ಪ್ರಧಾನಿ ನರೇಂದ್ರ ಮೋದಿಗೆ ಮುತ್ತಿಗೆ ಯತ್ನ: ಹೋರಾಟಗಾರರ ಬಂಧನ

Update: 2018-02-04 18:12 GMT

ಬೆಂಗಳೂರು, ಫೆ. 4: ಮಹಾದಾಯಿ ಯೋಜನೆ ಜಾರಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೌನ ಮುರಿದು ಮಧ್ಯಪ್ರವೇಶಿಸಬೇಕೆಂದು ಆಗ್ರಹಿಸಿ ರೈತರು, ಕನ್ನಡ ಪರ ಹೋರಾಟಗಾರರು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಅವರನ್ನು ಪೊಲೀಸರು ಬಂಧಿಸಿದರು.

ರವಿವಾರ ನಗರದ ಫ್ರೀಡಂ ಪಾರ್ಕ್‌ನಲ್ಲಿ ಜಮಾಯಿಸಿದ ಉತ್ತರ ಕರ್ನಾಟಕದ ರೈತ ಹೋರಾಟಗಾರರು, ಕನ್ನಡಪರ ಸಂಘಟನೆಗಳ ಕಾರ್ಯಕರ್ತರು, ‘ಕರಾಳ ದಿನ ಆಚರಿಸಿ’ ಕಪ್ಪು ಬಾವುಟ ಪ್ರದರ್ಶಿಸಿದರು. ಬೆಂಗಳೂರಿಗೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಮಹದಾಯಿ ನದಿ ನೀರು ಹಂಚಿಕೆ ವಿವಾದ ಕುರಿತು ಮಾತನಾಡಬೇಕು ಎಂದು ಒತ್ತಾಯಿಸಿದರು.

 ಕಪ್ಪು ಬಾವುಟ, ಕಪ್ಪುಪಟ್ಟಿ, ಕಪ್ಪುಬಟ್ಟೆ ಧರಿಸಿ ಧರಣಿ ನಡೆಸಿದ ಹೋರಾಟಗಾರರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿದರು. ನರೇಂದ್ರ ಮೋದಿ ಅವರು ರಾಜ್ಯಕ್ಕೆ 7 ಬಾರಿ ಭೇಟಿ ನೀಡಿದ್ದರೂ, ಮಹಾದಾಯಿ, ಕಳಸಾ ಬಂಡೂರಿ ನೀರಿನ ವಿಚಾರದಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ಗಮನ ಹರಿಸದೆ ತಾರತಮ್ಯ ವೆಸಗಿದ್ದಾರೆ ಎಂದು ದೂರಿದರು.

  ಆ ಬಳಿಕ ಸಂಜೆ 4 ಗಂಟೆ ಸುಮಾರಿಗೆ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಬಿಜೆಪಿ ಪರಿವರ್ತನಾ ಯಾತ್ರೆ ಸಮಾರಂಭಕ್ಕೆ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನೂರಾರು ಕನ್ನಡ ಪರ ಹೋರಾಟಗಾರರು, ರೈತರು ಮುತ್ತಿಗೆ ಹಾಕಲು ಯತ್ನಿಸಿದಾಗ ಫ್ರೀಡಂ ಪಾರ್ಕ್‌ನಲ್ಲೇ ತಡೆದ ಪೊಲೀಸರು, ಅವರನ್ನು ವಶಕ್ಕೆ ಪಡೆದರು.

 ಇದಕ್ಕೂ ಮೊದಲು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್, ಮೋದಿ ಅವರು ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಇಂದು ಕರಾಳ ದಿನವನ್ನಾಗಿ ಆಚರಿಸುತ್ತಿದ್ದೇವೆ.ಅವರು ಮಹಾದಾಯಿ ಸಮಸ್ಯೆ ಕುರಿತು ಮಾತನಾಡುವರು ಎನ್ನುವ ನಿರೀಕ್ಷೆ ನಮ್ಮಲ್ಲಿದೆ ಎಂದು ಹೇಳಿದರು.

