸಿಗುತ್ತದೆ. ಆದರೆ, ಇಂದಿನ ಯುಗ ಸಂಪೂರ್ಣ ಡಿಜಿಟಲ್ ಮಯವಾಗಿದ್ದು, ಸರ್ವಸ್ವವೇ ಅದಾಗಿದೆ. ಅದರಿಂದ ಹೊರಬಂದು, ಸಾಹಿತ್ಯ ಲೋಕಕ್ಕೂ ತೆರೆದುಕೊಳ್ಳಬೇಕು ಎಂದು ಯುವಕರಿಗೆ ಕಿವಿಮಾತು ಹೇಳಿದರು.

ಒಳ್ಳೆಯ ಬರಹಗಾರ, ಉತ್ತಮ ಜ್ಞಾನ ಹೊಂದಿರುವ ಪ್ರಕಾಶ್ ರೈ ಪುಸ್ತಕ ಬರೆಯಲು ತಡ ಮಾಡಿದ್ದು ಯಾಕೆ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿದೆ ಎಂದು ಅವರು ಹೇಳಿದರು.

ಬಹುಭಾಷಾ ನಟ ಪ್ರಕಾಶ್ ರೈ ಮಾತನಾಡಿ, ಬದುಕಿನ ಪ್ರಯಾಣ ನನ್ನ ಜೀವನವನ್ನು ತೀರ್ಮಾನಿಸಿದೆ. ನಾನು ಬದುಕನ್ನು ಬಹಳ ಎತ್ತರದಿಂದ ನೋಡಿದ್ದೇನೆ. ಜಾತ್ರೆಯಲ್ಲಿ ಅಪ್ಪನ ಹೆಗಲ ಮೇಲೆ ಕೂರುವ ಮಕ್ಕಳಂತೆ ನಾನು ನನ್ನ ಗುರು-ಹಿರಿಯರು, ಅಮ್ಮ ಹಾಗೂ ನಿಮ್ಮೆಲ್ಲರ ಹೆಗಲ ಮೇಲೆ ನಿಂತಿದ್ದೇನೆ. ಹಾಗಾಗಿ ನಾನು ಬಹು ಎತ್ತರವಾಗಿ ಕಾಣುತ್ತಿದ್ದೇನೆ. ಪ್ರೀತಿಯಿಂದ ಯಾವುದೇ ಗುಮಾನಿ ಇಲ್ಲದ ಮನಸ್ಸುಗಳು ನನ್ನ ಬಳಿ ಬರುತ್ತಿವೆ. ಅದಕ್ಕೆ ನಾನು ಋಣಿ ಎಂದು ಹೇಳಿದರು.

ಸಾಮಾನ್ಯ ಕುಟುಂಬದಿಂದ ಬಂದ ನನಗೆ ಮೊದಲು ಸಾಹಿತ್ಯದ ಗಂಧ ಗಾಳಿ ತಿಳಿದಿರಲಿಲ್ಲ. ಲೇಖಕ ಎಚ್.ಎಸ್. ವೆಂಕಟೇಶ ಮೂರ್ತಿ, ವಿಜಯಮ್ಮ ಮತ್ತಿತರರು ನನಗೆ ಈ ಸಾಹಿತ್ಯ ಲೋಕದಲ್ಲಿ ಈಜುವುದನ್ನು ಕಲಿಸಿದರು. ಅಂತಹ ಮನಸ್ಸುಗಳು ಸಿಕ್ಕಿದ್ದು ನನ್ನ ಅದೃಷ್ಟ. ಅದರಿಂದ ನಾನು ಬರೆಯುವುದನ್ನು ಕಲಿತೆ. ಮುಂದೆಯೂ ಬರೆಯುತ್ತೇನೆ ಹಾಗೂ ಬರವಣಿಗೆ ನಿಲ್ಲಿಸದಿರಲು ಪ್ರಯತ್ನಿಸುತ್ತೇನೆ ಎಂದು ನುಡಿದರು.

