ಫೆ.10ರಿಂದ 4 ದಿನ ರಾಹುಲ್ ರಾಜ್ಯ ಪ್ರವಾಸ: ಡಾ.ಜಿ.ಪರಮೇಶ್ವರ್

Update: 2018-02-04 15:32 GMT

ಬೆಂಗಳೂರು, ಫೆ. 4: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಫೆ.10ರಿಂದ ನಾಲ್ಕು ದಿನಗಳ ಕಾಲ ಬಳ್ಳಾರಿ, ಕೊಪ್ಪಳ, ರಾಯಚೂರು ಹಾಗೂ ಕಲಬುರ್ಗಿ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ರವಿವಾರ ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಫೆ.10ರಂದು ಹೊಸಪೇಟೆಗೆ ಆಗಮಿಸಲಿದ್ದಾರೆ. ಅನಂತರ ಬಸ್‌ನಲ್ಲಿ ಕೊಪ್ಪಳದ ಮುನಿರಾಬಾದ್‌ನಲ್ಲಿ ಪ್ರವಾಸ ಮಾಡಲಿದ್ದು, ಮಾರ್ಗ ಮಧ್ಯೆ ಉಲಿಗೆಮ್ಮ ಹಾಗೂ ಗವಿಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ, ಕೊಪ್ಪಳ ಹಾಗೂ ಕುಕನೂರಿನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಲಿದ್ದಾರೆ.

ಫೆ.11ಕ್ಕೆ ಬಸ್ ಮೂಲಕ ಕುಷ್ಟಗಿ, ಕನಕಗಿರಿಗೆ ಭೇಟಿ ಕೊಟ್ಟು, ಕಾರಟಗಿಯಲ್ಲಿ ಪಕ್ಷದ ಕಾರ್ಯಕರ್ತರ ಬೃಹತ್ ಸಾರ್ವಜನಿಕ ಸಭೆಯಲ್ಲಿ ಮಾತನಾಡಲಿದ್ದಾರೆ. ಅನಂತರ ಹಂಚಿನಾಳ ಕ್ಯಾಂಪ್‌ನಲ್ಲಿ ಜನರ ಭೇಟಿ ಹಾಗೂ ಸಿಂಧನೂರಿನಲ್ಲಿ ರೈತ ಪ್ರತಿನಿಧಿಗಳ ಜೊತೆ ರಾಹುಲ್ ಗಾಂಧಿ ಸಂವಾದ ನಡೆಸಲಿದ್ದಾರೆ ಎಂದು ಅವರು ಹೇಳಿದರು.

ಫೆ.12ಕ್ಕೆ ರಾಯಚೂರು ಹಾಗೂ ದೇವದುರ್ಗದಲ್ಲಿ ಪರಿಶಿಷ್ಟ ಪಂಗಡದ ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ. ಅನಂತರ ಜೇವರ್ಗಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಲಿದ್ದು, ಅಂದು ಸಂಜೆ ಕಲಬುರ್ಗಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಬಂದೆನವಾಝ್ ದರ್ಗಾಕ್ಕೆ ಭೇಟಿ ನೀಡಲಿದ್ದಾರೆ.

ಫೆ.13ಕ್ಕೆ ಮಾಜಿ ಸಚಿವ ಖಮರುಲ್ ಇಸ್ಲಾಂ ನಿವಾಸಕ್ಕೆ ಭೇಟಿ ನೀಡಿ, ಎಚ್.ಕೆ ಸೊಸೈಟಿ ಯಲ್ಲಿ ಚರ್ಚೆ ನಡೆಸಲಿದ್ದಾರೆ. ನಂತರ 12ಗಂಟೆಗೆ ಹೆಲಿಕಾಪ್ಟರ್ ಮೂಲಕ ಬೀದರ್ ಜಿಲ್ಲೆಯ ಬಸವಕಲ್ಯಾಣಕ್ಕೆ ಭೇಟಿ ನೀಡಿ ಅಲ್ಲಿಂದ ಹೈದರಾಬಾದ್ ಮೂಲಕ ಹೊಸದಿಲ್ಲಿಗೆ ಪ್ರಯಾಣ ಬೆಳೆಸಲಿದ್ದಾರೆಂದು ಪರಮೇಶ್ವರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News