×
Ad

ಜಾತ್ಯತೀತ ನೆಲದಿಂದ ಕಾಂಗ್ರೆಸ್ ಪ್ರಚಾರ ಕಾರ್ಯಾರಂಭ: ಡಿ.ಕೆ ಶಿವಕುಮಾರ್

Update: 2018-02-04 18:53 IST

ಹೊಸಪೇಟೆ, ಫೆ. 4: ವಿಜಯನಗರ ಸಾಮ್ರಾಜ್ಯದ ನೆಲ ಜಾತ್ಯತೀತತೆಗೆ ಹೆಸರಾಗಿದ್ದು, ಅಂತಾರಾಷ್ಟ್ರೀಯ ಪ್ರವಾಸಿ ಕೇಂದ್ರವೂ ಹೌದು. ಹೀಗಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೊಸಪೇಟೆಯಿಂದ ಚುನಾವಣಾ ಪ್ರಚಾರ ಕಾರ್ಯ ಆರಂಭಿಸಲಿದ್ದಾರೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಉತ್ತಮ ಆಡಳಿತ ನೀಡುವ ಉದ್ದೇಶದೊಂದಿಗೆ ಕಾಂಗ್ರೆಸ್ ಪ್ರಚಾರ ಕಾರ್ಯ ಆರಂಭ ಮಾಡಲಿದ್ದು, ಪಕ್ಷ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ಸೇರ್ಪಡೆ: ಕೂಡ್ಲಿಗಿ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಶುಭ ಮುಹೂರ್ತದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಲಿದ್ದಾರೆ. ಜತೆಗೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಇನ್ನೂ ಕೆಲವು ಹಾಲಿ ಹಾಗೂ ಮಾಜಿ ಶಾಸಕರು ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎಂದು ಅವರು ತಿಳಿಸಿದರು.

ಜೆಡಿಎಸ್‌ನ ಏಳು ಬಂಡಾಯ ಶಾಸಕರು ಸೇರಿದಂತೆ ಯಾರಿಗೂ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡುವುದು ಖಚಿತವಾಗಿಲ್ಲ. ಎಲ್ಲರೂ ಯಾವುದೇ ಷರತ್ತು ಇಲ್ಲದೇ ಪಕ್ಷ ಸೇರಿದ್ದಾರೆ. ಪಕ್ಷದ ಸಂಘಟನೆಗೆ ಅವರು ಶ್ರಮಿಸುವ ಭರವಸೆ ಇದೆ ಎಂದು ಶಿವಕುಮಾರ್ ತಿಳಿಸಿದರು.

ಆರೋಪ ಸಾಬೀತಾಗಿಲ್ಲ: ಆನಂದ್ ಸಿಂಗ್, ನಾಗೇಂದ್ರ ಮೇಲೆ ಯಾವುದೇ ಆರೋಪಗಳಿಲ್ಲ. ಈಗ ಕೇಳಿಬಂದಿರುವ ಆರೋಪಗಳು ಈವರೆಗೂ ಸಾಬೀತಾಗಿಲ್ಲ. ಸಂತೋಷ್ ಲಾಡ್, ನನ್ನ ಮೇಲೆಯೂ ಆರೋಪವಿತ್ತು. ಆದರೆ, ಅವು ಸಾಬೀತಾಗಲಿಲ್ಲ. ಹೀಗಾಗಿ ಮತ್ತೆ ನಮ್ಮನ್ನು ಸಚಿವರನ್ನಾಗಿ ಮಾಡಲಾಯಿತು. ಜತೆಗೆ ಪಕ್ಷದ ಸಂಘಟನೆಯ ಜವಾಬ್ದಾರಿಯನ್ನೂ ವಹಿಸಲಾಗಿದೆ ಎಂದು ಪ್ರತಿಕ್ರಿಯಿಸಿದರು.

ಈ ಸಂದರ್ಭದಲ್ಲಿ ಸಚಿವ ಸಂತೋಷ್ ಲಾಡ್, ಶಾಸಕ ನಾಗೇಂದ್ರ, ಮಾಜಿ ಸಚಿವ ಆನಂದ್‌ಸಿಂಗ್, ಶಾಸಕ ಭೀಮಾನಾಯ್ಕ ಸೇರಿದಂತೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News