×
Ad

ಆರ್ಯ ವೈಶ್ಯ ಜನಾಂಗದ ಬೇಡಿಕೆ ಈಡೇರಿಕೆಗೆ ಬದ್ಧ: ಸಿ.ಎಂ ಸಿದ್ಧರಾಮಯ್ಯ

Update: 2018-02-04 18:48 IST

ಬೆಂಗಳೂರು, ಫೆ.4: ಜಾತಿ ಪ್ರಮಾಣ ಪತ್ರದಲ್ಲಿ ಆರ್ಯವೈಶ್ಯ ಎಂದು ಬದಲಾಯಿಸಿ, ಜನಾಂಗದ ಬೇಡಿಕೆಯನ್ನು ಈಡೇರಿಸಲು ರಾಜ್ಯ ಸರಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ರವಿವಾರ ನಗರದ ಸ್ವತಂತ್ರ ಉದ್ಯಾನವನದಲ್ಲಿ ಆರ್ಯವೈಶ್ಯ ಮಹಾಸಭಾ ಆಯೋಜಿಸಿದ್ದ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಜಾತಿ ಪ್ರಮಾಣ ಪತ್ರಗಳಲ್ಲಿ ವೈಶ್ಯ ಎಂದು ನಮೂದಿಸುವುದರ ಬದಲು, ಆರ್ಯವೈಶ್ಯ ಎಂದು ನಮೂದಿಸಿ ಸರಕಾರದ ಸವಲತ್ತುಗಳನ್ನು ನೀಡಬೇಕೆಂದು ಈಗಾಗಲೇ ಜನಾಂಗದವರು ಮನವಿ ಮಾಡಿದ್ದಾರೆ. ಈ ಬಗ್ಗೆ ಈಗಾಗಲೇ ಸರಕಾರದ ಮಟ್ಟದಲ್ಲಿ ಕಡತ ಸಿದ್ಧವಾಗಿದ್ದು, ಮುಂದಿನ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.

ಎಲ್ಲ ಸಮುದಾಯದಲ್ಲೂ ಬಡವರಿದ್ದಾರೆ. ಅವಕಾಶ ವಂಚಿತ ಸಮುದಾಯಗಳಿಗೆ ಅವಕಾಶ ದೊರೆಯಬೇಕು ಎಂಬುದು ನನ್ನ ಆಶಯ. ಹೀಗಾಗಿ, ಆರ್ಯವೈಶ್ಯ ಸಮುದಾಯಕ್ಕೆ ಎಲ್ಲ ನೆರವು ಒದಗಿಸಲು ಸರಕಾರ ಬದ್ಧವಾಗಿದೆ. ಈ ಸಮುದಾಯದ ಕಟ್ಟಡ ನಿರ್ಮಾಣಕ್ಕೆ ಹಣ, ಜಾಗ, ವಾಸವಿ ಅಕಾಡೆಮಿ ಸ್ಥಾಪನೆ ಸೇರಿದಂತೆ ಎಲ್ಲ ಸವಲತ್ತುಗಳನ್ನು ಒದಗಿಸಲಾಗುವುದು. ದುರ್ಬಲ ವರ್ಗದ ಜನಾಂಗದ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸುವುದಾಗಿ ಸಿದ್ಧರಾಮಯ್ಯ ಭರವಸೆ ನೀಡಿದರು.

ಮಹಾನ್ ವ್ಯಕ್ತಿಗಳ ಕೊಡುಗೆ: ಆರ್ಯವೈಶ್ಯ ಸಮುದಾಯ ಮಹಾತ್ಮ ಗಾಂಧಿ, ರಾಮ ಮನೋಹರ್ ಲೋಹಿಯಾ ರಂತಹ ಮಹಾನ್ ವ್ಯಕ್ತಿಗಳನ್ನು ದೇಶಕ್ಕೆ ನೀಡಿದೆ. ಹೀಗಾಗಿ, ಸಮಾಜಕ್ಕೆ ಆರ್ಯವೈಶ್ಯರ ಕೊಡುಗೆ ಅಪಾರ ಎಂದು ಶ್ಲಾಘಿಸಿದರು.

ಆರ್ಯವೈಶ್ಯ ಸಮಾಜದ ಮುಖಂಡರು ಪ್ರಾಸ್ತಾವಿಕ ಭಾಷಣದಲ್ಲಿ ಸಿದ್ಧರಾಮ್ಯಯ್ಯ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದಿದ್ದಾರೆ. ಹೀಗಾಗಿ ಅವರಿಗೆ ಧನ್ಯವಾದ ಎಂದರು.

ಈ ಸಂದರ್ಭದಲ್ಲಿ ಆರ್ಯವೈಶ್ಯ ಜನಾಂಗದದಲ್ಲಿ ಸಾಧನೆಗೈದಿರುವ ಹಿರಿಯರಿಗೆ ಸನ್ಮಾನಿಸಲಾಯಿತು. ಸಭಾಪತಿ ಡಿ.ಎಚ್.ಶಂಕರಮೂರ್ತಿ, ಶಾಸಕ ಎಚ್.ಪಿ. ಮಂಜುನಾಥ್, ಆರ್ಯವೈಶ್ಯ ಸಮಾಜದ ಅಧ್ಯಕ್ಷ ಆರ್.ಪಿ.ರವಿಶಂಕರ್, ಪ್ರಧಾನ ಕಾರ್ಯದರ್ಶಿ ಎಸ್.ಕೆ ಶೇಷಾಚಲ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News