ಕಾಂಗ್ರೆಸ್ ಸರಕಾರದ ಅಂತ್ಯಕ್ಕೆ ಕ್ಷಣಗಣನೆ: ಪ್ರಧಾನಿ ನರೇಂದ್ರ ಮೋದಿ
ಬೆಂಗಳೂರು, ಫೆ. 4: ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರದ ಅಂತ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ ಮಾಡಬೇಕು. ಮಾತ್ರವಲ್ಲ, ದೇಶದಲ್ಲಿ ಕಾಂಗ್ರೆಸ್ ಸಂಸ್ಕೃತಿಯನ್ನು ಅಂತ್ಯಗೊಳಿಸುವ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ರವಿವಾರ ಇಲ್ಲಿನ ಅರಮನೆ ಮೈದಾನದಲ್ಲಿ ಬಿಜೆಪಿ ಏರ್ಪಡಿಸಿದ್ದ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು ‘ಕರ್ನಾಟಕದ ನನ್ನ ಬಂಧು-ಭಗಿನಿಯರೇ, ನಿಮಗೆಲ್ಲ ನನ್ನ ನಮಸ್ಕಾರಗಳು’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದರು.
ನಾಡಪ್ರಭು ಕೆಂಪೇಗೌಡ, ಮಹಾತ್ಮ ಶರಣ ಬಸವೇಶ್ವರ, ಶ್ರೀ ಮಾದಾರ ಚನ್ನಯ್ಯ, ಸಂಗೊಳ್ಳಿ ರಾಯಣ್ಣ, ಸರ್.ಎಂ.ವಿಶ್ವೇಶ್ವರಯ್ಯರಂತಹ ಮಹಾಪುರುಷರ ನಾಡು ಕರ್ನಾಟಕ ಎಂದು ಬಣ್ಣಿಸಿದ ನರೇಂದ್ರ ಮೋದಿ, ನವ ಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನೆ ಮಾಡಿ, ಬಿಜೆಪಿ ಗೆಲ್ಲಿಸಿ ಎಂದು ಕರೆ ನೀಡಿದರು.
ಭ್ರಷ್ಟಾಚಾರದಲ್ಲಿ ದಾಖಲೆ: ಕರ್ನಾಟಕದಲ್ಲಿ ಯುವಕರ ಹತ್ಯೆಯಾಗುತ್ತಿದ್ದು, ರಾಜ್ಯ ಅಪರಾಧ ಮುಕ್ತವಾಗುವ ಜೊತೆಗೆ ಭ್ರಷ್ಟಾಚಾರ ಮುಕ್ತ ಹಾಗೂ ಕಾಂಗ್ರೆಸ್ ಮುಕ್ತ ಆಗುವ ಸಮಯ ಸಮೀಪಿಸುತ್ತಿದೆ ಎಂದ ಮೋದಿ, ಭ್ರಷ್ಟಾಚಾರದಲ್ಲಿ ರಾಜ್ಯ ಸರಕಾರ ಹೊಸ ದಾಖಲೆಗಳನ್ನು ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರದಲ್ಲಿ ಶೇ.10ರಷ್ಟು ಲಂಚವನ್ನು ಕೊಡದೇ ಯಾವುದೇ ಕೆಲಸ ನಡೆಯುವುದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಭ್ರಷ್ಟಾಚಾರ, ಅಲ್ಪಸಂಖ್ಯಾತರ ತುಷ್ಟೀಕರಣ ಮತ್ತು ಜಾತಿವಾದಿ ರಾಜಕಾರಣ ಮಾಡುತ್ತಿದೆ. ಆದುದರಿಂದ ರಾಜ್ಯದ ಜನತೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮತಗಳ ಮೂಲಕವೇ ಉತ್ತರ ನೀಡಬೇಕು ಎಂದ ಮೋದಿ, ರಾಜ್ಯ ಸರಕಾರ ಮರಳು, ಕಲ್ಲು ಮತ್ತು ಕಬ್ಬಿಣದ ಅದಿರು ಗಣಿಗಾರಿಕೆ ಮಾಫಿಯಾದಲ್ಲಿ ತೊಡಗಿದೆ ಎಂದು ಆರೋಪಿಸಿದರು.
ಕರ್ನಾಟಕವನ್ನು ಅಪರಾಧ, ಭ್ರಷ್ಟಾಚಾರ ಹಾಗೂ ಕಾಂಗ್ರೆಸ್ ಮುಕ್ತಗೊಳಿಸಲು ಇನ್ನೂ ಹೆಚ್ಚು ಸಮಯ ಉಳಿದಿಲ್ಲ. ರಾಜ್ಯದಲ್ಲಿನ ವಂಶ ಪರಂಪರೆಯ ರಾಜಕಾರಣದಿಂದ ರಾಜ್ಯವನ್ನು ದೂರವಿಡಬೇಕು ಎಂದ ಅವರು, ಕರ್ನಾಟಕದಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ಹೇಳಿದರು.
ಸಮಾರೋಪ ಸಮಾರಂಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಅನಂತಕುಮಾರ್, ಅನಂತಕುಮಾರ್ ಹೆಗಡೆ, ಡಿ.ವಿ. ಸದಾನಂದಗೌಡ, ಸಂಸದರಾದ ಶ್ರೀರಾಮುಲು, ಶೋಭಾ ಕರಂದ್ಲಾಜೆ, ಪ್ರಹ್ಲಾದ್ ಜೋಶಿ, ಮಾಜಿ ಸಿಎಂ ಎಸ್.ಎಂ.ಕೃಷ್ಣ, ವಿಪಕ್ಷ ನಾಯಕರಾದ ಜಗದೀಶ್ ಶೆಟ್ಟರ್, ಈಶ್ವರಪ್ಪ, ವಿ.ಶ್ರೀನಿವಾಸ ಪ್ರಸಾದ್, ಆರ್.ಅಶೋಕ್, ಅರವಿಂದ ಲಿಂಬಾವಳಿ, ಸಿ.ಟಿ. ರವಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
‘ಕರ್ನಾಟಕದಲ್ಲಿನ ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರದ ಕೆಸರಿನಲ್ಲಿ ಕಮಲ (ಬಿಜೆಪಿ)ಅರಳಲಿದ್ದು, ಕರ್ನಾಟಕವನ್ನು ಅಭಿವೃದ್ಧಿಯ ಹೊಸ ದಿಕ್ಕಿನಲ್ಲಿ ತೆಗೆದುಕೊಂಡು ಹೋಗುವ ದೃಷ್ಟಿಯಿಂದ, ವಿವಿಧ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳುವ ಅನಿವಾರ್ಯತೆ ಇದೆ. ಹೀಗಾಗಿ ಬಿಜೆಪಿಯನ್ನು ಬೆಂಬಲಿಸಿ’
-ನರೇಂದ್ರ ಮೋದಿ, ಪ್ರಧಾನಮಂತ್ರಿ