ಕ್ಯಾನ್ಸರ್‌ಗೆ ಕಾರಣವಾಗಬಲ್ಲ ಈ 10 ಅಪಾಯಕಾರಿ ಸಂಗತಿಗಳ ಬಗ್ಗೆ ತಿಳಿದಿರಲಿ…

Update: 2018-02-04 13:09 GMT

ಕ್ಯಾನ್ಸರ್ ಇಡೀ ಜಗತ್ತನ್ನೇ ಕಾಡುತ್ತಿರುವ ಮಾರಣಾಂತಿಕ ರೋಗವಾಗಿದೆ. ಅಂಕಿಅಂಶಗಳು ಹೇಳುವಂತೆ ಹೆಚ್ಚಿನ ಪ್ರಕರಣಗಳು ಸ್ತನ, ಶ್ವಾಸಕೋಶ, ಪ್ರಾಸ್ಟೇಟ್ ಗ್ರಂಥಿ, ಕರುಳು, ಮೂತ್ರಕೋಶ, ಚರ್ಮ, ಮೂತ್ರಪಿಂಡ, ಗರ್ಭಾಶಯ ಮತ್ತು ಮೇದೋಜ್ಜೀರಕ ಗ್ರಂಥಿ ಕ್ಯಾನ್ಸರ್‌ಗಳಿಗೆ ಸಂಬಂಧಿಸಿವೆ.

2024ರ ವೇಳೆಗೆ ಜಗತ್ತಿನಲ್ಲಿ ಸುಮಾರು 19 ಮಿಲಿಯನ್ ಜನರು ಕ್ಯಾನ್ಸರ್‌ನಿಂದ ಬಳಲುತ್ತಿರುತ್ತಾರೆ ಎಂದು ಅಂದಾಜಿಸಲಾಗಿದೆ. ಕ್ಯಾನ್ಸರ್ ವಿಶ್ವಾದ್ಯಂತ ಸಾವುಗಳಿಗೆ ಎರಡನೇ ಪ್ರಮುಖ ಕಾರಣವಾಗಿದ್ದು, ಮುಂದಿನ ಎರಡು ದಶಕಗಳಲ್ಲಿ ಹೊಸ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ 22 ಮಿಲಿಯನ್‌ಗೆ ಹೆಚ್ಚಲಿದೆ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ. ಕ್ಯಾನ್ಸರ್‌ನ್ನುಂಟು ಮಾಡಬಲ್ಲ ಕೆಲವು ಅಪಾಯಕಾರಿ ಸಂಗತಿಗಳ ಬಗ್ಗೆ ಮಾಹಿತಿ ಇಲ್ಲಿದೆ....

►ಏರ್ ಫ್ರೆಷ್‌ನರ್‌ಗಳು

ಮನೆಯಲ್ಲಿನ ವಾತಾವರಣವನ್ನು ತಾಜಾ ಆಗಿರಿಸಲು ಏರ್ ಫ್ರೆಷ್‌ನರ್‌ಗಳು ಇಂದು ಸಾಮಾನ್ಯವಾಗಿಬಿಟ್ಟಿವೆ. ಈ ಏರ್ ಫ್ರೆಷ್‌ನರ್‌ಗಳು ಯಾವುದೇ ರೀತಿಯಲ್ಲಿ ವಾಯುವಿನ ಗುಣಮಟ್ಟವನ್ನು ಉತ್ತಮಗೊಳಿಸುವುದಿಲ್ಲ, ಅವು ಕೇವಲ ಕೆಟ್ಟ ವಾಸನೆಯನ್ನು ಅಡಗಿಸುತ್ತವೆ ಮತ್ತು ತಾಜಾ ವಾಯುವಿನ ಸುಳ್ಳು ಸಂವೇದನೆಯನ್ನು ನಮ್ಮಲ್ಲುಂಟು ಮಾಡುತ್ತವೆ. ಇವುಗಳಲ್ಲಿ ಅಪಾಯಕಾರಿ ಕ್ಯಾನ್ಸರ್‌ಕಾರಕ ರಾಸಾಯನಿಕಗಳಿದ್ದು, ನಮ್ಮ ಉಸಿರಿನ ಮೂಲಕ ದೇಹದಲ್ಲಿ ಸೇರಿಕೊಳ್ಳುತ್ತವೆ.

