15 ಲಕ್ಷ ರೂ.ಹಣ ಯಾವಾಗ ಬರುತ್ತದೆ: ಶಾಸಕ ಮುನಿರತ್ನ ಪ್ರಶ್ನೆ

Update: 2018-02-04 13:14 GMT

ಬೆಂಗಳೂರು, ಫೆ. 4: ಮುಂದಿನ ದಿನಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯವರು ಮತಯಾಚನೆಗೆ ಬಂದ ಸಂದರ್ಭದಲ್ಲಿ ನಮ್ಮ ಖಾತೆಗೆ 15 ಲಕ್ಷ ರೂ.ಹಣ ಯಾವಾಗ ಬರುತ್ತದೆ ಎಂದು ಪ್ರಶ್ನಿಸಿ ಎಂದು ಶಾಸಕ ಮುನಿರತ್ನ ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.

ರವಿವಾರ ಯಶವಂತಪುರದಲ್ಲಿ ಹಮ್ಮಿಕೊಂಡಿದ್ದ ರಾಜರಾಜೇಶ್ವರಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದ್ದಾರೆ. ದೇಶದಲ್ಲಿ ಹಸಿ ಹಸಿ ಸುಳ್ಳುಗಳನ್ನು ಹೇಳಿಕೊಂಡು ದೇಶ-ವಿದೇಶ ಪ್ರವಾಸ ಮಾಡಿಕೊಂಡು ಅಬ್ಬರದ ಪ್ರಚಾರ ಪಡೆಯುವುದರಲ್ಲಿ ನಿರತವಾಗಿದ್ದು, ಅದೇ ಸಾಧನೆ ಎಂಬಂತೆ ಬಿಂಬಿಸುತ್ತಿದ್ದಾರೆ. ಹೀಗಾಗಿ, ನೀವು ಮೊದಲು ಹಣ ತುಂಬಿಸಿ ನಂತರ ನಮ್ಮ ಬಳಿಗೆ ಬನ್ನಿ ಎಂದು ಹೇಳಿ ಎಂದು ತಿಳಿಸಿದರು.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ನೂರು ದಿನಗಳಲ್ಲಿ ಕಪ್ಪುಹಣವನ್ನು ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಾಕುತ್ತೇವೆಂದು ಹೇಳಿಕೊಂಡು ಮತ ಪಡೆದು ಜನರು ವಂಚಿಸಿರುವ ಮೋದಿ, ದೇಶದಲ್ಲಿ ಸುಳ್ಳು ಹೇಳುವ ಪರೀಕ್ಷೆ ನಡೆಸಿದರೆ ಅವರು ಪ್ರಥಮ ರ್ಯಾಂಕ್‌ನಲ್ಲಿ ಉತ್ತೀರ್ಣರಾಗುತ್ತಾರೆ ಎಂದು ಅವರು ಟೀಕಿಸಿದರು.

500, 1 ಸಾವಿರ ರೂ.ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ್ದರಿಂದ ಬಡವರು, ಜನ ಸಾಮಾನ್ಯರು ಸರತಿ ಸಾಲಿನಲ್ಲಿ ನಿಂತು ಹಣ ಪಡೆಯಬೇಕಾಯಿತೇ ಹೊರತು, ಶ್ರೀಮಂತರು, ಉದ್ಯಮಿಗಳು ಬಿಸಿಲಿನಲ್ಲಿ, ಸಾಲಿನಲ್ಲಿ ನಿಂತು ಹಣ ಪಡೆಯಲಿಲ್ಲ. ಶ್ರೀಮಂತರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ 1 ಸಾವಿರ ನೋಟ್‌ಗಳನ್ನು ರದ್ದು ಮಾಡಿ, 2 ಸಾವಿರ ಮುಖಬೆಲೆಯ ನೋಟುಗಳನ್ನು ಜಾರಿ ಮಾಡಿದ್ದಾರೆ. ಇದರಿಂದ ಸಾಮಾನ್ಯ ಜನರಿಗೆ ಯಾವುದೇ ಅನುಕೂಲವಾಗುವುದಿಲ್ಲ ಎಂದರು.

ಬೆಂ.ಉತ್ತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ರಾಜ್‌ಕುಮಾರ್ ಮಾತನಾಡಿ, ದೇಶದ ಬಿಜೆಪಿ ಅಧಿಕಾರವಿರುವ ರಾಜ್ಯಗಳಲ್ಲಿ ಬಡವರು, ರೈತರು, ಹಿಂದುಳಿದವರು, ದಲಿತರ ಮೇಲೆ ಹಲ್ಲೆ, ಮೋಸ, ಕೊಲೆ ನಡೆಯುತ್ತಿದ್ದರೂ ಬಿಜೆಪಿ ನಾಯಕರು ರಾಜ್ಯದಲ್ಲಿ ಸುಳ್ಳುಗಳನ್ನು ಹೇಳಿಕೊಂಡು ಸುತ್ತಾಡುತ್ತಿದ್ದಾರೆ. ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆಂದು ಅವರು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News