×
Ad

ಸಂಘ ಪರಿವಾರದಿಂದಲೇ ಕಾನೂನು ಸುವ್ಯವಸ್ಥೆ ಹಾಳು: ರಾಮಲಿಂಗಾ ರೆಡ್ಡಿ

Update: 2018-02-04 20:44 IST

ಬೆಂಗಳೂರು,ಫೆ.04: ಬಿಜೆಪಿ-ಸಂಘಪರಿವಾರದಿಂದಲೇ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಈ ಸಂಬಂಧ ಫೆ.5 ರಂದು ಅಂಕಿ-ಅಂಶ ಬಿಡುಗಡೆ ಮಾಡುತ್ತೇನೆ ಎಂದು ಗೃಹ ಸಚಿವ ರಾಮಲಿಂಗರೆಡ್ಡಿ, ಬಿಜೆಪಿ ಮುಖಂಡರಿಗೆ ಎಚ್ಚರಿಕೆ ನೀಡಿದ್ದಾರೆ.

ರವಿವಾರ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ಹಿನ್ನೆಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಪರಿವರ್ತನಾ ಯಾತ್ರೆ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಿಲ್ಲ ಎಂದಿದ್ದಾರೆ. ಆದರೆ, ಇಲ್ಲಿ ಬಿಜೆಪಿ-ಸಂಘಪರಿವಾರದಿಂದಲೇ ಸುವ್ಯವಸ್ಥೆ ಕೆಟ್ಟಿದೆ ಎಂದು ಹೇಳಿದರು.

ಕೇಂದ್ರದ ಎನ್‌ಸಿಆರ್‌ಪಿ ಸರ್ವೆ ಪ್ರಕಾರ, ಅಪರಾಧ ಪ್ರಕರಣಗಳಲ್ಲಿ ಬಿಜೆಪಿ ಆಡಳಿತವಿರುವ ಉತ್ತರಪ್ರದೇಶ ಮೊದಲ ಸ್ಥಾನದಲ್ಲಿದೆ. ಇನ್ನು ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್ ರಾಜ್ಯವೂ ಮುಂದಿವೆ ಎಂದ ಅವರು, ಬಿಜೆಪಿ ಅಧಿಕಾರದಲ್ಲಿದ್ದಾಗ ಬೆಂಗಳೂರಿನಲ್ಲಿ 97 ಕೊಲೆಗಳಾಗಿದ್ದವು. ಆ ಸಂದರ್ಭದಲ್ಲಿ ಅಪರಾಧ ಪ್ರಮಾಣ ಶೇ.6.7ರಷ್ಟಿತ್ತು ಎಂದು ಹೇಳಿದರು.

ಗುಜರಾತ್‌ನವರು ಎನ್‌ಕೌಂಟರ್ ಸ್ಪೆಷಲಿಸ್ಟ್‌ಗಳು. ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ 60 ಮಂದಿ ಕರ ಸೇವಕರು ರೈಲಿನಲ್ಲಿ ಮೃತಪಟ್ಟರು. 2 ಸಾವಿರ ಜನರ ಕೊಲೆಯಾಗಿತ್ತು. ಜಗತ್ತಿನ್ಯಾದ್ಯಂತ ಗುಜರಾತ್ ಕುಖ್ಯಾತಿ ಪಡೆದಿತ್ತು. ಆ ಸಂದರ್ಭದಲ್ಲಿ ಮೋದಿಗೆ ಅಮೇರಿಕ ವೀಸಾ ನೀಡಲು ನಿರಾಕರಿಸಲಾಗಿತ್ತು. ಪ್ರಧಾನಿಯಾದ ಬಳಿಕವಷ್ಟೆ ವೀಸಾ ದೊರೆಯಿತು ಎಂದು ಟೀಕಿಸಿದರು.

ರಾಜ್ಯ ಸರಕಾರ ಹಗರಣ, ಭ್ರಷ್ಟಾಚಾರದಲ್ಲಿ ತೊಡಗಿದೆ ಎಂಬ ಹೇಳಿಕೆಗೆ ತಿರುಗೇಟು ನೀಡಿದ ರಾಮಲಿಂಗರೆಡ್ಡಿ, ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರ ಆರೋಪದಿಂದ ಸಿಎಂ ಯೂಡಿಯರಪ್ಪ ಸೇರಿ ಹಲವು ನಾಯಕರು ಜೈಲು ಸೇರಿದ್ದರು. ವೇದಿಕೆಯಲ್ಲಿ ಯಡಿಯೂರಪ್ಪನವರನ್ನು ಮಧ್ಯದಲ್ಲಿ ಕೂರಿಸಿಕೊಂಡು ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಪ್ರಧಾನಿಗಳಿಗೆ ಯಾವ ಹಕ್ಕಿದೆ ಎಂದು ಪ್ರಶ್ನಿಸಿದರು.

ಚುನಾವಣೆ ಸಂದರ್ಭದಲ್ಲಿ ಮೋದಿ ಚುನಾವಣೆ ಗಿಮಿಕ್ ಮಾಡಲು ಬಂದಿದ್ದಾರೆ ಎಂದ ಅವರು, ಗುಜರಾತ್‌ನಲ್ಲಿ ಮೋದಿ 10 ವರ್ಷಗಳ ಕಾಲ ಆಡಳಿತದಲ್ಲಿದ್ದರು. ಆ ಅವಧಿಯಲ್ಲಿ ತಮ್ಮ ಭ್ರಷ್ಟಾಚಾರ ಹೊರ ಬರುತ್ತದೆ ಎಂಬ ಕಾರಣಕ್ಕೆ ಲೋಕಾಯುಕ್ತರನ್ನು ನೇಮಕ ಮಾಡಲಿಲ್ಲ. ಲೋಕಾಯುಕ್ತರನ್ನು ಮಾಡದವರು ಭ್ರಷ್ಟಾಚಾರದ ಬಗ್ಗೆ ಮಾತನಾಡುವುದಕ್ಕೆ ಯಾವ ನೈತಿಕತೆ ಇದೆ ಎಂದು ಕೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News