ರಾಜ್ಯ ಬಿಜೆಪಿ ನಾಯಕರಿಗೆ ನಾಲೀಗೆ ಭದ್ರವಿಲ್ಲ. ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಪ್ರತಿ ವಿಚಾರದಲ್ಲೂ ಮಧ್ಯೆ ಪ್ರವೇಶಿಸುವ ಅವರನ್ನು ನಿಮ್ಹಾನ್ಸ್ ಆಸ್ಪತ್ರೆಗೆ ಸೇರಿಸಬೇಕು ಎಂದ ಅವರು, ಲೋಕಸಭಾ ಸದಸ್ಯರ ವಿರುದ್ಧವೂ ಪ್ರತಿಭಟನೆ ಮುಂದುವರಿಸಲಾಗುವುದು ಎಂದು ವಾಟಾಳ್ ಹೇಳಿದರು.

ಕೇಂದ್ರ ಸರಕಾರ ಬಜೆಟ್‌ನಲ್ಲಿ ರಾಜ್ಯಕ್ಕೆ ಕುಡಿಯುವ ನೀರು ಸೇರಿದಂತೆ ಯಾವುದೇ ಜನಪರ ಯೋಜನೆಗಳನ್ನು ಪ್ರಕಟಿಸಿಲ್ಲ.ಅಲ್ಲದೆ, ಮಹಾದಾಯಿ ವಿವಾದ ಪರಿಹಾರಕ್ಕೆ ಮಧ್ಯಸ್ಥಿಕೆ ವಹಿಸುವಂತೆ ಆಗ್ರಹಿಸಿ ಕರ್ನಾಟಕ ಬಂದ್ ನಡೆಸಿದ್ದರೂ, ಪ್ರಧಾನಿ ಅವರು ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ ಎಂದ ಅವರು, ಬೆಂಗಳೂರು ಬಂದ್ ನಡೆಸುವ ಬಗ್ಗೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ತಡೆಯೊಡ್ಡಿದವು ಎಂದು ಆಪಾದಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು, ಕನ್ನಡ ಪರ ಹೋರಾಟಗಾರದ ಕೆ.ಆರ್ ಕುಮಾರ್, ಪ್ರವೀಣ್‌ಕುಮಾರ್ ಶೆಟ್ಟಿ, ಮಂಜುನಾಥ್ ದೇವ್, ಎಚ್‌.ವಿ ಗಿರೀಶ್‌ಗೌಡ, ರೈತ ಮುಖಂಡರಾದ ವಿಜಯ ಕುಲಕರ್ಣಿ ಬಾರ್‌ಕೋಲ್, ವೀರಣ್ಣ ಮಳಗಿ ಸೇರಿ ಪ್ರಮುಖರಿದ್ದರು.

‘ಮೋದಿ ವಿರುದ್ಧ ನಿರಂತರ ಹೋರಾಟ’

ಬೆಂಗಳೂರಿಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮಹಾದಾಯಿ ನದಿ ನೀರು ಹಂಚಿಕೆ ಕುರಿತು ಮಾತನಾಡಬೇಕು.ಇಲ್ಲದಿದ್ದಲ್ಲಿ, ಮೋದಿ ವಿರುದ್ಧ ನಿರಂತರ ಹೋರಾಟ ಮಾಡಲಾಗುವುದು. ಈ ಬಗ್ಗೆ ಫೆ.5ರಂದು ಸಭೆ ನಡೆಸಲಾಗುವುದು ಎಂದು ವಾಟಾಳ್ ನಾಗರಾಜ್ ತಿಳಿಸಿದರು.

‘ಬಿಜೆಪಿಗರನ್ನು ನಿಮ್ಹಾನ್ಸ್‌ಗೆ ಸೇರಿಸಿ’

‘ರಾಜ್ಯ ಬಿಜೆಪಿ ನಾಯಕರಿಗೆ ನಾಲೀಗೆ ಭದ್ರವಿಲ್ಲ. ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಪ್ರತಿ ವಿಚಾರದಲ್ಲೂ ಮಧ್ಯೆ ಪ್ರವೇಶಿಸುವ ಅವರನ್ನು ನಿಮ್ಹಾನ್ಸ್ ಆಸ್ಪತ್ರೆಗೆ ಸೇರಿಸಬೇಕು’.

-ವಾಟಾಳ್ ನಾಗರಾಜ್, ಕನ್ನಡಪರ ಹೋರಾಟಗಾರರು

ಮೋದಿಗೆ ಪೂಜೆ

ಪ್ರತಿಭಟನಾ ನಿರ ಕೆಲ ತ ಕನ್ನಡಪರ ಹೋರಾಟಗಾರರು ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರಕ್ಕೆ ಹೂವಿನ ಹಾರ ಹಾಕಿ, ತಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಜೊತೆಗೆ ಮಾತನಾಡಬೇಕೆಂದು ಪೂಜೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News