ರಾಜ್ಯದ ಆರೂವರೆ ಕೋಟಿ ಜನತೆಗೆ ಅಪಮಾನ ಮಾಡಿದ ಪ್ರಧಾನಿ ಮೋದಿ: ಡಾ.ಜಿ.ಪರಮೇಶ್ವರ್

Update: 2018-02-04 15:24 GMT

ಬೆಂಗಳೂರು, ಫೆ.4: ಕರ್ನಾಟಕವನ್ನು ಅಪರಾಧ ರಾಜ್ಯ ಹಾಗೂ ಭ್ರಷ್ಟಾಚಾರದಲ್ಲಿ ನಂಗಾನಾಚ್ ಎಂದು ರಾಜಕೀಯ ಭಾಷಣ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ರಾಜ್ಯದ ಆರೂವರೆ ಕೋಟಿ ಜನತೆಗೆ ಅಪಮಾನ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಕಿಡಿಕಾರಿದ್ದಾರೆ.

ರವಿವಾರ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದೊಡ್ಡ ಮಟ್ಟದಲ್ಲಿ ಭ್ರಷ್ಟಾಚಾರ ಮಾಡಿ ಜೈಲಿಗೆ ಹೋದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪರನ್ನು ಪಕ್ಕದಲ್ಲಿಯೆ ಕೂರಿಸಿಕೊಂಡು ಈ ರೀತಿ ರಾಜ್ಯ ಸರಕಾರದ ಮೇಲೆ ಆರೋಪಿಸುವುದು ಸರಿಯಲ್ಲ ಎಂದರು.

ರಾಜ್ಯ ಸರಕಾರ ಪ್ರತಿಯೊಂದರಲ್ಲಿ ಶೇ.10ರಷ್ಟು ಕಮಿಷನ್ ಪಡೆಯುತ್ತದೆ ಎಂದು ಹಸಿ ಸುಳ್ಳು ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ಯಾವ ಯೋಜನೆಯಲ್ಲಿ, ಯಾರು, ಯಾವಾಗ ಕಮಿಷನ್ ಪಡೆದರು ಎಂದು ನಿಖರವಾಗಿ ಹೇಳಬೇಕು. ಕೇವಲ ತಮ್ಮ ಸ್ವಾರ್ಥಕ್ಕಾಗಿ ಜವಾಬ್ದಾರಿ ಸ್ಥಾನದಲ್ಲಿರುವವರು ರಾಜಕೀಯ ಭಾಷಣ ಮಾಡಿ, ರಾಜ್ಯದ ಜನತೆಯನ್ನು ದಾರಿ ತಪ್ಪಿಸುವುದು ಸರಿಯಲ್ಲವೆಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಇಡೀ ದೇಶದಲ್ಲಿ ಉತ್ತರ ಪ್ರದೇಶವೊಂದರಲ್ಲಿಯೇ ಶೇ.9.5ರಷ್ಟು ಅಪರಾಧ ನಡೆಯುತ್ತಿದೆ. ನಂತರದ ಅಪರಾಧದ ಸ್ಥಾನವನ್ನು 15ವರ್ಷದಿಂದ ಅಧಿಕಾರ ನಡೆಸುತ್ತಿರುವ ಮಧ್ಯಪ್ರದೇಶ ಹೊಂದಿದೆ. ತಮ್ಮದೇ ಆಳ್ವಿಕೆಯ ರಾಜ್ಯಗಳಲ್ಲಿ ಅಪರಾಧ ಪ್ರಮಾಣ ತುಂಬಿ ತುಳುಕುತ್ತಿರುವಾಗ ಕರ್ನಾಟಕವನ್ನು ಅಪರಾಧಗಳ ರಾಜ್ಯವೆಂದು ಹೇಳಲು ಹೇಗೆ ಸಾಧ್ಯ ಎಂದು ಹೇಳಿದರು.

ಸಬರಬನ್ ರೈಲ್ವೆ ಯೋಜನೆಗೆ 17ಸಾವಿರ ಕೋಟಿ ರೂ. ನೀಡಿದ್ದೇವೆಂದು ಬಿಜೆಪಿ ಬಿಟ್ಟಿ ಪ್ರಚಾರದಲ್ಲಿ ತೊಡಗಿದೆ. ಆದರೆ, ಇದರಲ್ಲಿ ಕೇಂದ್ರ ಸರಕಾರದ ಪಾಲು ಕೇವಲ ಶೇ.20ರಷ್ಟು ಮಾತ್ರ. ಉಳಿದ ಶೇ.20ರಷ್ಟು ರಾಜ್ಯ ಸರಕಾರ ಹಾಗೂ ಶೇ.60ರಷ್ಟು ಹಣಕಾಸು ಸಂಸ್ಥೆಗಳದ್ದಾಗಿದೆ ಎಂದು ಅವರು ಹೇಳಿದರು.

ಧಾರವಾಡ ಸೇರದಂತೆ ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಎದ್ದಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಮಹದಾಯಿ ಯೋಜನೆಯಲ್ಲಿ ಮಧ್ಯೆ ಪ್ರವೇಶಿಸಿ ಸಮಸ್ಯೆ ಬಗೆ ಹರಿಸುತ್ತಾರೆ, ರಾಜ್ಯಕ್ಕೆ ನೀರು ಒದಗಿಸುತ್ತಾರೆ ಎಂದು ನಮ್ಮ ಜನತೆ ನಂಬಿದ್ದರು. ಆದರೆ, ತಮ್ಮ ಭಾಷಣದಲ್ಲಿ ಮಹದಾಯಿ ಕುರಿತು ಒಂದು ಪದವನ್ನೂ ಆಡಿಲ್ಲ ಎಂದು ಅವರು ಆರೋಪಿಸಿದರು. 

‘ಗೋವಾ ಸರಕಾರ ರಾಜ್ಯಕ್ಕೆ ನಿಯಮ ಬದ್ಧವಾಗಿ ಬರಬೇಕಾದ ಮಹದಾಯಿ ನೀರನ್ನು ಕೊಡಲು ತೀರ್ಮಾನಿಸಲಿ. ಒಂದು ವೇಳೆ ಗೋವಾ ಕಾಂಗ್ರೆಸ್ ಇದಕ್ಕೆ ವಿರೋಧ ವ್ಯಕ್ತಪಡಿಸಿದರೆ ನಾವು ಅವರಿಗೆ ಮನವರಿಕೆ ಮಾಡಿಕೊಡುತ್ತೇವೆ. ಆದರೆ, ಕೇಂದ್ರ ಸರಕಾರ ಹಾಗೂ ಗೋವಾ ಸರಕಾರ ಇದಕ್ಕೆ ಒಪ್ಪದೆ ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿದೆ’
-ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News