ಕೇಂದ್ರದ ಹಣವನ್ನು ರಾಜ್ಯ ಸರಕಾರ ಸದ್ಬಳಕೆ ಮಾಡಿಕೊಂಡಿಲ್ಲ: ಪ್ರಧಾನಿ ಮೋದಿ
ಬೆಂಗಳೂರು, ಫೆ. 4: ಕೇಂದ್ರ ಸರಕಾರ ಸ್ವಚ್ಛ ಭಾರತ್ ಯೋಜನೆಯಡಿಯಲ್ಲಿ ಶೌಚಾಲಯಗಳ ನಿರ್ಮಾಣ, ಉಜ್ವಲ್ ಯೋಜನೆಯಡಿಯಲ್ಲಿ ಎಲ್.ಪಿ.ಜಿ ಸಿಲಿಂಡರ್ ಪೂರೈಕೆ ಸೇರಿ ವಿವಿಧ ಯೋಜನೆಗಳಡಿಯಲ್ಲಿ ಕರ್ನಾಟಕ ಸರಕಾರಕ್ಕೆ ಸಾಕಷ್ಟು ಅನುದಾನ ನೀಡಿದರೂ ಸರಕಾರ ಸದುಪಯೋಗಪಡಿಸಿಕೊಂಡಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ರವಿವಾರ ಅರಮನೆ ಮೈದಾನದಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೇಂದ್ರ ಸರಕಾರದ ವಿವಿಧ ಯೋಜನೆಗಳು ಹಾಗೂ ಕರ್ನಾಟಕದ ಅಭಿವೃದ್ಧಿಗಾಗಿ 2ಲಕ್ಷ ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಹಣ ನೀಡಲಾಗಿದೆ. ಆದರೆ, ರಾಜ್ಯ ಸರಕಾರ ಈ ಹಣವನ್ನು ಸದುಪಯೋಗಪಡಿಸಿಕೊಂಡಿಲ್ಲ ಎಂದು ದೂರಿದರು.
ಬೆಂಗಳೂರಿನಲ್ಲಿ ಸಬ್ ಅರ್ಬನ್ ರೈಲ್ವೆ ಯೋಜನೆಯನ್ನು ಜಾರಿಗೆ ತರುವ ಉದ್ದೇಶದಿಂದಾಗಿ ಕೇಂದ್ರ ಸರಕಾರ 17 ಸಾವಿರ ಕೋಟಿ ರೂ.ನೀಡಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿಯಿದ್ದಾಗ 950ಕಿ.ಮೀ.ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಿತ್ತು. ಆದರೆ, ನಮ್ಮ ಸರಕಾರ ಅಧಿಕಾರಕ್ಕೆ ಬಂದ ಮೇಲೆ 1,600 ಕಿ.ಮೀ.ರಸ್ತೆ ನಿರ್ಮಾಣ ಮಾಡಿದೆ ಎಂದು ಅಂಕಿ-ಅಂಶಗಳನ್ನು ನೀಡಿದರು.
ಹವಾಯಿ ಚಪ್ಪಲಿ ಧರಿಸುವವನೂ ವಿಮಾನದಲ್ಲಿ ಹಾರಾಟ ನಡೆಸಬೇಕು ಎಂಬುವುದು ನನ್ನ ಕನಸಾಗಿದೆ. ಹೀಗಾಗಿಯೇ, ಕೇಂದ್ರ ಸರಕಾರ ಕೃಷಿ, ಗ್ರಾಮೀಣಾಭಿವೃದ್ಧಿ, ರಸ್ತೆ, ರೈಲ್ವೆ, ವಿಮಾನ ನಿಲ್ದಾಣಕ್ಕೆ ಹೆಚ್ಚು ನೆರವು ನೀಡುತ್ತಿದೆ. ರಾಜ್ಯದ ರೈತರು ಗೊಬ್ಬರಕ್ಕಾಗಿ ಲಾಠಿ ಏಟು ತಿನ್ನುವ ಅವಶ್ಯಕತೆ ಇಲ್ಲ. ರೈತರು ಬೆಳೆದ ಉತ್ಪನ್ನಗಳ ಮಾರಾಟಕ್ಕೆ ಅಲೆದಾಡಬೇಕಿತ್ತು. ಆದರೆ, ಕೇಂದ್ರ ಇದನ್ನು ತಪ್ಪಿಸಿದೆ. ಅಲ್ಲದೆ, ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಸೇರಿ ಅನೇಕ ಯೋಜನೆ ಜಾರಿಗೊಳಿಸಿದ್ದೇವೆ ಎಂದು ಹೇಳಿದರು.
ದೇಶದಲ್ಲಿ ಎಲ್ಲೆ ಹೋದರೂ ಟೊಮೆಟೋ, ಆಲೂಗೆಡ್ಡೆ, ಈರುಳ್ಳಿ ಕಾಣಸಿಗುತ್ತದೆ. ಈ ಬೆಳೆಗಳಿಗಾಗಿ ಆಪರೇಷನ್ ಗ್ರೀನ್ ಯೋಜನೆ ಜಾರಿಗೊಳಿಸಲಾಗಿದೆ. ಇದರಿಂದ ಕೃಷಿಕರ ಆದಾಯ ಹೆಚ್ಚಿದೆ. ದೇಶ ಅಭಿವೃದ್ಧಿಯಾಗಲು ಮಧ್ಯಮ ವರ್ಗ ಅಭಿವೃದ್ಧಿ ಯಾಗಬೇಕು. ಮಧ್ಯಮ ವರ್ಗದ ಯುವಕರಿಗೆ ಉದ್ಯೋಗ ಸಿಗಬೇಕು. ಅದಕ್ಕಾಗಿ ಸಿಲ್ಕ್ ಇಂಡಿಯಾ ಯೋಜನೆ ಜಾರಿಗೊಳಿಸಲಾಗಿದೆ. ಸರಕಾರ ಮೇಕ್ ಇಂಡಿಯಾ ಅಭಿಯಾನ ನಡೆಸುತ್ತಿದೆ. ಇದರಿಂದ ದೇಶದ ಚಿಕ್ಕ-ಚಿಕ್ಕ ಉದ್ಯಮಗಳಿಗೆ ಅನುಕೂಲವಾಗಿದೆ. ದೇಶದ ಯುವ ಜನರ ಕೈ ಬಲಪಡಿಸಿದ್ದೇವೆ ಎಂದು ಹೇಳಿದರು.
ಟ್ರಾಫಿಕ್ ಜಾಮ್: ರಾಜ್ಯ ಬಿಜೆಪಿ ಘಟಕವು ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಆಗಮನದ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಅರಮನೆ ಮೈದಾನಕ್ಕೆ ಜನ ಸಾಗರವೇ ಹರಿದು ಬಂದಿತ್ತು. ಇದರಿಂದಾಗಿ, ತುಮಕೂರು ರಸ್ತೆ, ಬಳ್ಳಾರಿ ರಸ್ತೆ ಹಾಗೂ ಬೆಂಗಳೂರು ನಗರದ ವಿವಿಧ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು.