ಪದವೀಧರ ಶಿಕ್ಷಕರ ಸಂಘದ ಸತ್ಯಾಗ್ರಹಕ್ಕೆ ಎಐಡಿವೈಓ ಬೆಂಬಲ
ಬೆಂಗಳೂರು, ಫೆ.4: ಸೇವಾನಿರತ ಪದವಿಧರ ಪ್ರಾಥಮಿಕ ಶಿಕ್ಷಕರು ಕರ್ನಾಟಕ ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಪದವಿಧರ ಶಿಕ್ಷಕರ ಸಂಘದ ನೇತೃತ್ವದಲ್ಲಿ ಫೆ.5ರಂದು ನಗರದ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಂಡಿರುವ ಸತ್ಯಾಗ್ರಹಕ್ಕೆ ಎಐಡಿವೈಓ ಬೆಂಬಲ ಸೂಚಿಸಿದೆ.
ಇತ್ತೀಚೆಗೆ ಪ್ರಾಥಮಿಕ ಶಾಲಾ ಶಿಕ್ಷಣದ ಸಂರಚನೆಯಲ್ಲಿ ಕರ್ನಾಟಕ ಸರಕಾರ ಮಹತ್ತರ ಬದಲಾವಣೆ ತರಲು ಮುಂದಾಗಿದೆ. ಸರಕಾರ ರೂಪಿಸಿರುವ ನಿಯಮಾವಳಿಯಲ್ಲಿ ಪ್ರಾಥಮಿಕ ಶಿಕ್ಷಕರನ್ನು 1ನೆ ತರಗತಿಯಿಂದ 5ನೇ ತರಗತಿಗಳಿಗೆ ಬೋಧಿಸುವವರು ಹಾಗೂ 6 ನೇತರಗತಿಯಿಂದ 8ನೇ ತರಗತಿಗಳಿಗೆ ಬೋಧಿಸುವವರೆಂದು ವರ್ಗೀಕರಿಸಲಾಗಿದೆ. ಈ ದಿಡೀರ್ ಬದಲಾವಣೆಯಿಂದ ಪದವಿ ಪಡೆದ ಸೇವಾನಿರತ ಶಿಕ್ಷಕರು ಬಡ್ತಿಯಿಂದ ವಂಚಿತರಾಗುತ್ತಿದ್ದಾರೆ. ಹೀಗಾಗಿ ಬಡ್ತಿ ವಂಚಿತ ಸೇವಾನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸೂಕ್ತ ನ್ಯಾಯ ಸಿಗಬೇಕೆಂದು ಸಂಘಟನೆ ಒತ್ತಾಯಿಸಿದೆ.
ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಸಂದರ್ಭದಲ್ಲಿ 1 ರಿಂದ 7ನೇ ತರಗತಿ ಬೋಧಕರೆಂದು ಪರಿಗಣಿಸಲಾಗಿತ್ತು. ಆದರೆ ಈಗ 1 ರಿಂದ 5 ತರಗತಿಗೆ ಸೀಮಿತಗೊಳಿಸಲಾಗಿದೆ. 6 ರಿಂದ 8ನೇ ತರಗತಿಗಳಿಗೆ ಹೊಸದಾಗಿ ಪದವೀಧರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ 10 ರಿಂದ 25 ವರ್ಷ ಸೇವಾ ಅನುಭವವಿದ್ದು, ಪದವಿ ಪಡೆದಿರುವ ಸೇವಾನಿರತ ಶಿಕ್ಷಕರಿಗೆ 6 ರಿಂದ 8ನೇ ತರಗತಿಗಳಿಗೆ ಬೋಧಿಸಲು ಮುಂಬಡ್ತಿ ನೀಡಬೇಕಿತ್ತು. ಆದರೆ ಅವರಲ್ಲಿ ಶೇ.25ರಷ್ಟು ಶಿಕ್ಷಕರನ್ನು ಮಾತ್ರ ಬಡ್ತಿಗೆ ಪರಿಗಣಸಿ ಉಳಿದ ಶೇ.75ರಷ್ಟು ಹುದ್ದೆಗಳನ್ನು ಹೊಸ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಸರಕಾರ ರೂಪಿಸಿರುವ ನಿಯಮವಳಿಯಲ್ಲಿ ಲೋಪವಿದೆ ಎಂದು ಪ್ರಕಟನೆ ತಿಳಿಸಿದೆ.