ಸಾಹಿತಿ ಎಚ್.ಎಸ್.ವೆಂಕಟೇಶಮೂರ್ತಿ ಮಾತನಾಡಿ, ಕಲಾವಿದ ಹಾಗೂ ಸಾಹಿತಿಯಾದವರು ಲೋಕದ ಕಣ್ಣಿನಲ್ಲಿ ಸೋತರೂ, ಇದು ನನ್ನ ಗೆಲುವಿನ ಗುರುತು ಎಂದು ಹೇಳಿಕೊಳ್ಳುವ ಮನಸ್ಥಿತಿ ಹೊಂದಿರಬೇಕು. ಅಲ್ಲದೆ, ಪ್ರಾಸವನ್ನು ಕಟ್ಟಿಕೊಡಬೇಕಾದಂತಹ ಗುಣ ಸಾಹಿತಿಗಳಿಗೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಅಕ್ಷರ ಪ್ರಪಂಚಕ್ಕೆ ಬಹುಭಾಷಾ ನಟ ಪ್ರಕಾಶ್ ರೈ ಅಂತಹವರು ಹೆಚ್ಚಿನ ಸಂಖ್ಯೆಯಲ್ಲಿ ಪಾದಾರ್ಪಣೆ ಮಾಡಬೇಕಾದ ಅಗತ್ಯವಿದೆ. ಕಾವೇರಿ ಸಮಸ್ಯೆಗೆ ನಾವೇರಿ ಕಾರಣ ಎಂಬ ಪ್ರಾಸಪದವನ್ನು ಪ್ರಕಾಶ್ ರೈ ನೀಡಿ ಪದರಚನೆಯಲ್ಲಿ ಕೌಶಲ್ಯತೆ ಹೊಂದಿದ್ದಾರೆ ಎಂಬುದಕ್ಕೆ ನಿದರ್ಶನವಾಗಿದ್ದಾರೆ ಎಂದ ಅವರು, ಅವರಲ್ಲಿನ ಕಾವ್ಯ ಹಾಗೂ ನಾಟಕ ಪ್ರೀತಿ ಈ ಪುಸ್ತಕ ಒಳಗೊಂಡಿದ್ದು, ಅತ್ಯಂತ ಅತ್ಯುತ್ತಮ ಕೃತಿಯಾಗಿದೆ ಎಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದೆ ಡಾ.ವಿಜಯಾ, ನಟ ಸುದೀಪ್, ನಟಿ ಶೃತಿ ಹರಿಹರನ್ ಸೇರಿಂತೆ ಇನ್ನಿತರರು ಉಪಸ್ಥಿತರಿದ್ದರು.

‘ಕಲೆ, ಸಾಹಿತ್ಯದಂತಹ ಅಧ್ಯಾತ್ಮ ಬೇರಾವುದೂ ಇಲ್ಲ. ಎಂದಿಗೂ ಅಪರಿಪೂರ್ಣತೆಯಲ್ಲೇ ನಿಜವಾದ ಒದ್ದಾಟವಿರುತ್ತದೆ. ಆಧ್ಯಾತ್ಮವೆಂಬುದನ್ನು ಕೇವಲ ಧಾರ್ಮಿಕ ಹಿನ್ನೆಲೆಯಲ್ಲಿ ನೋಡಬಾರದು. ನಮ್ಮ ಜೀವನದ ಸಣ್ಣಪುಟ್ಟ ಕ್ಷಣಗಳಲ್ಲೂ ಆಧ್ಯಾತ್ಮವಿರುತ್ತದೆ. ಬದುಕಿನಿಂದ ನಿಜವಾದ ಸಾಹಿತ್ಯ ಹುಟ್ಟಬೇಕೇ ಹೊರತು ಸಾಹಿತ್ಯದ ಸ್ಫೂರ್ತಿಯಿಂದ ಇನ್ನೊಂದು ಉತ್ತಮ ಸಾಹಿತ್ಯ ಹುಟ್ಟಲಾರದು’
-ಜಯಂತ್ ಕಾಯ್ಕಿಣಿ, ಕವಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News