►ಮದ್ಯ ಸೇವನೆ

 ಮದ್ಯ ಸೇವನೆಯು ಕ್ಯಾನ್ಸರ್‌ನ ಅಪಾಯವನ್ನು ಹೆಚ್ಚಿಸುತ್ತದೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ದಿನಕ್ಕೆರಡು ಬಾರಿ ಮದ್ಯ ಸೇವನೆಯಿಂದ ಅನ್ನನಾಳ, ಕರುಳು, ಗುದನಾಳ ಮತ್ತು ಸ್ತನ ಕ್ಯಾನ್ಸರ್‌ಗಳ ಅಪಾಯ ಹೆಚ್ಚುತ್ತದೆ. ಮದ್ಯವು ಜಠರದಲ್ಲಿ ಆಮ್ಲಗಳ ಉತ್ಪತ್ತಿಯನ್ನು ಉತ್ತೇಜಿಸುತ್ತದೆ ಮತ್ತು ಇವು ಬಾಯಿಯಿಂದ ಗುದದ್ವಾರದವರೆಗಿನ ಎಲ್ಲ ರಚನೆಗಳನ್ನೂ ಒಳಗೊಂಡಿರುವ ಗ್ಯಾಸ್ಟ್ರೋಇಂಟೆಸ್ಟೈನಲ್ ಟ್ರಾಕ್ಟ್‌ನ ಒಳಭಿತ್ತಿಗಳಿಗೆ ಹಾನಿಯನ್ನುಂಟು ಮಾಡುತ್ತವೆ.

►ಗರ್ಭ ನಿರೋಧಕ ಮಾತ್ರೆಗಳು

ಮಹಿಳೆಯರು ಗರ್ಭ ನಿರೋಧಕ ಮಾತ್ರೆಗಳನ್ನು ಸೇವಿಸುವುದರಿಂದ ಸ್ತನ, ಗರ್ಭಕಂಠ ಮತ್ತು ಯಕೃತ್ತಿನ ಕ್ಯಾನ್ಸರ್‌ಗಳ ಅಪಾಯವು ಹೆಚ್ಚುತ್ತದೆ. ಅಲ್ಲದೆ ಮಕ್ಕಳಿಲ್ಲದ ಮತ್ತು ಗರ್ಭ ಧರಿಸಲು ಸಾಧ್ಯವಾಗದ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಉಂಟಾಗುವ ಅಪಾಯ ಇತರರಿಗಿಂತ ಹೆಚ್ಚಾಗಿರುತ್ತದೆ.

►ಮೋಂಬತ್ತಿಗಳು

ಪ್ಯಾರಾಫಿನ್ ವ್ಯಾಕ್ಸ್‌ನಿಂದ ಹೊರಸೂಸುವ ಹೊಗೆಯು ಕ್ಯಾನ್ಸರ್‌ಕಾರಕಗಳು ಮತ್ತು ಇತರ ಪಳೆಯುಳಿಕೆ ಇಂಧನ ಘಟಕಗಳನ್ನು ಒಳಗೊಂಡಿರುತ್ತವೆ. ನೀವು ನಿಯಮಿತವಾಗಿ ಕ್ಯಾಂಡಲ್ ಲಿಟ್ ಪಾರ್ಟಿಗಳಿಗೆ ಹೋಗುವವರಾದರೆ ಪ್ಯಾರಾಫಿನ್ ವ್ಯಾಕ್ಸ್‌ನಿಂದ ತಯಾರಾಗುವ ಮೋಂಬತ್ತಿ ನಿಮ್ಮ ಪಾಲಿಗೆ ಹಂತಕನಾಗಬಹುದು. ಇದರ ಬದಲು ಶರೀರಕ್ಕೆ ಕಡಿಮೆ ಹಾನಿಯನ್ನುಂಟು ಮಾಡುವ ಜೇನುಮೇಣದ ಮೋಂಬತ್ತಿಗಳನ್ನು ಬಳಸಬಹುದು.

