×
Ad

ನಮ್ಮದು ಭ್ರಷ್ಟಾಚಾರ ಮುಕ್ತ ಸರಕಾರ: ಸಿ.ಎಂ ಸಿದ್ದರಾಮಯ್ಯ

Update: 2018-02-04 21:05 IST

ಬೆಂಗಳೂರು, ಫೆ. 4: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಯಾವುದೇ ಭ್ರಷ್ಟಾಚಾರ ಪ್ರಕರಣಗಳಿಗೆ ಸಿಲುಕದೆ ದೇಶದಲ್ಲಿಯೇ ಹಗರಣ ಮುಕ್ತ ಸರಕಾರ ಎನಿಸಿಕೊಂಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ರವಿವಾರ ಹೊಸಕೋಟೆಯ ಚೆನ್ನಭೈರೇಗೌಡ ಕ್ರೀಡಾಂಗಣದಲ್ಲಿ ದಿ ಟೌನ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್‌ನ ಶತಮಾನೋತ್ಸವ ಸಮಾರಂಭದ ಉದ್ಘಾಟನೆ, ಡಾ.ಬಿ.ಆರ್.ಅಂಬೇಡ್ಕರ್ ಭವನ, ರೈತ ಸಂಪರ್ಕ ಕೇಂದ್ರಗಳು ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತಾನಾಡಿದ ಅವರು, ಕ್ಷೀರಭಾಗ್ಯ, ವಿದ್ಯಾಸಿರಿ, ಅನ್ನಭಾಗ್ಯ, ಋಣಮುಕ್ತ, ರೈತರ ಸಾಲಮನ್ನಾ ಸೇರಿದಂತೆ ಹಲವಾರು ಜನಪರ ಯೋಜನೆಳನ್ನು ಜಾರಿ ಮಾಡಲಾಗಿದೆ ಎಂದರು.

ಎಲ್ಲಾ ವರ್ಗದ ಜನರ ಆಶೋತ್ತರಗಳನ್ನು ಈಡೇರಿಸಿ ನುಡಿದಂತೆ ನಡೆದ ಸರಕಾರ ನಮ್ಮ ಸರಕಾರವಾಗಿದೆ. ಅಲ್ಲದೆ, ಮುಂದಿನ ಬಜೆಟ್‌ನಲ್ಲಿ ಎಲ್ಲ ಪಡಿತರ ಚೀಟಿದಾರರಿಗೆ ಉಚಿತ ಆರೋಗ್ಯ ಸೇವೆಯನ್ನು ಒದಗಿಸುವ ಕುರಿತು ಘೋಷಣೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದರು.

ಕಾರ್ಯಕ್ರಮಕ್ಕೂ ಮೊದಲು ಇಲ್ಲಿನ ನಗರಸಭೆ ವತಿಯಿಂದ ತಾಲೂಕು ಕಚೇರಿ ಆವರಣದಲ್ಲಿ ಅಂದಾಜು ರೂ. 73.76 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಇಂದಿರಾ ಕ್ಯಾಂಟಿನ್ ಉದ್ಘಾಟಿಸಿದರು. ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

ವೇದಿಕೆಯಲ್ಲಿ ಕೃಷಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ, ಸಚಿವರಾದ ರೋಷನ್ ಬೇಗ್, ಸಂಸದ ಎಂ.ವೀರಪ್ಪಮೊಯ್ಲಿ, ವಿಧಾನ ಪರಿಷತ್ ಸದಸ್ಯ ಎ.ಆರ್.ರಮೇಶ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ವಿ.ಪ್ರಸಾದ್, ಜಿಲ್ಲಾಧಿಕಾರಿ ಎಸ್. ಪಾಲಯ್ಯ, ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಶಶಿಧರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News