►ಕಾರಿನ ಹೊಗೆ

ಡೀಸೆಲ್ ಇಂಧನದ ಹೊಗೆಗೆ ಹೆಚ್ಚಾಗಿ ತೆರೆದುಕೊಂಡಿರುವವರು ಶ್ವಾಸನಾಳದ ಕ್ಯಾನ್ಸರ್ ಮತ್ತು ಇತರ ಉಸಿರಾಟ ಸಂಬಂಧಿ ರೋಗಗಳಿಗೆ ತುತ್ತಾಗುತ್ತಾರೆ. ಡೀಸೆಲ್ ಮತ್ತು ಪೆಟ್ರೋಲ್‌ಗಳು ವಿಷಕಾರಿಯಾದ ಕಾರ್ಬನ್ ಮಾನೊಕ್ಸೈಡ್ ಮತ್ತು ಬೆಂಝೀನ್ ಸೇರಿದಂತೆ ಹೈಡ್ರೋಕಾರ್ಬನ್‌ಗಳನ್ನು ಬಿಡುಗಡೆಗೊಳಿಸುತ್ತವೆ.

►ಸೌಂದರ್ಯ ಸಾಧನಗಳು

  ಸೌದರ್ಯವನ್ನು ಹೆಚ್ಚಿಸಿಕೊಳ್ಳಲು ಬಳಸುವ ಇವು ಅಪಾಯವನ್ನು ತರುತ್ತವೆ ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ. ಕೆಲವು ಸೌಂದರ್ಯ ವರ್ಧಕಗಳು ತೊಳೆದರೂ ಹೋಗದೇ ದೇಹದಲ್ಲಿ ಉಳಿದುಕೊಂಡಿರುತ್ತವೆ. ಅವುಗಳಲ್ಲಿ ಬಳಸಲಾಗುವ ಪರಿಮಳ ವಸ್ತುಗಳ ಫಾರ್ಮ್ಯುಲಾಗಳನ್ನು ತಯಾರಕರು ಕಾಸ್ಮೆಟಿಕ್ ಕಂಪನಿಗಳ ಜೊತೆಗೆ ಹಂಚಿಕೊಳ್ಳುವುದಿಲ್ಲ. ಹೀಗಾಗಿ ಈ ಪರಿಮಳ ವಸ್ತುಗಳನ್ನು ನಂಬುವಂತಿಲ್ಲ. ಚರ್ಮದ ಕ್ಯಾನ್ಸರ್ ಅಪಾಯವನ್ನು ತಗ್ಗಿಸಲು ಸಾವಯವ ಸೌಂದರ್ಯವರ್ಧಕಗಳನ್ನು ಬಳಸುವುದು ಒಳ್ಳೆಯದು.

►ಗ್ರಿಲ್‌ನಲ್ಲಿ ಸಿದ್ಧಗೊಂಡ ಆಹಾರ

ಮೀನು, ಚಿಕನ್ ಮತ್ತು ಮಟನ್‌ಗಳಂತಹ ಆಹಾರಗಳನ್ನು ಗ್ರಿಲ್‌ನಲ್ಲಿ ತಯಾರಿಸಿದಾಗ ಅವು ಸ್ವಲ್ಪ ಮಟ್ಟಿಗೆ ಸುಟ್ಟು ಕೆಲವು ಕಡೆಗಳಲ್ಲಿ ಕಪ್ಪಾಗುತ್ತವೆ. ಇದು ಆಹಾರಕ್ಕೆ ವಿಶೇಷ ಸ್ವಾದವನ್ನು ನೀಡುತ್ತದೆಯಾದರೂ, ಜಠರ, ಕರುಳು ಮತ್ತು ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್‌ಗಳ ಅಪಾಯವನ್ನು ಹೆಚ್ಚಿಸುತ್ತದೆ.

►ಕ್ಯಾನ್ಡ್ ಫುಡ್

ಡಬ್ಬಿಗಳಲ್ಲಿ ಬರುವ ಸಂಸ್ಕರಿತ ಆಹಾರಗಳು ಅನಾರೋಗ್ಯಕಾರಿಯಾಗಿವೆ. ಹಾನಿಕಾರಕ ರಾಸಾಯನಿಕಗಳಿಂದ ತುಂಬಿರುವ ಪ್ಲಾಸ್ಟಿಕ್ ಕೋಟಿಂಗ್ ಹೊಂದಿರುವ ಲೋಹದ ಡಬ್ಬಿಗಳಲ್ಲಿರುವುದರಿಂದ ಈ ಆಹಾರಗಳು ಅಪಾಯಕಾರಿಯಾಗಿವೆ. ಇಂತಹ ಆಹಾರಗಳ ಸೇವನೆಯು ಹಾರ್ಮೋನ್‌ಗಳ ವ್ಯತ್ಯಯ ಮತ್ತು ಡಿಎನ್‌ಎ ಬದಲಾವಣೆಗಳನ್ನುಂಟು ಮಾಡುತ್ತವೆ ಮತ್ತು ಇವು ಸ್ತನ ಕ್ಯಾನ್ಸರ್‌ಗೆ ಕಾರಣವಾಗುತ್ತವೆ.

►ಡಯಟ್ ಸೋಡಾ

ಡಯಟ್ ಸೋಡಾ ಕೃತಕ ಸಿಹಿಕಾರಕಗಳನ್ನೊಳಗೊಂಡಿದ್ದು, ಇವು ಮೇದೋಜ್ಜೀರಕ ಗ್ರಂಥಿಯ ಮತ್ತು ಇತರ ಕ್ಯಾನ್ಸರ್‌ಗಳ ಅಪಾಯಗಳನ್ನು ಹೆಚ್ಚಿಸುತ್ತವೆ. ಡಯಟ್ ಸೋಡಾ ಮೂತ್ರಕೋಶ ಕ್ಯಾನ್ಸರ್ ಮತ್ತು ಮಿದುಳಿನಲ್ಲಿ ಗಡ್ಡೆಗಳಿಗೂ ಕಾರಣವಾಗುತ್ತದೆ ಎನ್ನುವುದನ್ನು ಹಲವಾರು ಅಧ್ಯಯನಗಳು ತೋರಿಸಿವೆ.

►ಸನ್‌ಸ್ಕ್ರೀನ್

ಚರ್ಮದ ಕ್ಯಾನ್ಸರ್ ಮತ್ತು ಇತರ ಚರ್ಮರೋಗಗಳನ್ನು ತಡೆಯಲು ಹೆಚ್ಚಿನವರು ಸನ್‌ಸ್ಕ್ರೀನ್ ಬಳಸುತ್ತಾರೆ. ಆದರೆ ಸನ್‌ಸ್ಕೀನ್ ಉಂಟು ಮಾಡುವ ಅಪಾಯ ಗೊತ್ತಾದರೆ ಆಘಾತವಾದೀತು. ಅದು ಡಿಎನ್‌ಎ ಬದಲಾವಣೆಗಳು ಮತ್ತು ಕ್ಯಾನ್ಸರ್ ಬೆಳವಣಿಗೆಗೆ ಕಾರಣವಾಗುವ ಫ್ರೀ ರ್ಯಾಡಿಕಲ್ಸ್‌ಗಳನ್ನು ಉತ್ಪಾದಿಸುವ ಝಿಂಕ್ ಆಕ್ಸೈಡ್‌ನ್ನು ಒಳಗೊಂಡಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News